ಟ್ರಕ್‌ ದಾಳಿಯಲ್ಲಿ ಕೊಲ್ಲಲ್ಪಟ್ಟ ಮುಸ್ಲಿಂ ಕುಟುಂಬಕ್ಕೆ ಕೆನಡಾ ಧ್ವಜ ಹೊದಿಸಿ ಸಕಲ ಗೌರವಗಳೊಂದಿಗೆ ಅಂತ್ಯಸಂಸ್ಕಾರ

Update: 2021-06-13 10:18 GMT
photo: reuters 

ಒಂಟಾರಿಯೋ: ಮುಸ್ಲಿಮರೆಂಬ ಏಕೈಕ ಕಾರಣಕ್ಕೆ ದುಷ್ಕರ್ಮಿಯೋರ್ವ ಕೆನಡಾದಲ್ಲಿ ವಾಕಿಂಗ್‌ ಹೊರಟಿದ್ದ ಕುಟುಂಬವೊಂದರ ಮೇಲೆ ಟ್ರಕ್‌ ಹತ್ತಿಸಿ ಕೊಂದಿದ್ದು, ಕೆನಡಾ ಪ್ರಧಾನಿ ಸೇರಿದಂತ ಹಲವಾರು ಮಂದಿ ಕೃತ್ಯಕ್ಕೆ ಖಂಡನೆ ವ್ಯಕ್ತಪಡಿಸಿದ್ದರು. ಇದೀಗ ಈ ಕುಟುಂಬಕ್ಕೆ ಸಕಲ ಸರಕಾರಿ ಗೌರವಗಳೊಂದಿಗೆ ಕೆನಡಾದ ಧ್ವಜ ಹೊದಿಸುವ ಮೂಲಕ ಅಂತ್ಯಸಂಸ್ಕಾರ ಕೈಗೊಳ್ಳಲಾಗಿದೆ. ಈ ಸಂದರ್ಭದಲ್ಲಿ ಸಾವಿರಾರು ಜನ ಪಾಲ್ಗೊಂಡಿದ್ದರು ಎಂದು reuters ವರದಿ ಮಾಡಿದೆ.

ಇಸ್ಲಾಮಿಕ್‌ ಸೆಂಟರ್‌ ಆಫ್‌ ಸೌತ್‌ ವೆಸ್ಟ್‌ ಒಂಟಾರಿಯೋದ ಆವರಣದಲ್ಲಿ ಅಂತ್ಯಸಂಸ್ಕಾರ ಕಾರ್ಯ ನಡೆಯಿತು. ಇಸ್ಲಾಮಿಕ್‌ ಪ್ರಾರ್ಥನೆಗಳು ಈ ಸಂದರ್ಭ ನೆರವೇರಿಸಲಾಯಿತು. ನಥಾನಿಯೆಲ್‌ ವೆಲ್ಟ್ ಮ್ಯಾನ್‌ ಎಂಬಾತ ಮಾಡಿದ ಈ ಕೃತ್ಯದಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದರು. ಇನ್ನೋರ್ವ 15ರ ಹರೆಯದ ಬಾಲಕ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆಂದು ತಿಳಿದು ಬಂದಿದೆ. 

ಮುಸ್ಲಿಮ್‌ ನಂಬಿಕೆಗಳನ್ನು ಹೊಂದಿದ್ದಾರೆಂಬ ಏಕೈಕ ಕಾರಣದಲ್ಲಿ ಈ ಕೃತ್ಯ ಎಸಗಲಾಗಿತ್ತು ಎಂದು ಪೊಲೀಸರು ತಿಳಿಸಿದ್ದರು. "ಕೆನಡಾದ ರಾಷ್ಟ್ರಧ್ವಜವನ್ನು ಹೊದಿಸಿ ಗೌರವ ಸಲ್ಲಿಸುತ್ತಿರುವುದು, ಸಂಪೂರ್ಣ ದೇಶವೇ ನಮ್ಮೊಂದಿಗೆ ನಿಂತಿದೆ ಎನ್ನುವುದನ್ನು ಸೂಚಿಸುತ್ತಿದೆ" ಎಂದು ಕೆನಡಾದ ಪಾಕಿಸ್ತಾನ ಹೈಕಮಿಶನರ್‌ ರಝಾ ಬಶೀರ್‌ ತರಾರ್‌ ತಿಳಿಸಿದ್ದಾರೆ. ಮೃತ ಕುಟುಂಬವು 14 ವರ್ಷಗಳ ಹಿಂದೆ ಪಾಕಿಸ್ತಾನದಿಂದ ಕೆನಡಾಕ್ಕೆ ಆಗಮಿಸಿತ್ತು ಎನ್ನಲಾಗಿದೆ.

photo: Reuters

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News