ಕೋವಿಡ್ ಲಸಿಕೆ ದುರ್ಬಳಕೆ ಆರೋಪ: ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ವಜಾಕ್ಕೆ ಒತ್ತಾಯ

Update: 2021-06-11 12:38 GMT

ಬೆಂಗಳೂರು, ಜೂ.11: ಕೋವಿಡ್ ಲಸಿಕೆ ದುರ್ಬಳಕೆ ಮಾಡುತ್ತಿರುವ ಕೋವಿಡ್ ನಿಯಂತ್ರಣ ಕಾರ್ಯಪಡೆ ಅಧ್ಯಕ್ಷ ಅಶ್ವತ್ಥ ನಾರಾಯಣ ಅವರನ್ನು ಕೂಡಲೇ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕೆಂದು ಆಪ್ ಆದ್ಮಿ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ಒತ್ತಾಯಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಪ್ರಾರಂಭದಿಂದಲೂ ಲಸಿಕೆ ವಿತರಣೆಯಲ್ಲಿ ದುರ್ಬಳಕೆ, ಸ್ವಜನ ಪಕ್ಷಪಾತ, ಗೊಂದಲಗಳು, ತಾರತಮ್ಯ ಧೋರಣೆಯನ್ನು ಅನುಸರಿಸುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಬೆಂಗಳೂರಿನ ಪ್ರತಿಯೊಂದು ವಿಧಾನಸಭಾ ಕ್ಷೇತ್ರಗಳಲ್ಲೂ ಲಸಿಕೆ ವಿತರಣೆಯನ್ನು ಬಿಜೆಪಿಯ ವೋಟ್ ಬ್ಯಾಂಕ್ ರಾಜಕಾರಣಕ್ಕೆ ಬಳಸಿಕೊಳ್ಳಲು ಸಚಿವ ಅಶ್ವತ್ಥ ನಾರಾಯಣ ಅನುವು ಮಾಡಿಕೊಟ್ಟಿದ್ದಾರೆ. ಆ ಮೂಲಕ ತಮ್ಮ ಸಾಂವಿಧಾನಿಕ ಹುದ್ದೆಯನ್ನು ಸಂಪೂರ್ಣ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಶ್ವತ್ಥ ನಾರಾಯಣ ತಾವು ಪ್ರತಿನಿಧಿಸುವ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರವನ್ನು ಗಮನದಲ್ಲಿಟ್ಟುಕೊಂಡು ಡಾ.ಸಿ.ಎನ್.ಅಶ್ವತ್ಥನಾರಾಯಣ ಫೌಂಡೇಷನ್ ಹೆಸರಿನಲ್ಲಿ ತಮ್ಮ ಬೆಂಬಲಿಗರಿರುವ ಪ್ರದೇಶಗಳಲ್ಲಿ ಮಾತ್ರ ಟೋಕನ್‍ಗಳನ್ನು ಮೊದಲೇ ವಿತರಿಸಿ ಲಸಿಕೆಯನ್ನು ಹಾಕುತ್ತಿರುವುದು ಎಲ್ಲೆಡೆ ಕಂಡುಬರುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಫ್ರಂಟ್ ಲೈನ್ ವಾರಿಯರ್ಸ್ ಗಳ ನೆಪದಲ್ಲಿ, ಆದ್ಯತೆಯ ನಿಯಮ ಹಾಗೂ ಕಂಪೆನಿಗಳ ಸಾಮಾಜಿಕ ಜವಾಬ್ದಾರಿಯ ನಿಧಿ ಅಡಿಯಲ್ಲಿ ದುರ್ಬಳಕೆ ಮಾಡಿಕೊಂಡು ಬಿಜೆಪಿ ತನ್ನ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಬಳಸಿಕೊಳ್ಳುತ್ತಿದೆ. ಸಾರ್ವಜನಿಕರು ಬೆಳಗ್ಗೆ 8 ಗಂಟೆಗೆ ಲಸಿಕಾ ಕೇಂದ್ರಗಳಿಗೆ ಹೋದರೂ ಯಾರಿಗೂ ಲಸಿಕೆ ಸಿಗುವುದಿಲ್ಲ. ಕೇವಲ ಟೋಕನ್ ಹೊಂದಿರುವವರಿಗೆ ಮಾತ್ರ ಲಸಿಕೆ ನೀಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ರಾಜ್ಯ ಹಿಂದುಳಿದ ವರ್ಗಗಳ ವಿಭಾಗದ ಉಪಾಧ್ಯಕ್ಷ ರಾಜಶೇಖರ ದೊಡ್ಡಣ್ಣ ಹಾಗೂ ಬೆಂಗಳೂರು ನಗರ ಎಸ್ಸಿ ಎಸ್ಟಿ ವಿಭಾಗದ ಅಧ್ಯಕ್ಷ ಜಯಕುಮಾರ್ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News