ಬಿಹಾರ ಪೊಲೀಸ್ ಇಲಾಖೆಯಲ್ಲಿ ಡಿಎಸ್‍ಪಿ ಆಗಿ ನೇಮಕಗೊಂಡ ಪ್ರಥಮ ಮುಸ್ಲಿಂ ಯುವತಿ ರಝಿಯಾ ಸುಲ್ತಾನ್

Update: 2021-06-11 11:27 GMT
Photo: Indiatoday

ಪಾಟ್ನಾ: ಬಿಹಾರ ಪೊಲೀಸ್ ಇಲಾಖೆಯಲ್ಲಿ ಮುಸ್ಲಿಂ ಸಮುದಾಯದ ಪ್ರಥಮ ಮಹಿಳಾ ಡಿಎಸ್‍ಪಿ ಆಗುವ ಮೂಲಕ  ಗೋಪಾಲಗಂಜ್ ಜಿಲ್ಲೆಯ ಹಥುವಾ ಎಂಬಲ್ಲಿನ 27 ವರ್ಷದ ರಝಿಯಾ ಸುಲ್ತಾನ್ ಇತಿಹಾಸ ಸೃಷ್ಟಿಸಿದ್ದಾರೆ. 64ನೇ ಬಿಹಾರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ  ಉತ್ತೀರ್ಣರಾಗಿರುವ ರಝಿಯಾ, ಡಿಎಸ್‍ಪಿ ಹುದ್ದೆಗೆ ಆಯ್ಕೆಯಾಗಿರುವ 45 ಅಭ್ಯರ್ಥಿಗಳಲ್ಲಿ ಒಬ್ಬರಾಗಿದ್ದಾರೆ.

ಪ್ರಸ್ತುತ ರಝಿಯಾ ಅವರು ಬಿಹಾರ ಸರಕಾರದ ವಿದ್ಯುತ್ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.  ರಝಿಯಾ ಅವರ ತಂದೆ ಬೊಕಾರೋ ಸ್ಟೀಲ್ ಪ್ಲಾಂಟ್‍ನಲ್ಲಿ ಸ್ಟೆನೋಗ್ರಾಫರ್ ಆಗಿ ಸೇವೆ ಸಲ್ಲಿಸುತ್ತಿದ್ದುದರಿಂದ ರಝಿಯಾ ಅವರ ಪ್ರಾಥಮಿಕ ಶಿಕ್ಷಣ ಬೊಕಾರೋದಲ್ಲಿಯೇ ನಡೆದಿತ್ತು. ಆಕೆಯ ತಂದೆ 2016ರಲ್ಲಿ ನಿಧನರಾಗಿದ್ದಾರೆ ಹಾಗೂ ತಾಯಿ ಈಗಲೂ ಬೊಕಾರೋದಲ್ಲಿಯೇ ವಾಸಿಸುತ್ತಿದ್ದಾರೆ.

ಏಳು ಮಂದಿ ಮಕ್ಕಳಲ್ಲಿ ಕಿರಿಯವರಾಗಿರುವ ರಝಿಯಾ ಜೋಧಪುರ್‍ನ ಶಿಕ್ಷಣ ಸಂಸ್ಥೆಯೊಂದರಿಂದ ಇಲೆಕ್ಟ್ರಿಕಲ್ ಇಂಜಿನಿಯರಿಂಗ್‍ನಲ್ಲಿ ಬಿಟೆಕ್ ಪದವಿ ಪಡೆದಿದ್ದಾರೆ.

ಚಿಕ್ಕಂದಿನಿಂದಲೂ ಲೋಕಸೇವಾ ಆಯೋಗ ಪರೀಕ್ಷೆಗೆ ಹಾಜರಾಗುವ ಗುರಿ ಹೊಂದಿದ್ದ ರಝಿಯಾಗೆ ಈಗ ಡಿಎಸ್‍ಪಿ ಹುದ್ದೆಗೆ ಆಯ್ಕೆಯಾಗಿರುವುದು  ಕನಸು ನನಸಾದಂತಾಗಿದೆ. ಬಿಹಾರ ಸರಕಾರದ ವಿದ್ಯುತ್ ಇಲಾಖೆಯಲ್ಲಿ ಆಕೆ 2017ರಲ್ಲಿ ಸಹಾಯಕ ಇಂಜಿನಿಯರ್ ಆಗಿ ಸೇರ್ಪಡೆಗೊಂಡಂದಿನಿಂದಲೂ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು.

"ನಾನು ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಲು ತುಂಬಾ ಉತ್ಸುಕಳಾಗಿದ್ದೇನೆ. ಜನರಿಗೆ ನ್ಯಾಯ ಸಿಗದಿರುವ ಅನೇಕ ಸಮಯ ಸಂದರ್ಭಗಳಿವೆ, ವಿಶೇಷವಾಗಿ ಮಹಿಳೆಯರಿಗೆ. ಮಹಿಳೆಯರು ತಮ್ಮ ವಿರುದ್ಧದ ಯಾವುದೇ ಅಪರಾಧದ ಘಟನೆಗಳನ್ನು ಪೊಲೀಸರಿಗೆ ವರದಿ ಮಾಡುವುದರಿಂದ ದೂರ ಸರಿಯುತ್ತಾರೆ. ಅಂತಹ ಪ್ರಕರಣಗಳು ವರದಿಯಾಗುವುದನ್ನು ಖಚಿತಪಡಿಸಿಕೊಳ್ಳಲು ನಾನು ಪ್ರಯತ್ನಿಸುತ್ತೇನೆ" ಎಂದು ರಝಿಯಾ ಹೇಳಿದ್ದಾರೆ.

ಮುಸ್ಲಿಂ ಯುವತಿಯರು ಶಿಕ್ಷಣ ಮುಂದುವರಿಸಲು ಉದ್ದೇಶಿಸಿದರೆ ಪೋಷಕರು ಅವರನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದಾವರು, ಹಿಜಾಬ್‌ ಅಥವಾ ಬುರ್ಖಾ ಯಾವತ್ತೂ ನಮಗೆ ನಿರ್ಬಂಧವಾಗಿ ತೋಚಿಲ್ಲ. ನಮಗೆ ಯಾವುದೇ ಕೆಲಸ ಕಾರ್ಯಗಳನ್ನು ಮಾಡಲು ಸಾಧ್ಯ ಎಂಬ ದೃಢ ನಿರ್ಧಾರವಿದ್ದರೆ ಅಲ್ಲಾಹನು ಎಂತಹಾ ಕಷ್ಟಗಳನ್ನು ಮೀರಿ ನಡೆಯುವ ಶಕ್ತಿ ನೀಡುತ್ತಾನೆ" ಎಂದು ಅವರು ಹೇಳಿದ್ದಾಗಿ indiatoday.in ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News