2024ಕ್ಕೆ ಪೆಟ್ರೋಲ್ ಬೆಲೆ 200 ರೂ. ಗೆ ಏರಿಕೆಯಾಗಲಿದೆ: ಡಿ.ಕೆ.ಶಿವಕುಮಾರ್

Update: 2021-06-11 16:38 GMT

ಬೆಂಗಳೂರು, ಜೂ. 11: `ಕೇಂದ್ರದ ಬಿಜೆಪಿ ಸರಕಾರ ಪದೇ ಪದೆ ಪೆಟ್ರೋಲ್, ಡಿಸೇಲ್ ಸಹಿತ ತೈಲೋತ್ಪನ್ನಗಳ ಬೆಲೆ ಹೆಚ್ಚಿಸುತ್ತಿದೆ. ಆದರೆ, ಮಧ್ಯಮವರ್ಗ, ರೈತರ ಬೆಂಬಲ ಬೆಲೆ, ಉದ್ಯೋಗ ಖಾತ್ರಿ, ಕನಿಷ್ಠ ವೇತನವನ್ನು ಎಷ್ಟು ಬಾರಿ ಹೆಚ್ಚಿಸಿದೆ?' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳನ್ನು ಖಾರವಾಗಿ ಪ್ರಶ್ನಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಮಾತನಾಡಿದ ಅವರು, `2021ರಲ್ಲಿ ಬಿಜೆಪಿಯು 40ಕ್ಕೂ ಹೆಚ್ಚು ಬಾರಿ ಪೆಟ್ರೋಲ್ ದರ ಏರಿಕೆ ಮಾಡಿದೆ. ಆದರೆ, ಸರಕಾರ ಮಧ್ಯಮ ವರ್ಗದವರ ಸಂಬಳವನ್ನು ಎಷ್ಟು ಬಾರಿ ಹೆಚ್ಚಿಸಿದೆ? ಕನಿಷ್ಠ ವೇತನ ದರವನ್ನು ಎಷ್ಟು ಬಾರಿ ಹೆಚ್ಚಿಸಲಾಗಿದೆ? ಉದ್ಯೋಗ ಖಾತ್ರಿ ವೇತನವನ್ನು ಎಷ್ಟು ಬಾರಿ ಹೆಚ್ಚಿಸಲಾಗಿದೆ? ರೈತರಿಗಾಗಿ ಕನಿಷ್ಠ ಬೆಂಬಲ ಬೆಲೆಯನ್ನು ಎಷ್ಟು ಬಾರಿ ಹೆಚ್ಚಿಸಲಾಗಿದೆ? ಬಿಜೆಪಿ ಸರಕಾರ ಜನರ ಹಿತಕ್ಕಿಂತ ತಮ್ಮ ಬೊಕ್ಕಸ ತುಂಬಿಸಿಕೊಳ್ಳಲು ಹಗಲು ದರೋಡೆಗೆ ಇಳಿದಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆರ್ಥಿಕ ಹಿಂಜರಿತ ಹಾಗೂ ಇಂಧನ ದರ ಹೆಚ್ಚಳದಿಂದ ದೇಶದ ಪ್ರತಿಯೊಬ್ಬ ನಾಗರಿಕನು ತೊಂದರೆ ಅನುಭವಿಸುತ್ತಿದ್ದಾನೆ. ಪೆಟ್ರೋಲ್ ತೆರಿಗೆ ಹೆಸರಿನಲ್ಲಿ ಬಿಜೆಪಿಯು ಜೇಬಿಗೆ ಕತ್ತರಿ ಹಾಕುತ್ತಿದೆ. ಮೋದಿಯವರ ಹೊಸ ಮಹಲನ್ನು ಕಟ್ಟಲು ಬಿಜೆಪಿಯು ಇಂಧನ ತೆರಿಗೆಯನ್ನು ಏರಿಸುತ್ತಿದ್ದು, ಪೆಟ್ರೋಲ್ ಬೆಲೆ 2022ರಲ್ಲಿ 120 ರೂ., 2023 ರಲ್ಲಿ 160 ರೂ., 2024ರಲ್ಲಿ 200ರೂ.ಗಳಾಗಲಿದೆ. ಹೀಗಾಗಿ ಪರಿಸ್ಥಿತಿ ಕೈಮೀರಿ ಹೋಗುವ ಮೊದಲು ನಾವು ಧ್ವನಿ ಎತ್ತಬೇಕು' ಎಂದು ಶಿವಕುಮಾರ್ ಕರೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News