ಜೋರ್ಡಾನ್ ರಾಜಕುಮಾರ ಹಂಝಾ ಸೌದಿ ನೆರವಿನಿಂದ ದೊರೆ ಅಬ್ದುಲ್ಲಾರನ್ನು ಕಿತ್ತೊಗೆಯಲು ಬಯಸಿದ್ದರು: ಮೊಕದ್ದಮೆಯಲ್ಲಿ ಆರೋಪ

Update: 2021-06-14 15:37 GMT

photo: twitter@HamzahHKJ

ಅಮ್ಮಾನ್ (ಜೋರ್ಡಾನ್), ಜೂ. 14: ಜೋರ್ಡಾನ್ ರಾಜಕುಮಾರ ಹಂಝಾ ಸೌದಿ ಅರೇಬಿಯದ ನೆರವಿನಿಂದ ದೊರೆ ದ್ವಿತೀಯ ಅಬ್ದುಲ್ಲಾರನ್ನು ಅಧಿಕಾರದಿಂದ ಕಿತ್ತೊಗೆಯಲು ಬಯಸಿದ್ದರು ಎಂಬುದಾಗಿ ಅವರ ಇಬ್ಬರು ಸಹಚರರ ವಿರುದ್ಧ ದಾಖಲಿಸಲಾಗಿರುವ ಮೊಕದ್ದಮೆಯಲ್ಲಿ ಆರೋಪಿಸಲಾಗಿದೆ.

ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ಈ ವಿವರಗಳನ್ನು ರವಿವಾರ ಬಿಡುಗಡೆಗೊಳಿಸಲಾಗಿದೆ.

ರಾಜಕುಮಾರ ಹಂಝಾರ ಸಹಚರರೆನ್ನಲಾದ ಇಬ್ಬರೂ ಆರೋಪಿಗಳು ನೆರೆಯ ಸೌದಿ ಅರೇಬಿಯದೊಂದಿಗೆ ನಿಕಟ ಬಾಂಧವ್ಯ ಹೊಂದಿದ್ದಾರೆ. ಅವರೆಂದರೆ: ಜೋರ್ಡಾನ್‌ನ ರಾಜ ಆಸ್ಥಾನದ ಮಾಜಿ ಮುಖ್ಯಸ್ಥ ಬಸ್ಸೀಮ್ ಅವದಲ್ಲಾ ಮತ್ತು ಸೌದಿ ಅರೇಬಿಯಕ್ಕೆ ವಿಶೇಷ ರಾಯಭಾರಿಯಾಗಿದ್ದ ಶರೀಫ್ ಹಸನ್ ಬಿನ್ ಝಾಯೀದ್. ಈ ಪೈಕಿ ಬಸ್ದೀಮ್ ಅವದಲ್ಲಾ ಸೌದಿ ಅರೇಬಿಯದ ಪೌರತ್ವವನ್ನೂ ಹೊಂದಿದ್ದಾರೆ.

ಈ ಇಬ್ಬರು ಈ ತಿಂಗಳ ಕೊನೆಯಲ್ಲಿ ಸರಕಾರಿ ಭದ್ರತಾ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸಲಿದ್ದಾರೆ. ಅವರ ಆರೋಪ ಸಾಬೀತಾದರೆ 20 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ಎದುರಿಸುತ್ತಿದ್ದಾರೆ.

ಆದರೆ, ‘‘ಜೋರ್ಡಾನ್‌ನ ಭದ್ರತೆಯನ್ನು ಅಸ್ಥಿರಗೊಳಿಸಲು’’ ಎಪ್ರಿಲ್ 3ರಂದು ನಡೆಸಲಾದ ಪ್ರಯತ್ನದಲ್ಲಿ ಶಾಮೀಲಾಗಿದ್ದಾರೆ ಎಂಬ ಆರೋಪವನ್ನು ಎದುರಿಸಿರುವ ದೊರೆಯ ಮಲಸಹೋದರ ಹಂಝಾ ನ್ಯಾಯಾಲಯದ ವಿಚಾರಣೆ ಎದುರಿಸುವುದಿಲ್ಲ. ಅವರಿಗೆ ಸಂಬಂಧಿಸಿದ ವಿಷಯವನ್ನು ರಾಜ ಕುಟುಂಬದಲ್ಲೇ ಬಗೆಹರಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆದರೆ ಈ ಪಿತೂರಿಯಲ್ಲಿ ತಾನು ಶಾಮೀಲಾಗಿಲ್ಲ ಎಂದು ಪ್ರಾದೇಶಿಕ ಬಲಾಢ್ಯ ಸೌದಿ ಅರೇಬಿಯ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News