​ಕುಲಭೂಷಣ್ ಜಾದವ್ ಮೇಲ್ಮನವಿ ಅವಕಾಶ ಕಲ್ಪಿಸುವ ಮಸೂದೆಗೆ ಪಾಕಿಸ್ತಾನ ಸಂಸತ್ ಅಸ್ತು

Update: 2021-06-11 04:04 GMT

ಇಸ್ಲಾಮಾಬಾದ್, ಜೂ.11: ಬೇಹುಗಾರಿಕೆ ಆರೋಪದಲ್ಲಿ ಪಾಕಿಸ್ತಾನದಲ್ಲಿ ಮರಣ ದಂಡನೆ ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಅವರು ಈ ತೀರ್ಪಿನ ವಿರುದ್ಧ ದೇಶದ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶ ಕಲ್ಪಿಸುವ ಮಸೂದೆಯನ್ನು ಪಾಕಿಸ್ತಾನದ ಸಂಸತ್ತು ಅನುಮೋದಿಸಿದೆ. ಅಂತಾರಾಷ್ಟ್ರೀಯ ನ್ಯಾಯಾಲಯ (ಐಸಿಐ) ನೀಡಿದ ತೀರ್ಪಿನ ಪರಾಮರ್ಶೆ ಮತ್ತು ಮರು ಪರಿಗಣನೆಗೆ ಕೂಡಾ ಮಸೂದೆ ಅವಕಾಶ ಕಲ್ಪಿಸಿದೆ.

ಕುಲಭೂಷಣ್ ಜಾಧವ್ ಅವರನ್ನು ಬಲೂಚಿಸ್ತಾನದಲ್ಲಿ 2016ರಲ್ಲಿ ಬಂಧಿಸಲಾಗಿದೆ ಎಂದು ಪಾಕಿಸ್ತಾನ ಹೇಳಿಕೊಂಡಿದ್ದು, ಬೇಹುಗಾರಿಕೆ ಆರೋಪದಲ್ಲಿ ಮಿಲಿಟರಿ ಕೋರ್ಟ್ ಅವರಿಗೆ ಮರಣ ದಂಡನೆ ಶಿಕ್ಷೆ ವಿಧಿಸಿದೆ. ಪಾಕಿಸ್ತಾನದ ಆರೋಪವನ್ನು ಭಾರತ ತಿರಸ್ಕರಿಸಿದ್ದು, ಇರಾನ್‌ನ ಚಾಬಹಾರ್ ಬಂದರಿನಲ್ಲಿ ವ್ಯವಹಾರ ನಡೆಸುತ್ತಿದ್ದ ಕುಲಭೂಷಣ್ ಜಾಧವ್ ಅವರನ್ನು ಪಾಕಿಸ್ತಾನದ ಅಧಿಕಾರಿಗಳು ಅಪಹರಿಸಿದ್ದಾರೆ ಎನ್ನುವುದು ಭಾರತದ ವಾದ. 2018ರಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯ, ಜಾದವ್ ಅವರ ಮರಣ ದಂಡನೆಗೆ ತಡೆಯಾಜ್ಞೆ ನೀಡಿತ್ತು.

ಇದೀಗ ಜಾಧವ್ ಅವರ ಮೇಲ್ಮನವಿಗೆ ಅವಕಾಶ ಮಾಡಿಕೊಡುವ ಮಸೂದೆಯನ್ನು 21 ಮಂದಿ ಸದಸ್ಯರ ಸ್ಥಾಯಿ ಸಮಿತಿ ಅನುಮೋದಿಸಿದ ಬಳಿಕ ನ್ಯಾಷನಲ್ ಅಸೆಂಬ್ಲಿ ಅಂಗೀಕರಿಸಿದೆ. ಇದಕ್ಕೆ ಅಂತಾರಾಷ್ಟ್ರೀಯ ನ್ಯಾಯಾಲಯ (ಪರಾಮರ್ಶೆ ಮತ್ತು ಪುನರ್ ಪರಿಶೀಲನೆ) ಕಾಯ್ದೆ ಎಂದು ಹೆಸರಿಸಲಾಗಿದೆ. ಈ ಕಾಯ್ದೆ ಇಡೀ ಪಾಕಿಸ್ತಾನಕ್ಕೆ ಅನ್ವಯಿಸಲಿದೆ. ಕುಲಭೂಷಣ್ ಜಾಧವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಐಸಿಜೆ ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ ಇದಕ್ಕೂ ಮುನ್ನ ಪಾಕಿಸ್ತಾನ ಸರ್ಕಾರ ಅಧ್ಯಾದೇಶವನ್ನು ಹೊರಡಿಸಿತ್ತು.

ವಿದೇಶಿ ಪ್ರಜೆಯೊಬ್ಬರ ವಿಚಾರದಲ್ಲಿ ಐಸಿಜೆ ನೀಡಿರುವ ತೀರ್ಪನ್ನು ಪರಾಮರ್ಶಿಸುವ ಮತ್ತು ಮರುಪರಿಶೀಲಿಸುವ ಅಧಿಕಾರವನ್ನು ಈ ಮಸೂದೆ ದೇಶದ ಹೈಕೋರ್ಟ್‌ಗೆ ನೀಡಿದೆ. ಅಂತೆಯೇ 1952ರ ಪಾಕಿಸ್ತಾನ ಸೇನಾ ಕಾಯ್ದೆಯಡಿ ಕಾರ್ಯನಿರ್ವಹಿಸುತ್ತಿರುವ ನ್ಯಾಯಾಲಯದ ತೀರ್ಪಿನ ವಿರುದ್ಧ ವಿದೇಶಿ ಪ್ರಜೆಗಳು ಸ್ವತಃ ಅಥವಾ ತಮ್ಮ ದೇಶದ ರಾಜತಾಂತ್ರಿಕ ಕಚೇರಿಯ ಮೂಲಕ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News