ಬೆಂಗಳೂರು: ಇಂಧನ ತೈಲ ಬೆಲೆಯೇರಿಕೆ ಖಂಡಿಸಿ ಕೆಪಿಸಿಸಿಯಿಂದ 'ಪೆಟ್ರೋಲ್ 100 ನಾಟೌಟ್' ಪ್ರತಿಭಟನೆ

Update: 2021-06-11 05:45 GMT

ಬೆಂಗಳೂರು, ಜೂ.11: ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿರಂತರವಾಗಿ ಏರಿಸುವ ಮೂಲಕ ಕೊರೋನದಿಂದ ಸಂಕಷ್ಟದಲ್ಲಿರುವ ಜನರ ಮೇಲೆ ಕೇಂದ್ರ ಸರಕಾರ ಗದಾ ಪ್ರಹಾರ ಮಾಡುತ್ತಿದೆ ಎಂದು ಆರೋಪಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಇಂದು ನಗರದ ಶಿವಾನಂದ ವೃತ್ತದ ಪೆಟ್ರೋಲ್ ಬಂಕ್ ಮುಂಭಾಗದಲ್ಲಿ '100-ನಾಟೌಟ್' ಹೆಸರಿನಲ್ಲಿ ಪ್ರತಿಭಟನೆ ನಡೆಸಿತು.

ಈ ನಡುವೆ ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದ ಹಾಗೂ ಅನುಮತಿ ಪಡೆಯದೆ ಪ್ರತಿಭಟನೆ ನಡೆಸಿದ ಆರೋಪದಲ್ಲಿ ಪ್ರತಿಭಟನಾನಿರತ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಚಿವರಾದ ಆರ್.ವಿ.ದೇಶಪಾಂಡೆ, ಮುಖಂಡರಾದ ಅಶೋಕ ಪಟ್ಟಣ, ಪ್ರಕಾಶ್ ರಾಥೋಡ್, ವಿ.ಆರ್.ಸುದರ್ಶನ್, ಶೇಖರ್ ಅವರನ್ನು ಹೈಗ್ರೌಂಡ್ಸ್ ಪೊಲೀಸರು ವಶಕ್ಕೆ ಪಡೆದು ಕರೆದೊಯ್ದು ಬಳಿಕ ಬಿಡುಗಡೆಗೊಳಿಸಿದರು.

ಇದಕ್ಕೆ ಮೊದಲು ಡಿ.ಕೆ. ಶಿವಕುಮಾರ್ ಮತ್ತಿತರ ನಾಯಕರು ಮಾತನಾಡಿ, ಕೇಂದ್ರ ಸರಕಾರದ ಜನ ವಿರೋಧಿ ನೀತಿಯನ್ನು ಖಂಡಿಸಿದರು. ಕಾಂಗ್ರೆಸ್ ಕಾರ್ಯಕರ್ತರು ನೆಹರೂ ವೃತ್ತದ ಸುತ್ತ ನಿಂತು, ತಟ್ಟೆ ಬಾರಿಸುವ ಮೂಲಕ ಕೇಂದ್ರ ಸರಕಾರದ ಪೆಟ್ರೋಲ್ ದರ ಏರಿಕೆ ನೀತಿಯನ್ನು ಸಾಂಕೇತಿಕವಾಗಿ ಅಣಕಿಸಿದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News