ಅಮೆರಿಕದ ಹಿಂದುತ್ವ ಗುಂಪುಗಳಿಗೆ ಕೋವಿಡ್-19 ನಿಧಿಯಿಂದ ಹಣ; ವರದಿ ಮಾಡಿದ್ದ ಭಾರತೀಯ ಪತ್ರಕರ್ತನಿಗೆ ಬೆದರಿಕೆ

Update: 2021-06-14 09:39 GMT
ರಾಕಿಬ್ ಹಮೀದ್ ನಾಯ್ಕ್ (Photo: Facebook)

ಹೊಸದಿಲ್ಲಿ,ಜೂ.14: ಅಮೆರಿಕದಲ್ಲಿ ಕೋವಿಡ್-19 ಪರಿಹಾರ ನಿಧಿಯ ದುರುಪಯೋಗದ ಬಗ್ಗೆ ವರದಿ ಮಾಡಿದ್ದಕ್ಕಾಗಿ ಭಾರತೀಯ ಪತ್ರಕರ್ತ ರಾಕಿಬ್ ಹಮೀದ್ ನಾಯ್ಕ್ ಅವರಿಗೆ ಹಿಂದುತ್ವ ಸಾಮಾಜಿಕ ಮಾಧ್ಯಮ ಬಳಕೆದಾರರು ಆನ್‌ಲೈನ್‌ನಲ್ಲಿ ಕಿರುಕುಳ ನೀಡುತ್ತಿರುವುದನ್ನು ಮತ್ತು ಜೀವ ಬೆದರಿಕೆಗಳನ್ನು ಒಡ್ಡಿರುವುದನ್ನು ಸುದ್ದಿ ಸಂಸ್ಥೆ ಅಲ್ ಜಝೀರಾ ಮೀಡಿಯಾ ನೆಟ್‌ವರ್ಕ್ಸ್ (ಎಜೆಎಂಎನ್) ಖಂಡಿಸಿದೆ.

ಎಪ್ರಿಲ್‌ನಲ್ಲಿ ಅಲ್ ಜಝೀರಾದಲ್ಲಿ ಪ್ರಕಟಗೊಂಡಿದ್ದ ನಾಯ್ಕ್ ಅವರ ಲೇಖನಗಳಲ್ಲಿ ಅಮೆರಿಕದ ಕೋವಿಡ್-19 ಪರಿಹಾರ ನಿಧಿಯಿಂದ 8,33,000 ಡಾ.ಗಳನ್ನು (6.10 ಕೋ.ರೂ.ಗೂ ಅಧಿಕ) ‘ಹಿಂದುತ್ವ ಗುಂಪುಗಳ’ ಜೊತೆ ನಂಟು ಹೊಂದಿರುವ ಹಿಂದು ಅಮೆರಿಕನ್ ಫೌಂಡೇಷನ್ ಮತ್ತು ಇತರ ನಾಲ್ಕು ಅಮೆರಿಕ ಪ್ರತಿಷ್ಠಾನಗಳಿಗೆ ನೀಡಲಾಗಿದೆ ಎಂದು ಬೆಟ್ಟು ಮಾಡಲಾಗಿತ್ತು.

ನಾಯ್ಕ್ ತನಗೆ ಜೀವ ಬೆದರಿಕೆಗಳ ಬಗ್ಗೆ ಈಗಾಗಲೇ ಅಮೆರಿಕದ ಕಾನೂನು ಜಾರಿ ಏಜೆನ್ಸಿಗಳಿಗೆ ಮಾಹಿತಿ ನೀಡಿದ್ದಾರೆ, ಆದರೆ ಕೇವಲ ತನ್ನ ಕರ್ತವ್ಯವನ್ನು ನಿರ್ವಹಿಸಿದ್ದಕ್ಕಾಗಿ ಆನ್‌ಲೈನ್‌ನಲ್ಲಿ ವ್ಯಕ್ತಿಗಳು ಮತ್ತು ಗುಂಪುಗಳಿಂದ ಅವರಿಗೆ ಕಿರುಕುಳ ಮುಂದುವರಿದಿದೆ ಎಂದು ಹೇಳಿಕೆಯಲ್ಲಿ ತಿಳಿಸಿರುವ ಅಲ್ ಜಝೀರಾ, ನಾಯ್ಕ್ ಅವರ ಕಳಂಕರಹಿತ ಪತ್ರಿಕೋದ್ಯಮವನ್ನು ಮತ್ತು ಅವರ ವೃತ್ತಿಪರ ಕೊಡುಗೆಯನ್ನು ಎಜೆಎಂಎನ್ ಬೆಂಬಲಿಸುತ್ತದೆ ಎಂದು ಹೇಳಿದೆ.

ಹಿಂದು ಅಮೆರಿಕನ್ ಫೌಂಡೇಷನ್, ವಿಶ್ವ ಹಿಂದು ಪರಿಷದ್ ಅಮೆರಿಕಾ, ಏಕಲ್ ಅಮೆರಿಕನ್ ಫೌಂಡೇಷನ್ ಆಫ್ ಯುಎಸ್‌ಎ, ಇನ್ಫಿನಿಟಿ ಫೌಂಡೇಷನ್ ಮತ್ತು ಸೇವಾ ಇಂಟರ್‌ನ್ಯಾಷನಲ್ ಕೋವಿಡ್-19 ಬಿಕ್ಕಟ್ಟಿನ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಉದ್ಯಮಗಳಿಗೆ ಆರ್ಥಿಕ ಪರಿಹಾರವನ್ನೊದಗಿಸುವ ಮತ್ತು ಅವು ತಮ್ಮ ಉದ್ಯೋಗಿಗಳನ್ನು ಕೆಲಸದಲ್ಲಿ ಮುಂದುವರಿಸಲು ನೆರವಾಗುವ ಉದ್ದೇಶದ ಮೂರು ಕಾರ್ಯಕ್ರಮಗಳಡಿ ಹಣವನ್ನು ಪಡೆದುಕೊಂಡಿವೆ ಎಂದು ಲೇಖನಗಳಲ್ಲಿ ಹೇಳಲಾಗಿತ್ತು.

ಈ ಐದು ಸಂಸ್ಥೆಗಳು ಆರೆಸ್ಸೆಸ್ ಜೊತೆ ಸಂಬಂಧವನ್ನು ಹೊಂದಿವೆ ಎಂದು ಆರೋಪಿಸಿದ್ದ ‘ಕೋಯಲಿಶನ್ ಟು ಸ್ಟಾಪ್ ಜೆನೊಸೈಡ್ ಇನ್ ಇಂಡಿಯಾ’ದ ಹೇಳಿಕೆಯನ್ನು ಅಲ್ ಜಝೀರಾದಲ್ಲಿ ಪ್ರಕಟಗೊಂಡಿದ್ದ ಲೇಖನವೊಂದು ಉಲ್ಲೇಖಿಸಿತ್ತು.

ಈ ಐದು ಸಂಸ್ಥೆಗಳು ಈ ಹಣವನ್ನು ಭಾರತದಲ್ಲಿ ಮುಸ್ಲಿಮರು ಮತ್ತು ಇತರ ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಅಭಿಯಾನವನ್ನು ಇನ್ನಷ್ಟು ತೀವ್ರಗೊಳಿಸಲು ಬಳಸಬಹುದು ಎಂದು ಅಮೆರಿಕದ ಹಿಂದುಸ್ ಫಾರ್ ಹ್ಯೂಮನ್ ರೈಟ್ಸ್ ಸಂಘಟನೆಯ ಸಹಸ್ಥಾಪಕಿ ಸುನೀತಾ ವಿಶ್ವನಾಥ ಕಳವಳ ವ್ಯಕ್ತಪಡಿಸಿದ್ದನ್ನೂ ವರದಿಯು ಉಲ್ಲೇಖಿಸಿತ್ತು.

ಮೇ 7ರಂದು ಹಿಂದು ಅಮೆರಿಕನ್ ಫೌಂಡೇಷನ್ ಕೊಲಂಬಿಯಾ ಜಿಲ್ಲಾ ನ್ಯಾಯಾಲಯದಲ್ಲಿ ಮಾನಹಾನಿ ಮೊಕದ್ದಮೆಯನ್ನು ದಾಖಲಿಸಿದ್ದು, ನಾಯ್ಕ್ ಜೊತೆಗೆ ಹಿಂದುಸ್ ಫಾರ್ ಹ್ಯೂಮನ್ ರೈಟ್ಸ್‌ನ ಸಹಸ್ಥಾಪಕರಾದ ವಿಶ್ವನಾಥ್ ಮತ್ತು ರಾಜು ರಾಜಗೋಪಾಲ ಹಾಗೂ ರಟ್ಜರ್ಸ್ ವಿವಿಯ ಪ್ರೊಫೆಸರ್ ಆಂಡ್ರೆ ಟ್ರಷ್ಕೆ ಸೇರಿದಂತೆ ಲೇಖನದಲ್ಲಿ ಉಲ್ಲೇಖಿತರನ್ನು ಮೊಕದ್ದಮೆಯಲ್ಲಿ ಹೆಸರಿಸಲಾಗಿದೆ. ಇವರೆಲ್ಲ ವರದಿ ಮತ್ತು ಹಿಂದು ಅಮೆರಿಕನ್ ಫೌಂಡೇಷನ್ ಬಗ್ಗೆ ಟ್ವೀಟಿಸಿದ್ದರು.

ಇದು ಕೇವಲ ತನ್ನನ್ನು ಹಾಗೂ ಇತರ ಕಾರ್ಯಕರ್ತರನ್ನು ಬೆದರಿಸಲು ಮತ್ತು ಮೌನವಾಗಿಸಲು ಹೂಡಿರುವ ಮೊಕದ್ದಮೆಯಾಗಿದೆ. ಇದು ಪತ್ರಿಕಾ ಸ್ವಾತಂತ್ರದ ಮೇಲಿನ ದಾಳಿಯಾಗಿದೆ ಎಂದು ನಾಯ್ಕಾ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News