ದಲಿತ ಕವಿಯ ಏಳು ಬೀಳು

Update: 2021-06-12 11:18 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ರಾಜ್ಯದ ದಲಿತ ಸಂವೇದನೆಗಳಿಗೆ ರೂಪಕದಂತೆ ಬದುಕಿದವರು ಸಿದ್ದಲಿಂಗಯ್ಯ. ದಲಿತರ ಸಂಘಟನೆ, ಹೋರಾಟ ಮತ್ತು ಅದರ ಹಿನ್ನಡೆಗಳೆಲ್ಲವನ್ನೂ ಸಿದ್ದಲಿಂಗಯ್ಯ ಅವರ ಬದುಕು ಮತ್ತು ಅವರು ಬದುಕಿದ ಕಾಲಘಟ್ಟದ ಜೊತೆಗೆ ನಾವು ತಳಕು ಹಾಕುತ್ತಾ ಹೋಗಬಹುದು. ಆ ಕಾಲದಲ್ಲಿ ‘ಇಕೃಲಾ ವದೀರ್ಲಾ’ ಎನ್ನುವುದು ಕವಿತೆ ಹೌದೋ ಅಲ್ಲವೋ ಎನ್ನುವುದು ಕಾವ್ಯ ವಿಮರ್ಶಾ ವಲಯದಲ್ಲಿ ಭಾರೀ ಚರ್ಚೆಗೊಳಗಾಗಿತ್ತು. ಆದರೆ, ಒಬ್ಬ ದಲಿತ ಕವಿಯ ಒಳಗಿನ ಆಕ್ರೋಶದ ಕುಲುಮೆಯಿಂದ ಚಿಮ್ಮಿದ ಆ ಕಿಡಿಯನ್ನು ಸಮಾಜ ನಿರ್ಲಕ್ಷಿಸುವುದಕ್ಕೆ ಸಾಧ್ಯವೇ ಇರಲಿಲ್ಲ. ರಾಜ್ಯದಲ್ಲಿ ದಲಿತ ಸಂಘರ್ಷ ಸಮಿತಿಯ ಉತ್ಕರ್ಷ ಕಾಲದಲ್ಲಿ ಸಿದ್ದಲಿಂಗಯ್ಯ ಕಾವ್ಯಗಳನ್ನು ಬರೆದರು. ಸಿದ್ದಲಿಂಗಯ್ಯ ಸಂಘಟನೆಗಳ ಮುಂಚೂಣಿಯಲ್ಲಿಲ್ಲದಿದ್ದರೂ, ಅವರ ಕಾವ್ಯಗಳು ಸದಾ ಹೋರಾಟದ ನೀಲಿ ಬಾವುಟಗಳನ್ನು ಬೀಸುತ್ತಾ ಎಲ್ಲರಿಗಿಂತ ಮುಂದೆ ನಿಲ್ಲುತ್ತಿದ್ದವು. ಬಂಡಾಯ, ದಲಿತ ಚಳವಳಿಗಳು ಸಿದ್ದಲಿಂಗಯ್ಯ ಅವರ ಕಾವ್ಯಗಳ ಘೋಷಣೆಗಳಿಲ್ಲದೆ ಮುಂದೆ ಸಾಗಲಾರವು ಎನ್ನುವ ಸ್ಥಿತಿಯೊಂದಿತ್ತು. 80ರ ದಶಕದ ಬೀದಿ ನಾಟಕಗಳು, ರಂಗಭೂಮಿಗಳು, ಯುವಕ ಮಂಡಲಗಳಲ್ಲಿ ಸಿದ್ದಲಿಂಗಯ್ಯ ಅವರ ‘ನಿನ್ನೆ ದಿನ ನನ್ನ ಜನ ಬೆಟ್ಟದಂತೆ ಬಂದರು’ ‘ಚೋಮನ ಮಕ್ಕಳು ನಾವುಗಳು’ ‘ದಲಿತರು ಬಂದರು ದಾರಿ ಬಿಡಿ’ ‘ದೊಡ್ಡ ಗೌಡರ ಬಾಗಿಲಿಗೆ ನಮ್ಮ ಮೂಳೆಯ ತೋರಣ’ ಮೊದಲಾದ ಕವಿತೆಗಳು ಪ್ರಾರ್ಥನಾ ಗೀತೆಗಳಾಗಿದ್ದವು. ಆ ಹಾಡುಗಳ ಮೂಲಕವೇ ನಾಡಿನ ಸಾಂಸ್ಕೃತಿಕ ಚಳವಳಿಗಳು ತೆರೆದುಕೊಳ್ಳುತ್ತಿದ್ದವು. ಪಂಡಿತರ ಮನೆ ಬಾಗಿಲಲ್ಲಿ ಜೀತಕ್ಕಿದ್ದ ಕಾವ್ಯಗಳನ್ನು, ಬಡವರ ಗುಡಿಸಲ ಬಾಗಿಲ ಕಡೆಗೆ ಕರೆದೊಯ್ದ್ದ ಹೆಗ್ಗಳಿಕೆ ಸಿದ್ದಲಿಂಗಯ್ಯ ಅವರಿಗೆ ಸೇರಬೇಕು.

ವೌಢ್ಯಗಳನ್ನು, ಪುರೋಹಿತ ಶಾಹಿಗಳನ್ನು ವ್ಯಂಗ್ಯಕ್ಕೀಡು ಮಾಡಿ ಕುವೆಂಪು ಅದಾಗಲೇ ಕವಿತೆ ಬರೆದಿದ್ದರಾದರೂ, ತಳಸ್ತರದ ಸಮುದಾಯದಿಂದ ಬಂದ ಕವಿಯೊಬ್ಬ ತನ್ನ ನೋವುಗಳನ್ನು, ಆಕ್ರೋಶಗಳನ್ನು ರೂಪಕಗಳನ್ನಾಗಿಸಿ ಹಾಡತೊಡಗಿದಾಗ ಸಾಹಿತ್ಯ ವಲಯ ಬೆಚ್ಚಿ ಬಿದ್ದಿದ್ದು ನಿಜ. ‘ನಿನ್ನೆ ದಿನ ನನ್ನ ಜನ ಬೆಟ್ಟದಂತೆ ಬಂದರು/ಕಪ್ಪು ಮುಖ ಬೆಳ್ಳಿ ಗಡ್ಡ ಉರಿಯುತಿರುವ ಕಣ್ಣುಗಳು....’ ‘ಲಕ್ಷಾಂತರ ನಾಗರುಗಳು ಹುತ್ತ ಬಿಟ್ಟು ಬಂದಂತೆ...’ ‘...ಯಜಮಾನರ ಹಟ್ಟಿಯಲ್ಲಿ, ಧಣಿಕೂರುವ ಪಟ್ಟದಲ್ಲಿ...ಎಲ್ಲೆಲ್ಲೂ ನನ್ನ ಜನ ನೀರಿನಂತೆ ನಿಂತರು’ ಈ ಉಪಮೆಗಳಿಗೆ ಸಾಹಿತ್ಯದ ನವಿರು ಭಾವಗಳು ಕೊಚ್ಚಿಕೊಂಡು ಹೋದವು. ನವ್ಯ ಕಾಲದ ಹುಡುಗರು ನವೋದಯದ ರಮ್ಯ ಹಾಡುಗಳ ಬಗ್ಗೆ ತಿರಸ್ಕಾರ ತಾಳುತ್ತಿದ್ದ ಸಂದರ್ಭದಲ್ಲೇ, ಸಿದ್ದಲಿಂಗಯ್ಯ ಅವರ ಆಕ್ರೋಶದ ಹಾಡುಗಳಿಗೆ ತಲೆದೂಗಿದರು. ಹೊಸ ತಲೆಮಾರಿನ ಯುವಕರ ಕಂಠದಲ್ಲಿ ಬೆಂಕಿಯ ಕಿಡಿಗಳಂತೆ ಆ ರೂಪಕಗಳು ಚಿಮ್ಮಿದವು. ರೈತರು, ಕಾರ್ಮಿಕರು, ದಲಿತರು....ಎಲ್ಲರೂ ತಮ್ಮ ತಮ್ಮ ಚಳವಳಿಗಳಿಗೆ ಪೂರಕವಾಗಿ ಸಿದ್ದಲಿಂಗಯ್ಯ ಅವರ ಹಾಡುಗಳನ್ನು ಬಳಸಿಕೊಂಡರು. ತಮ್ಮ ನೋವುಗಳನ್ನು ಕಾವ್ಯದಲ್ಲಿ ಹೀಗೂ ಬಳಸಿಕೊಳ್ಳಬಹುದು ಎನ್ನುವುದನ್ನು ಶೋಷಿತ ಸಮುದಾಯದ ಯುವಕರು ಕಂಡುಕೊಂಡರು. ದಲಿತ ವಿದ್ಯಾರ್ಥಿಗಳ ಬರಹಗಳ ಮೇಲೆ ಸಿದ್ದಲಿಂಗಯ್ಯ ಗಾಢವಾದ ಪ್ರಭಾವವನ್ನು ಬೀರಿದರು.

ವಿಮರ್ಶಕರು ಸಿದ್ದಲಿಂಗಯ್ಯ ಅವರನ್ನು ದಲಿತರ ಆದಿಕವಿ ಎಂದು ಬಣ್ಣಿಸಿದರು. ದಲಿತ ಹೋರಾಟಗಳು ಕವಿಯ ಕಾವ್ಯಗಳನ್ನು ಬೆಚ್ಚ್ಚಗಿಟ್ಟಿತ್ತೋ ಅಥವಾ ಕವಿಯ ಕಾವ್ಯಗಳು ಹೋರಾಟಗಳನ್ನು ಬೆಚ್ಚಗಿಟ್ಟಿತ್ತೋ ಎನ್ನುವುದನ್ನು ಸ್ಪಷ್ಟ ಪಡಿಸಿ ಹೇಳುವುದು ಕಷ್ಟ. ಆದರೆ ದಲಿತ ಹೋರಾಟಗಳು ಬೇರೆ ಬೇರೆ ರಾಜಕೀಯ ಕಾರಣಗಳಿಂದ ರೂಪಾಂತರಗೊಳ್ಳುತ್ತಿದ್ದಂತೆಯೇ ದಲಿತ ಕವಿಯೆಂದೇ ಗುರುತಿಸಲ್ಪಟ್ಟಿದ್ದ ಸಿದ್ದಲಿಂಗಯ್ಯ ಅವರ ಕವಿತೆಗಳೂ ದಿಕ್ಕು ಬದಲಿಸತೊಡಗಿದವು ಎನ್ನುವುದು ಸ್ಪಷ್ಟ. ಬೇರೆ ಬೇರೆ ರಾಜಕೀಯ ಕಾರಣಗಳಿಂದ ದಲಿತ ಸಂಘಟನೆಗಳು ಒಡೆದು ದುರ್ಬಲವಾಗುತ್ತಿದ್ದಂತೆಯೇ, ಸಿದ್ದಲಿಂಗಯ್ಯ ಪ್ರೇಮ ಕವಿತೆಗಳೆಡೆಗೆ ಹೊರಳತೊಡಗಿದರು. ತನ್ನ ಕಾವ್ಯದ ಘೋಷಣೆಗಳ ಭಾರದಿಂದ ಸುಸ್ತಾದರೋ ಎನ್ನುವಂತೆ, ತನ್ನ ಹರೆಯದ ನೋವುಗಳ ಬೇರೆ ಬೇರೆ ಮಗ್ಗಲುಗಳನ್ನು ಅವರು ಕಾವ್ಯದ ಮೂಲಕ ಒರೆಗೆ ಹಚ್ಚಿ ನೋಡತೊಡಗಿದರು. ದಲಿತ ಸಂಘಟನೆಗಳು ನುಚ್ಚು ನೂರಾಗಿ ಸಮಯದ ಬೆನ್ನುಹತ್ತಿ ರಾಜಕೀಯ ನಡೆಸುತ್ತಿದ್ದಾಗ, ತನಗೆ ದೊರಕಿದ ಪ್ರಸಿದ್ಧಿ, ವರ್ಚಸ್ಸು ಇವುಗಳನ್ನು ಬಳಸಿಕೊಂಡು ತನ್ನದೇ ಆದ ರಾಜಕೀಯ ಬದುಕಿನ ಒಳದಾರಿಗಳನ್ನು ಅವರು ಹುಡುಕತೊಡಗಿದರು.

‘ತನ್ನ ನೋವುಗಳಿಗೆ ಬಿಸಿ ನೀರು ಸುರಿದು ಆನಂದಿಸಿದ್ದು ಸಾಕು...’ ಎಂದೆನಿಸಿತೋ, ಕಾವ್ಯದ ಮೂಲಕ ಹುತಾತ್ಮನಾಗುವುದಕ್ಕೆ ಸಿದ್ಧನಿಲ್ಲ ಎಂದು ತಮಗೆ ತಾವೇ ಸ್ಪಷ್ಟ ಪಡಿಸಿಕೊಂಡವರಂತೆ ಸಿದ್ಧಾಂತದ ಜೊತೆ ರಾಜಿ ಮಾಡತೊಡಗಿದರು. ತನ್ನ ದಲಿತ ಅಸ್ಮಿತೆಯನ್ನ್ನು ಬಳಸಿಕೊಂಡೇ ರಾಜಕೀಯ ಗಣ್ಯರ ಗೆಳೆತನವನ್ನು ಬಲಪಡಿಸಿಕೊಂಡರು. ರಾಜಕೀಯದ ಸಣ್ಣ ಪುಟ್ಟ ಖಾಲಿ ಜಾಗಗಳನ್ನು ಅವರು ತುಂಬಿದರು. ಹಲವರಿಗೆ ಇದು ಸಮಯ ಸಾಧಕತನದಂತೆ ಕಂಡಿತು. ಶೋಷಿತ ಸಮುದಾಯದ ಜನರು ಕೇವಲ ಹೋರಾಟ, ಸಂಘರ್ಷದ ಮೂಲಕ ಮಾತ್ರವಲ್ಲ ತಂತ್ರಗಳ ಮೂಲಕವೂ ಪ್ರಭುತ್ವದಲ್ಲಿ ಜಾಗವನ್ನು ಕಂಡುಕೊಳ್ಳಬೇಕು ಎನ್ನುವ ಸಂದೇಶವನ್ನು ಅದಾಗಲೇ ಅವರು ತಮ್ಮ ಹಿಂಬಾಲಕರಿಗೆ ನೀಡಿ ತಮ್ಮನ್ನು ತಾವು ಸಮರ್ಥಿಸಿಕೊಳ್ಳುತ್ತಿದ್ದರು. ಆ ತಂತ್ರಗಳು ಹೇಗಿರಬೇಕು ಎನ್ನುವುದಕ್ಕೆ ಅವರು ಮಾರ್ಗ-ದರ್ಶಿಯಾದರು. ವಿಧಾನಪರಿಷತ್‌ನಲ್ಲಿ ಸ್ಥಾನವನ್ನು ಗಿಟ್ಟಿಸಿಕೊಂಡರು. ಈ ಸಂದರ್ಭದಲ್ಲಿ ಜಾತ್ಯತೀತ ನಿಲುವುಗಳಿಂದ ಅವರು ಹಿಂದೆ ಸರಿದಿರಲಿಲ್ಲ. ಬಾಬರಿ ಮಸೀದಿ ಧ್ವಂಸವಾದಾಗ ವಿಧಾನಪರಿಷತ್‌ನಲ್ಲಿ ಅವರು ಹೃದಯಸ್ಪರ್ಶಿ ಭಾಷಣವೊಂದನ್ನು ಮಾಡಿದ್ದರು. ಬಾಬರಿ ಮಸೀದಿ ಧ್ವಂಸವನ್ನು ದೊಡ್ಡ ಧ್ವನಿಯಲ್ಲಿ ಖಂಡಿಸಿದ್ದು ಮಾತ್ರವಲ್ಲ, ಪ್ರಭುತ್ವ ಹಂತ ಹಂತವಾಗಿ ಸಂಪೂರ್ಣ ಕೋಮುವಾದೀಕರಣಗೊಳ್ಳುತ್ತಿರುವುದರ ಅಪಾಯವನ್ನು ಮನದಟ್ಟು ಮಾಡಿಸಿ ಅದಕ್ಕಾಗಿ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮವನ್ನು ಸೂಚಿಸಿದ್ದರು. ಆದರೆ ರಾಜಕಾರಣಿಗಳ ಜೊತೆಗೆ ಸೇರುತ್ತಾ ಅವರೂ ರಾಜಕಾರಣಿಗಳೇ ಆಗಿ ರೂಪಾಂತರಗೊಳ್ಳುತ್ತಾ ಹೋದರು.

ಆರೆಸ್ಸೆಸ್ ಸಭೆಯೊಂದರಲ್ಲಿ ಭಾಗವಹಿಸಿ ಸುದ್ದಿಯಾದರು. ಸಭೆಗೆ ತಕ್ಕಂತೆ ಮಾತನಾಡುವುದನ್ನು ಕಲಿತರು. ತಾನು ಒಂದು ಕಾಲದಲ್ಲಿ ಬರೆದ ಗಂಭೀರ ಕವಿತೆಗಳನ್ನೇ, ಯಾರನ್ನೋ ಓಲೈಸುವುದಕ್ಕಾಗಿ ಲಘುವಾಗಿಸಿ ಮಾತನಾಡಿದರು. ‘ಇಕೃಲಾ ವದೀರ್ಲಾ...’ ಪದ್ಯವನ್ನು ಬರೇ ಯೌವನದ ಆವೇಶದಿಂದ ಬರೆದೆ ಎಂದು ಮೇಲ್‌ಜಾತಿಗಳನ್ನು ಸಮಾಧಾನಿಸಿದರು. ಪೇಜಾವರ ಶ್ರೀಗಳ ಜೊತೆಗೆ ಸಂಬಂಧವನ್ನು ಗಟ್ಟಿಯಾಗಿಸಿಕೊಂಡರು. ದಲಿತ ಹೋರಾಟಗಳಿಂದ ಅಂತರ ಕಾಪಾಡಿಕೊಳ್ಳುತ್ತಾ, ಪ್ರಾಧಿಕಾರ, ನಿಗಮ, ಮಂಡಳಿ ಮೊದಲಾದವುಗಳ ಜೊತೆಗೆ ಹೆಚ್ಚು ಹೆಚ್ಚು ಹತ್ತಿರವಾದರು. ಸಿದ್ದಲಿಂಗಯ್ಯ ಅವರಂತಹ ಕವಿಗಳು ಆ ಸ್ಥಾನವನ್ನು ವಹಿಸಿಕೊಂಡದ್ದರಿಂದ ಅದು ದುರುಪಯೋಗಗೊಳ್ಳುವುದು ತಪ್ಪಿತು ಎಂದೂ ನಮಗೆ ನಾವು ಸಮಾಧಾನಿಸಿಕೊಳ್ಳಬಹುದು. ಆದರೆ ದೇಶಾದ್ಯಂತ ಕೋಮುವಾದ ಮತ್ತು ದಲಿತ ದೌರ್ಜನ್ಯಗಳು ವಿಜೃಂಭಿಸುತ್ತಿರುವ ಹೊತ್ತಿನಲ್ಲಿ, ಹಿಂದಿನ ಕವಿ ಸಿದ್ದಲಿಂಗಯ್ಯ ಮತ್ತೆ ಮುನ್ನೆಲೆಗೆ ಬಂದಾರು ಎಂದು ಅವರ ಅಭಿಮಾನಿಗಳು ಭಾವಿಸಿದ್ದರು. ‘ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ’ ಹಾಡಿನ ಟಾಟಾ ಬಿರ್ಲಾಗಳ ಜಾಗದಲ್ಲಿ ಅಂಬಾನಿ, ಅದಾನಿಗಳು ವಿಜೃಂಭಿಸುತ್ತಿರುವುದನ್ನು ಕಂಡೂ ಕಾಣದಂತೆ ಇದ್ದರು. ‘ಯಾರಿಗೆ ಬಂತು ನರೇಂದ್ರ ಮೋದಿಯ ಅಚ್ಛೇದಿನ್?’ ಎಂದು ಕೇಳಬೇಕಾದ ಸಿದ್ದಲಿಂಗಯ್ಯ ಅವರು, ಅಮಿತ್ ಶಾ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಕುಶಲೋಪರಿ ಮಾತನಾಡಿದರು. ಅಲ್ಲಿಗೆ ಸಿದ್ದಲಿಂಗಯ್ಯ ಅಪ್ಪಟ ರಾಜಕಾರಣಿಯಾಗಿ ಸಂಪೂರ್ಣ ರೂಪಾಂತರವಾಗಿದ್ದರು.

ವಿವಿಧ ಪ್ರಾಧಿಕಾರಗಳ ಅಧಿಕಾರಾವಧಿ ಮುಗಿದ ಬಳಿಕ ಹಲವು ಸಭೆಗಳಲ್ಲಿ ಅವರು ದಲಿತರ ಮೇಲಾಗುತ್ತಿರುವ ಅನ್ಯಾಯಗಳ ಬಗ್ಗೆ ಮಾತನಾಡುತ್ತಿದ್ದರಾದರೂ, ಅದು ರಾಜಕಾರಣಿಯ ಭಾಷಣದಷ್ಟೇ ನಿರ್ಜೀವವಾಗಿರುತ್ತಿತ್ತು. ಅದರೊಳಗೆ ನೋವುಂಡ ಅವರೊಳಗಿನ ದಲಿತ ಕವಿ ಸಂಪೂರ್ಣ ನಿವೃತ್ತನಾಗಿರುವುದು ಸ್ಪಷ್ಟವಾಗಿ ಎದ್ದು ಕಾಣುತ್ತಿತ್ತು. ಕಾವ್ಯ, ಚಳವಳಿ, ಸಿದ್ಧಾಂತ ಎಂದು ಕಳೆದು ಹೋಗಿದ್ದರೆ ಸಿದ್ದಲಿಂಗಯ್ಯ ವಿಧಾನಪರಿಷತ್ ಸದಸ್ಯರಾಗುವುದು, ಬೇರೆ ಬೇರೆ ಪ್ರಾಧಿಕಾರಗಳನ್ನು ಅಲಂಕರಿಸುವುದು ಕಷ್ಟವಾಗುತ್ತಿತ್ತು. ಆದುದರಿಂದ ರಾಜಕಾರಣದ ಸೈಜುಗಲ್ಲುಗಳನ್ನು ಹೊರುವುದು ಸಿದ್ದಲಿಂಗಯ್ಯರಿಗೆ ಅನಿವಾರ್ಯವಾಯಿತು. ರಾಜಕಾರಣಿಗಳು ಮತ್ತು ಮೇಲ್‌ಜಾತಿಗಳ ಜೊತೆಗೆ ಅವರು ಮಾಡಿಕೊಂಡ ಹೊಂದಾಣಿಕೆಯಿಂದ ಬಹಳಷ್ಟನ್ನು ಪಡೆದುಕೊಂಡರು ನಿಜ. ಆದರೆ ತನಗಾಗಿರುವ ಲಾಭಗಳನ್ನು ಇಡೀ ದಲಿತ ಸಮುದಾಯದ ಲಾಭವಾಗಿ ಪರಿವರ್ತಿಸುವುದರಲ್ಲಿ ಮಾತ್ರ ಅವರು ಸೋತರು ಎನ್ನುವುದರಲ್ಲಿ ಎರಡು ಮಾತಿಲ್ಲ. ಸಿದ್ದಲಿಂಗಯ್ಯ ಅವರ ಭುಸುಗುಡುವ ನೀಲಿ ಕಡಲು ಆವಿಯಾಗಿ ಮೋಡ ಕಟ್ಟಿ ಮಳೆಯಾಗುವ ದಿನಗಳು ಬರಲಿ ಎನ್ನುವ ಆಶಯದೊಂದಿಗೆ ಸಿದ್ದಲಿಂಗಯ್ಯ ಅವರಿಗೆ ಅಂತಿಮ ವಿದಾಯ ಹೇಳಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News