ಬಂಗಾಳ ಬಿಜೆಪಿಯಲ್ಲಿ ಯಾರೂ ಉಳಿಯುವುದಿಲ್ಲ:ಮುಕುಲ್ ರಾಯ್

Update: 2021-06-11 14:37 GMT

ಕೋಲ್ಕತಾ: "ನಾನು ಇಂದು ಟಿಎಂಸಿಗೆ ಸೇರಿದ್ದೇನೆ. ಬಿಜೆಪಿಯಲ್ಲಿ ಎಂತಹ ಪರಿಸ್ಥಿತಿ ಇದೆ ಎಂದರೆ ಅಲ್ಲಿ ಯಾರೂ ಕೂಡ ಉಳಿಯುವುದಿಲ್ಲ'' ಎಂದು  ಬಿಜೆಪಿಯನ್ನು ತ್ಯಜಿಸಿ ನಾಲ್ಕು ವರ್ಷಗಳ ಬಳಿಕ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವ ಮುಕುಲ್ ರಾಯ್ ಶುಕ್ರವಾರ ಹೇಳಿದ್ದಾರೆ.

ಬಿಜೆಪಿಯನ್ನು ತೊರೆದು ಟಿಎಂಸಿಗೆ ಮರಳಿದ ಬಗ್ಗೆ ಸಂತೋಷವನ್ನು ವ್ಯಕ್ತಪಡಿಸಿದ ಮುಕುಲ್ ರಾಯ್, "ತೃಣಮೂಲ ಭವನದ ಈ ಕೋಣೆಯನ್ನು ನೋಡಿ ನನಗೆ ಸಂತೋಷವಾಗಿದೆ. ಬಿಜೆಪಿಯ ನೆರಳು ಬಿಟ್ಟು ಇಲ್ಲಿಗೆ ಮರಳಲು ಸಂತೋಷವಾಗಿದೆ. ಬಂಗಾಳವು ತನ್ನ ಎತ್ತರಕ್ಕೆ ಮರಳುತ್ತದೆ ಹಾಗೂ  ನಮ್ಮ ನಾಯಕಿ ಮಮತಾ ಮುಂಚೂಣಿಯಲ್ಲಿ ನಿಂತು ಮುನ್ನಡೆಸಲಿದ್ದಾರೆ’’ ಎಂದು ಹೇಳಿದ್ದಾರೆ.

ಬಿಜೆಪಿಯನ್ನು ತೊರೆದು ಮತ್ತೆ ಟಿಎಂಸಿಗೆ ಏಕೆ ಬಂದಿದ್ದೀರಿ ಎಂದು ಕೇಳಿದಾಗ,  "ಬಿಜೆಪಿಯನ್ನು ಏಕೆ ತೊರೆದಿದ್ದೇನೆ ಎಂಬುದರ ಬಗ್ಗೆ ನಾನು ಹೇಳಿಕೆ ನೀಡುತ್ತೇನೆ, ಆದರೆ ನಾನು ಬಿಜೆಪಿಯಲ್ಲಿ ಇರಲು ಸಾಧ್ಯವೇ ಇಲ್ಲವಾಗಿದೆ, ಆದ್ದರಿಂದ ನಾನು ಹಿಂತಿರುಗಿದೆ. ಈಗಿನ ಪರಿಸ್ಥಿತಿಯಲ್ಲಿ ಯಾರೂ ಬಿಜೆಪಿಯಲ್ಲಿ ಉಳಿಯುವುದಿಲ್ಲ'' ಎಂದರು.

"ನಮ್ಮ ಪಕ್ಷವು ಪ್ರಬಲವಾಗಿದೆ. ಅವರಿಗೆ ಬೆದರಿಕೆ ಹಾಗೂ  ಕಿರುಕುಳ ನೀಡಲಾಯಿತು. ಅವರ ಆರೋಗ್ಯವು ಕ್ಷೀಣಿಸುತ್ತಿರುವುದನ್ನು ನಾನು ನೋಡಬಲ್ಲೆ. ಒಬ್ಬರು ಬಿಜೆಪಿ ಸದಸ್ಯರಾಗಲು ಸಾಧ್ಯವಿಲ್ಲ" ಎಂದು ಮಮತಾ ಬ್ಯಾನರ್ಜಿ ಹೇಳಿದರು.

ಮಮತಾ ಬ್ಯಾನರ್ಜಿಯ ಮಾಜಿ ಬಲಗೈ ಬಂಟನಾಗಿದ್ದ  ಮುಕುಲ್ ರಾಯ್, ಅಭಿಷೇಕ್ ಬ್ಯಾನರ್ಜಿಯೊಂದಿಗಿನ ಭಿನ್ನಾಭಿಪ್ರಾಯಗಳು ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಪಕ್ಷದ ಉನ್ನತ ನಾಯಕತ್ವದೊಂದಿಗೆ ಭಿನ್ನಾಭಿಪ್ರಾಯವಿದೆ ಎಂದು ಆರೋಪಿಸಿ ಟಿಎಂಸಿಯನ್ನು ತೊರೆದಿದ್ದರು. "ಅಭಿಷೇಕ್ ಅವರೊಂದಿಗೆ ನನಗೆ ಯಾವತ್ತೂ ಸಮಸ್ಯೆ ಇರಲಿಲ್ಲ'' ಎಂದು ಮುಕುಲ್ ರಾಯ್ ಇಂದು  ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News