ಬಡ ದೇಶಗಳ ಮೂಲಸೌಕರ್ಯದಲ್ಲಿ ಬೃಹತ್ ಹೂಡಿಕೆ: ಜಿ7 ದೇಶಗಳ ಗುಂಪಿನ ನಿರ್ಧಾರ

Update: 2021-06-13 17:10 GMT

ಕಾರ್ಬಿಸ್ ಬೇ (ಇಂಗ್ಲೆಂಡ್), ಜೂ. 13: ಬಡ ಮತ್ತು ಮಧ್ಯಮ ಆದಾಯದ ದೇಶಗಳ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ನೂರಾರು ಬಿಲಿಯ ಡಾಲರ್ ಹೂಡಿಕೆ ಮಾಡುವ ಪ್ರಸ್ತಾವವನ್ನು ಜಿ7 ಎಂಬ ಶ್ರೀಮಂತ ದೇಶಗಳ ಗುಂಪು ಶನಿವಾರ ಮುಂದಿಟ್ಟಿದೆ.

‌ಬ್ರಿಟನ್ ನಲ್ಲಿ ನಡೆಯುತ್ತಿರುವ ಜಿ7 ದೇಶಗಳ ಮೂರು ದಿನಗಳ ದೈಹಿಕ ಶೃಂಗ ಸಮ್ಮೇಳನದ ಎರಡನೇ ದಿನವಾದ ಶನಿವಾರ ಆ ದೇಶಗಳ ನಾಯಕರು ಈ ಬಗ್ಗೆ ಮಾತುಕತೆ ನಡೆಸಿದ್ದಾರೆ.
ಬ್ರಿಟನ್, ಕೆನಡ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್ ಮತ್ತು ಅಮೆರಿಕ ಜಿ7 ಗುಂಪಿನ ಸದಸ್ಯ ದೇಶಗಳಾಗಿವೆ.

‘ಬಿಲ್ಡ್ ಬ್ಯಾಕ್ ಬೆಟರ್ ವರ್ಲ್ಡ್’ (ಬಿ3ಡಬ್ಲ್ಯು) (ಮತ್ತೊಮ್ಮೆ ಉತ್ತಮ ಜಗತ್ತಿನ ನಿರ್ಮಾಣ) ಎಂಬ ಯೋಜನೆಯಡಿ ಬಡ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ಮೂಲಸೌಕರ್ಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಈ ದೇಶಗಳು ಉದ್ದೇಶಿಸಿವೆ. ಚೀನಾದ ‘ಬೆಲ್ಟ್ ಆ್ಯಂಡ್ ರೋಡ್ ಇನಿಶಿಯೇಟಿವ್’ ಎಂಬ ಬೃಹತ್ ಮೂಲಸೌಕರ್ಯ ಯೋಜನೆಗೆ ಪ್ರತಿಯಾಗಿ ಪಾಶ್ಚಿಮಾತ್ಯ ದೇಶಗಳು ಈ ಯೋಜನೆಯನ್ನು ಕೈಗೆತ್ತಿಕೊಂಡಿವೆ ಎನ್ನಲಾಗಿದೆ.
ಚೀನಾದ ಮೂಲಸೌಕರ್ಯ ಯೋಜನೆಯು ಸಣ್ಣ ಮತ್ತು ಬಡ ದೇಶಗಳ ಮೇಲೆ ಬೃಹತ್ ಸಾಲದ ಹೊರೆಯನ್ನು ಹೊರಿಸುತ್ತದೆ ಎಂಬುದಾಗಿ ಆರೋಪಿಸಲಾಗಿದೆ.

ಸಣ್ಣ ದೇಶಗಳ ಗುಂಪು ಜಗತ್ತು ಆಳಲಾರದು: ಚೀನಾ

ದೇಶಗಳ ಸಣ್ಣ ಗುಂಪೊಂದು ಜಗತ್ತಿನ ಹಣೆಬರಹವನ್ನು ನಿರ್ಧರಿಸುವ ದಿನಗಳು ಹೋಗಿವೆ ಎಂದು ಚೀನಾ ರವಿವಾರ ಹೇಳಿದೆ. ಕೋವಿಡ್-19 ಸಾಂಕ್ರಾಮಿಕದ ಮೂಲದ ವಿಷಯದಲ್ಲಿ ದೇಶಗಳು ಚೀನಾ ವಿರುದ್ಧ ಒಗ್ಗಟ್ಟಿನ ನಿರ್ಧಾರವೊಂದನ್ನು ತಳೆಯಬೇಕು ಎಂಬ ಇಂಗಿತವನ್ನು ಜಿ7 ದೇಶಗಳು ವ್ಯಕ್ತಪಡಿಸಿದ ಬಳಿಕ ಚೀನಾ ರವಿವಾರ ಈ ಪ್ರತ್ರಿಕ್ರಿಯೆ ನೀಡಿದೆ.

‘‘ದೇಶಗಳು ದೊಡ್ಡದಾಗಿರಲಿ ಸಣ್ಣದಾಗಿರಲಿ, ಪ್ರಬಲವಾಗಿರಲಿ ದುರ್ಬಲವಾಗಿರಲಿ, ಬಡವರಾಗಿರಲಿ ಶ್ರೀಮಂತವಾಗಿರಲಿ, ಅವುಗಳು ಸಮಾನ ಹಾಗೂ ಜಾಗತಿಕ ವ್ಯವಹಾರಗಳನ್ನು ಎಲ್ಲ ದೇಶಗಳೊಂದಿಗೆ ಸಮಾಲೋಚನೆ ನಡೆಸುವ ಮೂಲಕ ನಿಭಾಯಿಸಬೇಕು ಎಂಬುದಾಗಿ ನಾವು ಯಾವತ್ತೂ ಭಾವಿಸಿದ್ದೇವೆ’’ ಎಂದು ಲಂಡನ್ನಲ್ಲಿರುವ ಚೀನಾ ರಾಯಭಾರ ಕಚೇರಿಯ ವಕ್ತಾರರೊಬ್ಬರು ಹೇಳಿದ್ದಾರೆ.

ಬಡ ದೇಶಗಳಿಗೆ 100 ಕೋಟಿ ಕೋವಿಡ್-19 ಲಸಿಕಾ ಡೋಸ್: ಜಿ7

ಬಡ ದೇಶಗಳಿಗೆ 100 ಕೋಟಿ ಕೋವಿಡ್-19 ಲಸಿಕೆಯ ಡೋಸ್ಗಳನ್ನು ನೀಡುವ ಏಳು ಶ್ರೀಮಂತ ದೇಶಗಳ ಗುಂಪು ‘ಜಿ7’ರ ಯೋಜನೆಯು ಮಹಾತ್ವಾಕಾಂಕ್ಷೆಯನ್ನು ಹೊಂದಿಲ್ಲ ಎಂದು ವಿಶ್ಲೇಷಕರು ಶುಕ್ರವಾರ ಹೇಳಿದ್ದಾರೆ. ಈ ಯೋಜನೆಯು ಅತ್ಯಂತ ನಿಧಾನದ ಯೋಜನೆಯಾಗಿದೆ ಹಾಗೂ ಶತಮಾನದ ಅತ್ಯಂತ ಭೀಕರ ಆರೋಗ್ಯ ಬಿಕ್ಕಟ್ಟನ್ನು ನಿವಾರಿಸಲು ಅಗತ್ಯವಾದ ತೀವ್ರತೆಯೊಂದಿಗೆ ಪಾಶ್ಚಾತ್ಯ ನಾಯಕರು ಕೆಲಸ ಮಾಡುತ್ತಿಲ್ಲ ಎನ್ನುವುದನ್ನು ಇದು ತೋರಿಸುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಜಿ7 ದೇಶಗಳ ನಿರ್ಧಾರವನ್ನು ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆ್ಯಂಟನಿ ಗುಟೆರಸ್ ಸ್ವಾಗತಿಸಿದ್ದಾರೆ. ಆದರೆ, ಇದಕ್ಕಿಂತಲೂ ಹೆಚ್ಚಿನ ಉಪಕ್ರಮಗಳು ಬೇಕಾಗಿವೆ ಎಂದು ಅವರು ಹೇಳಿದ್ದಾರೆ.

ಅಭಿವೃದ್ಧಿಶೀಲ ದೇಶಗಳಲ್ಲಿರುವ ಜನರಿಗೆ ಕ್ಷಿಪ್ರವಾಗಿ ಕೊರೋನ ವೈರಸ್ ಲಸಿಕೆ ಹಾಕದಿದ್ದರೆ, ವೈರಸ್ ಇನ್ನಷ್ಟು ರೂಪಾಂತರಗೊಳ್ಳಬಹುದು ಹಾಗೂ ಹೊಸ ಲಸಿಕೆಗಳಿಗೆ ನಿರೋಧಕ ಶಕ್ತಿ ಬೆಳೆಸಿಕೊಳ್ಳಬಹುದು ಎಂದು ಅವರು ಎಚ್ಚರಿಸಿದ್ದಾರೆ.

‘‘ನಮಗೆ ಇದಕ್ಕಿಂತಲೂ ಹೆಚ್ಚಿನದು ಬೇಕು’’ ಎಂದು ಜಿ7 ಗುಂಪಿನ ನಿರ್ಧಾರಕ್ಕೆ ಪ್ರತಿಕ್ರಿಯಿಸಿದ ಗುಟೆರಸ್ ಹೇಳಿದರು. ‘‘ನಮಗೆ ಜಾಗತಿಕ ಲಸಿಕಾ ಯೋಜನೆಯೊಂದು ಬೇಕಾಗಿದೆ. ನಾವು ತರ್ಕ, ತುರ್ತು ಮತ್ತು ಯುದ್ಧಕಾಲೀನ ಆರ್ಥಿಕತೆಯ ಆದ್ಯತೆಗಳೊಂದಿಗೆ ಕೆಲಸ ಮಾಡಬೇಕಾಗಿದೆ. ಅದರಿಂದ ನಾವು ಇನ್ನೂ ತುಂಬಾ ದೂರದಲ್ಲಿದ್ದೇವೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News