ಬೆಂಗಳೂರಿಗೆ ಬರುವವರಿಗೆ ಕೋವಿಡ್ ಪರೀಕ್ಷೆಗೆ ಸಿಎಂ ಯಡಿಯೂರಪ್ಪ ಸೂಚನೆ

Update: 2021-06-13 12:00 GMT

ಬೆಂಗಳೂರು, ಜೂ. 13: `ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಿರುವ ದಕ್ಷಿಣ ಕನ್ನಡ, ಮೈಸೂರು, ಚಿಕ್ಕಮಗಳೂರು ಸಹಿತ ಹತ್ತು ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ನಾಳೆ(ಜೂ.14) ಬೆಳಗ್ಗೆ 6 ಗಂಟೆಯಿಂದ ಲಾಕ್‍ಡೌನ್ ನಿರ್ಬಂಧ ಸಡಿಲಿಸಲಾಗುತ್ತಿದ್ದು, ರಾಜಧಾನಿ ಬೆಂಗಳೂರಿಗೆ ಹಿಂದಿರುಗುವ ನಾಗರಿಕರಿಗೆ ಕೋವಿಡ್ ತಪಾಸಣೆ ನಡೆಸಲು ಅಧಿಕಾರಿಗಳಿಗೆ ಸೂಚಿಸಲಾಗುವುದು' ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.

ರವಿವಾರ ಹಾಸನ, ಶಿವಮೊಗ್ಗ ಜಿಲ್ಲಾ ಪ್ರವಾಸ ಮುಗಿಸಿ ಹಿಂದಿರುಗಿದ ಸಂದರ್ಭದಲ್ಲಿ ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಲಾಕ್‍ಡೌನ್ ಸಡಿಲಿಕೆ ಬಳಿಕ ಹೊರ ಜಿಲ್ಲೆಗಳಿಂದ ಬೆಂಗಳೂರು ನಗರಕ್ಕೆ ಆಗಮಿಸುವವರ ಸಂಖ್ಯೆ ಹೆಚ್ಚಾಗಿದೆ. ಕೋವಿಡ್ ಸೋಂಕು ಹರಡುವ ಸಾಧ್ಯತೆ ಇದೆ. ಹೀಗಾಗಿ, ಅಧಿಕಾರಿಗಳ ಜೊತೆ ಮಾತನಾಡಿ ಬೆಂಗಳೂರಿಗೆ ಬರುವವರಿಗೆ ಪರೀಕ್ಷೆ ಮಾಡಲು ಸೂಚಿಸುತ್ತೇನೆ. ಸೋಂಕು ತಡೆಗೆ ಕಠಿಣ ಕ್ರಮ ವಹಿಸುತ್ತೇವೆ ಎಂದು ಹೇಳಿದರು.

ಹಾಸನ, ಶಿವಮೊಗ್ಗ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯದ ಬಗ್ಗೆ ಪರಿಶೀಲನೆ ನಡೆಸಿದ್ದು, ವಾರದಲ್ಲಿ ಒಮ್ಮೆ ಜಿಲ್ಲೆಗಳಿಗೆ ತೆರಳಿ ಕೋವಿಡ್ ಪರಿಸ್ಥಿತಿ ಸೇರಿದಂತೆ ಅಭಿವೃದ್ದಿ ಕಾರ್ಯಗಳ ಪ್ರಗತಿ ಪರಿಶೀಲನೆ ನಡೆಸಲಾಗುವುದು ಎಂದ ಅವರು, ಹೀಗೆ ಪರಿಶೀಲನೆ ನಡೆಸುವುದರಿಂದ ವಾಸ್ತವ ಪರಿಸ್ಥಿತಿ ಗೊತ್ತಾಗಲಿದೆ. ಅಲ್ಲದೆ, ಅಭಿವೃದ್ಧಿ ಕಾರ್ಯಗಳಿಗೆ ವೇಗ ಸಿಗಲಿದೆ ಎಂದು ಯಡಿಯೂರಪ್ಪ ತಿಳಿಸಿದರು.

ಹಾಸನ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಪ್ರಗತಿಯಲ್ಲಿದೆ. ಆದಷ್ಟು ಶೀಘ್ರದಲ್ಲೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರೊಂದಿಗೆ ಶಂಕುಸ್ಥಾಪನೆ ನಡೆಸಿ, ಅಭಿವೃದ್ಧಿಪಡಿಸಲಾಗುವುದು ಎಂದ ಯಡಿಯೂರಪ್ಪ, ಖಾಸಗಿ ಶಾಲೆಗಳ ಶುಲ್ಕ (ಫೀಸ್) ಕಡಿಮೆ ಮಾಡದ ವಿಚಾರ ಕುರಿತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಜೊತೆ ಚರ್ಚೆ ಮಾಡುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News