ಈ ಹಿಂದೆ ಲಕ್ಷದ್ವೀಪದಲ್ಲಿ ಬ್ಯಾನರ್‌ ಹಾಕಿದ್ದಕ್ಕೆ ಸಿಪಿಎಂ, ಕಾಂಗ್ರೆಸ್‌ ನಾಯಕರ ಮೇಲೆ ದೇಶದ್ರೋಹ ಕೇಸು ದಾಖಲಾಗಿತ್ತು

Update: 2021-06-13 08:58 GMT
Photo: telegraphindia

ಕವರತ್ತಿ: ಮೊನ್ನೆ ತಾನೇ ಟಿವಿ ಚರ್ಚಾ ಕಾರ್ಯಕ್ರಮವೊಂದರಲ್ಲಿ ಲಕ್ಷದ್ವೀಪದ ಆಡಳಿತಾಧಿಕಾರಿ ಪ್ರಫುಲ್‌ ಪಟೇಲ್‌ ಕುರಿತಾದಂತೆ ಮಾನಹಾನಿಕರ ಮಾತುಗಳನ್ನಾಡಿದ್ದಾರೆಂದು ಲಕ್ಷದ್ವೀಪ ಮೂಲದ ಸಿನಿಮಾ ನಿರ್ಮಾಪಕಿ ಆಯಿಶಾ ಸುಲ್ತಾನಾ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಾಗಿತ್ತು. ಆದರೆ ಅದುವೇ ಪ್ರಥಮ ಪ್ರಕರಣವಲ್ಲ, ಈ ಹಿಂದೆ ಬ್ಯಾನರ್‌ ಹಾಕಿದ್ದ ಕಾರಣಕ್ಕಾಗಿ ಕಾಂಗ್ರೆಸ್‌ ಮತ್ತು ಸಿಪಿಎಂ ನಾಯಕರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಾಗಿತ್ತು ಎಂದು Telegraphindia ವರದಿ ಮಾಡಿದೆ.

ಐಪಿಸಿಯ ಸೆಕ್ಷನ್ 124 ಎ (ದೇಶದ್ರೋಹ)ವನ್ನು ಲಕ್ಷದ್ವೀಪ ಕಾಂಗ್ರೆಸ್‌ ಅಧ್ಯಕ್ಷ ಎಂ.ಐ ಆಟಕ್ಕೋಯ ಮತ್ತು ಸಿಪಿಎಂ ಮುಖಂಡರಾದ ಪಿ.ಪಿ ರಹೀಂ ಹಾಗೂ ಅಸ್ಗರ್‌ ಅಲಿ ಎಂಬವರ ಮೇಲೆ ದಾಖಲಿಸಲಾಗಿತ್ತು. ಬಳಿಕ ಡಿಸೆಂಬರ್‌ 15,2020ರಂದು ಅವರಿಗೆ ಜಾಮೀನು ನೀಡಲಾಗಿತ್ತು.

ಭಾರತದ ಭೂಪಟದ ಮೇಲೆ ಪೌರತ್ವ ಕಾಯ್ದೆಯ ವಿರುದ್ಧ ಇಂಗ್ಲಿಷ್‌ ನಲ್ಲಿ "ಭಾರತವು ನರೇಂದ್ರ ಮೋದಿಯ ತಂದೆಯ ಆಸ್ತಿಯಲ್ಲ" ಎಂದು ಬರೆಯಲಾದ ಬ್ಯಾನರ್‌ ಹಾಕಿದ್ದಕ್ಕಾಗಿ ಅವರ ಮೇಲೆ ಕ್ರಮ ಕೈಗೊಳ್ಳಲಾಗಿತ್ತು. ಹಿಂದೂ, ಮುಸ್ಲಿಂ, ಸಿಖ್ಖರನ್ನು ಪ್ರತಿನಿಧಿಸುವ ಚಿತ್ರವನ್ನೂ ಅದರಲ್ಲಿ ರಚಿಸಲಾಗಿತ್ತು. 

ಆಟ್ಟಕೋಯಾರವರ ಪುತ್ರ ಹಾಗೂ ವಕೀಲ ಅಜ್ಮಲ್‌ ಅಹ್ಮದ್‌ ಈ ಕುರಿತು "ಪೌರತ್ವ ಕಾಯ್ದೆ ವಿರುದ್ಧ ಜನರು ಪ್ರತಿಭಟನೆ ನಡೆಸಲು ಮುಂದಾದ ಸಂದರ್ಭದಲ್ಲೇ ಈ ಬ್ಯಾನರ್‌ ಅನ್ನು ಕವರತ್ತಿಯ ಮುಹ್ಯುದ್ದೀನ್‌ ಮಸೀದಿಯ ಮುಂಭಾಗದಲ್ಲಿ ಹಾಕಲಾಗಿದೆ. ಆದರೆ ಪ್ರಫುಲ್‌ ಪಟೇಲ್‌ ಆಡಳಿತಾಧಿಕಾರಿಯಾಗಿ ನೇಮಕಗೊಂಡ ಬಳಿಕವೇ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣ ದಾಖಲಿಸಲು ಸ್ವತಃ ಪ್ರಫುಲ್‌ ಪಟೇಲ್‌ ಆದೇಶ ನೀಡಿದ್ದಾರೆಯೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ" ಎಂದು ಹೇಳಿದರು.

ನೂತನ ಪೌರತ್ವ ಕಾಯ್ದೆ ವಿರುದ್ಧ ಬಿಜೆಪಿ ರಹಿತ ಪಕ್ಷಗಳ ಒಕ್ಕೂಟವಾದ ಸಂವಿಧಾನ ರಕ್ಷಣಾ ಸಮಿತಿಯ ಕನ್ವೀನರ್‌ ಆಗಿ ಆಟಕ್ಕೋಯ ಕಾರ್ಯ ನಿರ್ವಹಿಸುತ್ತಿದ್ದರು. "ಈ ಬ್ಯಾನರ್‌ ಯಾರು ಹಾಕಿದ್ದಾರೆಂದು ನಮಗೆ ತಿಳಿದಿಲ್ಲ. ಆದರೆ ನಮ್ಮ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು" ಎಂದು ಹೇಳಿಕೆ ನೀಡಿದ್ದಾಗಿ ವರದಿ ತಿಳಿಸಿದೆ.

"ನಾನು ಈ ಬೋರ್ಡ್‌ ಅನ್ನು ನೋಡಿದ್ದೇ ಪೊಲೀಸ್‌ ಸ್ಟೇಷನ್‌ ನಲ್ಲಿ. ಆ ಬ್ಯಾನರ್‌ ನ ಕೆಳಗಡೆ ʼಸಂವಿಧಾನ ರಕ್ಷಣಾ ಸಮಿತಿʼ ಎಂದು ಬರೆಯಲಾಗಿತ್ತು. ಅದು ಪೆನ್‌ ನಲ್ಲಿ ಬರೆದು ಸೇರಿಸಿದಂತೆ ಕಾಣುತ್ತಿತ್ತು. ಈ ಹಿಂದಿನ ಆಡಳಿತಾಧಿಕಾರಿ ದಿನೇಶ್ವರ್‌ ಶರ್ಮಾ "ಈ ಕಾಯ್ದೆಯಿಂದ ನಿಮಗೆ ಯಾವುದೇ ತೊಂದರೆ ಇಲ್ಲ" ಎಂದು ಭರವಸೆ ನೀಡಿದ ಬಳಿಕ ನಾವು ಪ್ರತಿಭಟನೆ ಹಿಂಪಡೆದಿದ್ದೆವು" ಎಂದು ಆಟ್ಟಕ್ಕೋಯ ಹೇಳಿದರು.

ನ್ಯಾಯಾಧೀಶರು ವರ್ಗಾವಣೆಯಾದ ಕಾರಣ ಅಂದಿನಿಂದ ಪ್ರಕರಣದ ವಿಚಾರಣೆ ನಡೆದಿಲ್ಲ. ಕೋಝಿಕ್ಕೋಡ್‌ ಜಿಲ್ಲಾ ನ್ಯಾಯಾಲಯಕ್ಕೆ ಈ ಪ್ರಕರಣದ ಉಸ್ತುವಾರಿ ವಹಿಸಲಾಗಿತ್ತು. ಲಾಕ್‌ ಡೌನ್‌ ಕಾರಣದಿಂದ ಅದನ್ನು ಕೈಗೆತ್ತಿಕೊಂಡಿಲ್ಲ" ಎಂದು ಅವರು ಹೇಳಿದರು. ಆಯಿಶಾ ಸುಲ್ತಾನಾ ದೇಶದ್ರೋಹ ಪ್ರಕರಣವು ಬೆಳಕಿಗೆ ಬಂದಂತೆ ಈ ಪ್ರಕರಣ ಸುದ್ದಿಯಾಗಿರಲಿಲ್ಲ ಎಂದು ವರದಿ ಉಲ್ಲೇಖಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News