ಅನ್‍ಲಾಕ್ ಪ್ರಕ್ರಿಯೆ ಆರಂಭದ ನಡುವೆ ಬೆಂಗಳೂರಿನಲ್ಲಿ ತರಕಾರಿ ಬೆಲೆ ಗಗನಕ್ಕೆ

Update: 2021-06-14 14:04 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜೂ.14: ಕೋವಿಡ್ ಸಂಬಂಧ ಅನ್‍ಲಾಕ್ ಪ್ರಕ್ರಿಯೆ ಆರಂಭದ ನಡುವೆ ರಾಜಧಾನಿ ಬೆಂಗಳೂರಿನಲ್ಲಿ ಇಂಧನ ಮಾತ್ರವಲ್ಲದೆ, ತರಕಾರಿ ಬೆಲೆಯೂ ಗಗನಕ್ಕೇರಿರುವುದನ್ನು ನೋಡಿ ಗ್ರಾಹಕರು ದಂಗಾಗಿದ್ದಾರೆ.

ರಾಜ್ಯ ಸೇರಿದಂತೆ ಎಲ್ಲೆಡೆ ಹೆಚ್ಚಿನ ಮಳೆ ಆಗುತ್ತಿರುವುದರಿಂದ ತೋಟಗಾರಿಕೆ ಬೆಳೆಗಳು ನೆಲಕಚ್ಚಿದ್ದು, ಪ್ರತಿದಿನವೂ ತರಕಾರಿ ಮತ್ತು ಸೊಪ್ಪಿನ ಬೆಲೆಯೂ ದ್ವಿಗುಣವಾಗುತ್ತಿದೆ. ಒಟ್ಟಿನಲ್ಲಿ ಕೋವಿಡ್ ಸಂಕಷ್ಟದ ಜತೆಗೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ.

ದಿನಬಳಕೆಯ ಆಲೂಗಡ್ಡೆ, ಕ್ಯಾರೆಟ್, ತೊಂಡೆಕಾಯಿ, ಬೆಂಡೇಕಾಯಿ, ಬೀನ್ಸ್, ನುಗ್ಗೇಕಾಯಿ, ಹೂಕೋಸು, ಹಣ್ಣು ಬೀನ್ಸ್, ಬದನೆಕಾಯಿ, ಹಸಿ ಬಟಾಣಿ ಸೇರಿದಂತೆ ಇನ್ನಿತರೆ ತರಕಾರಿ ಬೆಲೆಯೂ ಸೂಪರ್ ಮಾರ್ಕೆಟ್‍ಗಳು, ಮಾರುಕಟ್ಟೆ, ಬೀದಿ ಬದಿ ಸೇರಿದಂತೆ ನಗರದ ವಿವಿಧೆಡೆ ಹೆಚ್ಚಳವಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಬೆಂಗಳೂರು ಈರುಳ್ಳಿ ಮತ್ತು ಆಲೂಗಡ್ಡೆ ವ್ಯಾಪಾರಿಗಳ ಸಂಘದ ಅಧ್ಯಕ್ಷ ಕೆ.ಲೋಕೇಶ್, ನೆರೆಯ ರಾಜ್ಯಗಳಲ್ಲಿ ವಿಪರೀತ ಮಳೆಯಿಂದಾಗಿ ತರಕಾರಿ ಬೆಳೆಗಳು ಹಾನಿಗೀಡಾಗಿವೆ. ಮಳೆ ಮತ್ತು ಮೋಡ ಮುಸುಕಿದ ವಾತಾವರಣದ ಕಾರಣಕ್ಕೆ ರೋಗಬಾಧೆ ಕಾಣಿಸಿಕೊಂಡಿದ್ದು, ತರಕಾರಿ ಬೆಳೆಗಳು ಹೆಚ್ಚಿನ ಪ್ರಮಾಣದಲ್ಲಿ ನಾಶವಾಗಿವೆ ಎಂದರು.

ಮತ್ತೊಂದೆಡೆ ತರಕಾರಿ ಮಾತ್ರವಲ್ಲದೆ ಹೂವು ವ್ಯಾಪಾರದಲ್ಲಿಯೂ ನಷ್ಟ ಉಂಟಾಗಿದೆ. ವ್ಯಾಪಾರವಿಲ್ಲದೆ ಕೆಲವೇ ಕೆಲವು ಹೂವುಗಳೊಂದಿಗೆ ಹೂವಿನ ವ್ಯಾಪಾರಸ್ಥರು ಬೇಸರದಲ್ಲಿ ನಿಂತಿರುವುದು ನಗರದ ಕೆಆರ್ ಮಾರ್ಕೆಟ್ ಬಳಿ ಕಂಡುಬಂತು.

ಈ ಹಿಂದೆ 10 ಗಂಟೆಯ ನಂತರ ಮಾರಾಟಕ್ಕೆ ಅವಕಾಶ ಇಲ್ಲವಾದ್ದರಿಂದ ಹೆಚ್ಚು ಹೂವು ಖರೀದಿಸುತ್ತಿಲ್ಲ. ಕೊನೇ ಘಳಿಗೆಯಲ್ಲಿ ಕೇಳಿದಷ್ಟು ದರಕ್ಕೆ ಕೊಡಬೇಕಾದ ಅನಿವಾರ್ಯತೆ ಇದೆ. ಇಲ್ಲದಿದ್ದರೆ ಹೂವು ಬಾಡುವುದರಿಂದ ಹೆಚ್ಚಿನ ನಷ್ಟ ಅನುಭವಿಸಬೇಕಾಗುತ್ತದೆ ಎನ್ನುತ್ತಾರೆ ಹೂವಿನ ವ್ಯಾಪಾರಿ ಶ್ರೀನಿವಾಸಲು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News