ಕನ್ನಡ ಸಾಹಿತ್ಯಕ್ಕೆ ಹೊಸ ಕಣ್ಣು ನೀಡಿದ ಕೀರ್ತಿ ಸಿದ್ದಲಿಂಗಯ್ಯರಿಗೆ ಸಲ್ಲುತ್ತದೆ: ಡಾ.ಎಲ್.ಹನುಮಂತಯ್ಯ

Update: 2021-06-14 15:05 GMT

ಬೆಂಗಳೂರು, ಜೂ. 14: `ದಲಿತ-ಬಂಡಾಯ ಚಳವಳಿಗಳಿಗೆ ಹಾಗೂ ಕನ್ನಡ ಸಾಹಿತ್ಯಕ್ಕೆ ಹೊಸ ದಿಕ್ಕು ಮತ್ತು ಹೊಸ ಕಣ್ಣು ನೀಡಿದ ಕೀರ್ತಿ, ಖ್ಯಾತ ಕವಿ, ನಾಡೋಜ ಡಾ.ಸಿದ್ದಲಿಂಗಯ್ಯ ಅವರಿಗೆ ಸಲ್ಲುತ್ತದೆ. ಮಾತ್ರವಲ್ಲ ಒಂದು ಸಮುದಾಯದ ಬದಲಾವಣೆಗೂ ಅವರು ಕಾರಣವಾಗಿದ್ದಾರೆ' ಎಂದು ರಾಜ್ಯಸಭಾ ಸದಸ್ಯ ಹಾಗೂ ಹಿರಿಯ ಸಾಹಿತಿ ಡಾ.ಎಲ್.ಹನುಮಂತಯ್ಯ ಇಂದಿಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸೋಮವಾರ ರಾಜ್ಯ ಬಂಡಾಯ ಸಾಹಿತ್ಯ ಸಂಘಟನೆ ಏರ್ಪಡಿಸಿದ್ದ ಸಿದ್ದಲಿಂಗಯ್ಯ 'ನುಡಿ ನಮನ' ಆನ್‍ಲೈನ್ ಸಭೆಯಲ್ಲಿ ಮಾತನಾಡಿದ ಅವರು, 'ಸಿದ್ದಲಿಂಗಯ್ಯನವರ ಕಾವ್ಯ ದಲಿತ, ಬಂಡಾಯ ಸಂಘಟನೆಗಳ ಪ್ರಾರ್ಥನಾ ಗೀತೆಗಳಂತೆ ಆಗಿದ್ದವು. ಯಾವುದೇ ಹೋರಾಟ ಅಥವಾ ಚಳವಳಿಯಲ್ಲಿ ಸಿದ್ದಲಿಂಗಯ್ಯನವರ ಗೀತೆಗಳಿಂದಲೇ ಆರಂಭವಾಗುತ್ತಿದ್ದವು' ಎಂದು ಇದೇ ವೇಳೆ ಸ್ಮರಿಸಿದರು.

'ಯಾವುದೇ ಲೇಖಕ ದಂತ ಗೋಪುರದಲ್ಲಿ ಇರಬಾರದು. ಆತ ಜನರ ನಡುವೆಯೇ ಇದ್ದು, ಜನರ ಪ್ರತಿನಿಧಿಯಾಗಿ ಇರಬೇಕು ಎಂಬುದನ್ನು ಸಿದ್ದಲಿಂಗಯ್ಯನವರ ಕಾವ್ಯದ ಮೂಲಕ ಧ್ವನಿಸಿದರು. ಅದರ ಪರಿಣಾಮದಿಂದಾಗಿಯೇ ಎಪ್ಪತ್ತರ ದಶಕದಲ್ಲಿ ರಾಜ್ಯದಲ್ಲಿ ಹಲವು ಬರಹಗಾರರಿಗೆ ಅವರು ಪ್ರೇರಣೆ ಮಾತ್ರವಲ್ಲ ದಲಿತ-ಬಂಡಾಯ ಚಳವಳಿಯ ಪ್ರೇರಕ ಶಕ್ತಿಯೂ ಆಗಿದ್ದರು' ಎಂದು ಡಾ.ಹನುಮಂತಯ್ಯ ನೆನಪು ಮಾಡಿಕೊಂಡರು.

ಸಿದ್ದಲಿಂಗಯ್ಯನವರ `ಹೊಲೆ ಮಾದಿಗರ ಹಾಡು' ಸೇರಿದಂತೆ ಅವರ ಎಲ್ಲ ಕಾವ್ಯ ಬರಹಗಳನ್ನು ಕನ್ನಡ ಸಾಹಿತ್ಯ ಮುಖ್ಯಧಾರೆಯಲ್ಲಿ ಸ್ವೀಕರಿಸಿದ್ದು, ಅವರ ಮತ್ತಷ್ಟು ಉಚ್ಚ್ರಾಯ ಸ್ಥಿತಿಗೆ ಏರಲು ಸಾಧ್ಯವಾಯಿತು ಎಂದ ಡಾ.ಹನುಮಂತಯ್ಯ, ಸಿದ್ದಲಿಂಗಯ್ಯನವರು ಇತ್ತೀಚಿನ ದಿನಗಳಲ್ಲಿ ಬಿಜೆಪಿಯ ಮುಖಂಡ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದು, ಯಡಿಯೂರಪ್ಪನವರ ಕುರಿತು ಅವರು ಆಡಿದ ಮಾತುಗಳು ವಿವಾದಕ್ಕೂ ಕಾರಣವಾಗಿದ್ದವು. ಆ ಬಳಿಕ ಸಿದ್ದಲಿಂಗಯ್ಯನವರೇ ಅದಕ್ಕೆ ಲೇಖನ ಬರೆಯುವ ಮೂಲಕ ಸ್ಪಷ್ಟನೆ ನೀಡಬೇಕಾಯಿತು ಎಂದರು.

ಲೇಖಕ ಬಸವರಾಜ ಸಬರದ ಮಾತನಾಡಿ, `ಪ್ರತಿಭೆಗಳು ಗುಡಿಸಲಿನಲ್ಲಿ ಹುಟ್ಟಿ ಅರಮನೆಯಲ್ಲಿ ಸಾಯುತ್ತವೆ' ಎಂಬ ಶೇಕ್ಸ್ ಪಿಯರ್ ಮಾತನ್ನು ಉಲ್ಲೇಖಿಸಿ ಸಿದ್ದಲಿಂಗಯ್ಯನವರಿಗೆ ಇದು ಸರಿಯಾಗಿ ಅನ್ವಯಿಸುತ್ತದೆ. ಸಿದ್ದಲಿಂಗಯ್ಯ ಇತ್ತೀಚಿನ ದಿನಗಳಲ್ಲಿ ಕೋಮುವಾದಿ ಬಿಜೆಪಿಯೊಂದಿಗೆ ಸಖ್ಯ ಹೊಂದಿದ್ದು, ನನ್ನಂತಹ ಹಲವರಿಗೆ ಬೇಸರವನ್ನು ಮೂಡಿಸಿತ್ತು ಎಂದು ಟೀಕಿಸಿದರು.

ಸಿದ್ದಲಿಂಗಯ್ಯನವರು `ಗ್ರಾಮ ದೇವತೆಗಳ ಅಧ್ಯಯನ'ದ ಮೂಲಕ ಇತಿಹಾಸ, ಪುರಾಣ, ದೇವರು, ಧರ್ಮಗಳನ್ನು ಇಪ್ಪತ್ತೊಂದನೆಯ ಶತಮಾನದ ನಮ್ಮ ಕಾಲಕ್ಕೆ ಹೇಗೆ ಕಟ್ಟಿಕೊಡಬೇಕೆಂಬುದನ್ನು ನಾವು ಅವರಿಂದ ಕಲಿಯಬೇಕಿದೆ. ವಿಡಂಬನೆ, ವ್ಯಂಗ್ಯದ ಮೂಲಕವೇ ಜನರಿಗೆ ವಿಚಾರಗಳನ್ನು ತಿಳಿಸುವ ಮತ್ತು ಅವುಗಳಲ್ಲಿನ ಹುಳುಕುಗಳನ್ನು ಎತ್ತಿತೋರಿಸುವ ಕೆಲಸವನ್ನು ಅವರು ಮಾಡಿದ್ದಾರೆ. ಅಲ್ಲದೆ, ಸಮಕಾಲೀನ ಸಂದರ್ಭದಲ್ಲಿ ಸಾಹಿತ್ಯವನ್ನು ಹೇಗೆ ದುಡಿಸಿಕೊಳ್ಳಬೇಕು ಎಂದು ತೋರಿಸಿಕೊಟ್ಟಿದ್ದಾರೆ ಎಂದು ಬಸವರಾಜ ಸಬರದ ವಿಶ್ಲೇಷಿಸಿದರು.

ಬಾವುಕರಾದ ಶರೀಫಾ: `ಕೋವಿಡ್ ಸೋಂಕು ನಮ್ಮ ಸಮೀಪದವರು ತೀರಿಕೊಂಡರೂ ಹೋಗಿ ನೋಡಲು ಆಗದಂತಹ ದುಸ್ಥಿತಿಯನ್ನು ತಂದಿದೆ. ಒಂದು ವೈರಾಣು ಸಿದ್ದಲಿಂಗಯ್ಯ ಸೇರಿದಂತೆ ನಮ್ಮೆಲ್ಲರನ್ನು ಹೈರಾಣು ಮಾಡಿದೆ' ಎಂದು ಗದ್ಗದಿತರಾದ ಲೇಖಕಿ ಕೆ.ಶರೀಫಾ, `ದಲಿತ, ಬಂಡಾಯ ಚಳವಳಿ ಮತ್ತು ಸಂಘಟನೆಗಳಿಗೆ ಸಿದ್ದಲಿಂಗಯ್ಯರ ಕಾವ್ಯ ಪ್ರೇರಕ ಶಕ್ತಿಯಾಗಿತ್ತು' ಎಂದು ನೆನಪು ಮಾಡಿಕೊಂಡರು.

ಸಭೆಯಲ್ಲಿ ನಾಡೋಜ ಬರಗೂರು ರಾಮಚಂದ್ರಪ್ಪ, ಡಾ.ಬಂಜಗೆರೆ ಜಯಪ್ರಕಾಶ್, ಎಚ್.ಎಲ್.ಪುಷ್ಪಾ, ರಾಜಪ್ಪ ದಳವಾಯಿ, ಸರಜೂ ಕಾಟ್ಕರ್, ಭಕ್ತರಹಳ್ಳಿ ಕಾಮರಾಜ್, ಬಿ.ರಾಜಶೇಖರಮೂರ್ತಿ ಸೇರಿದಂತೆ ದಲಿತ ಮತ್ತು ಬಂಡಾಯ ಸಾಹಿತ್ಯ ಸಂಘಟನೆಗಳ ಪ್ರಮುಖರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News