​ಚುನಾವಣೆ ಮೈತ್ರಿ: ಎಡಪಕ್ಷಗಳ ಜತೆ ಅಕಾಲಿ ದಳ ಚರ್ಚೆ

Update: 2021-06-15 04:05 GMT

ಚಂಡೀಗಢ, ಜೂ.15: ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಗೆ ಈಗಾಗಲೇ ಬಹುಜನ ಸಮಾಜ ಪಕ್ಷದ ಜತೆ ಮೈತ್ರಿ ಮಾಡಿಕೊಂಡಿರುವ ಅಕಾಲಿದಳ ಇದೀಗ ಸಿಪಿಐ ಮತ್ತು ಸಿಪಿಎಂ ಜತೆ ಸ್ಥಾನ ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆ ಮಾತುಕತೆ ಆರಂಭಿಸಿದೆ.

ಉಭಯ ಪಕ್ಷಗಳ ರಾಜ್ಯ ಮುಖಂಡರು ಮತ್ತು ರಾಷ್ಟ್ರ ಮುಖಂಡರ ಜತೆ ಈಗಾಗಲೇ ಎರಡು ಸುತ್ತುಗಳ ಮಾತುಕತೆ ಮುಗಿದಿದೆ ಎಂದು ಅಕಾಲಿದಳ ಮೂಲಗಳು ಸ್ಪಷ್ಟಪಡಿಸಿವೆ.

"ಎಡಪಕ್ಷಗಳ ಜತೆ ಮೈತ್ರಿ ಮಾಡಿಕೊಳ್ಳುವ ವಿಚಾರ ಅಂತಿಮ ಹಂತದಲ್ಲಿದೆ. ಪ್ರತೀ ವಿಧಾನಸಭಾ ಕ್ಷೇತ್ರಗಳಲ್ಲಿ ಎಡಪಕ್ಷಗಳಿಗೆ 2ರಿಂದ 3 ಸಾವಿರ ನಿಶ್ಚಿತ ಮತಗಳಿವೆ. ಭಟಿಂಡಾ ಮತ್ತು ಮನ್ಸಾ ಕ್ಷೇತ್ರಗಳಲ್ಲಿ ತಲಾ 7,000ಕ್ಕೂ ಹೆಚ್ಚು ಮತಗಳಿವೆ" ಎಂದು ಹಿರಿಯ ಮುಖಂಡರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಶಿರೋಮಣಿ ಅಕಾಲಿದಳದ ಮೂಲಗಳ ಪ್ರಕಾರ, ಕಳೆದ ವಿಧಾನಸಭಾ ಚುನಾವಣೆಯಲ್ಲಿ 20 ಕ್ಷೇತ್ರಗಳಲ್ಲಿ ಪಕ್ಷ 1,000ಕ್ಕಿಂತ ಕಡಿಮೆ ಅಂತರದಿಂದ ಸೋತಿತ್ತು. ಇತರ 15 ಸ್ಥಾನಗಳಲ್ಲಿ ಪಕ್ಷ 5 ಸಾವಿರಕ್ಕಿಂತ ಕಡಿಮೆ ಮತಗಳಿಂದ ಪರಾಜಯ ಹೊಂದಿತ್ತು. ಎಡಪಕ್ಷಗಳ ಜತೆಗಿನ ಮೈತ್ರಿ ಈ ಅಂತರವನ್ನು ನೀಗಿಸುವಲ್ಲಿ ನೆರವಾಗಲಿದೆ" ಎಂದು ಪಕ್ಷದ ಹಿರಿಯ ಮುಖಂಡ ಸಿಕಂದರ್ ಸಿಂಗ್ ಮಲೂಕಾ ಹೇಳಿದ್ದಾರೆ. ಬಹುಶಃ ಮುಂದಿನ ಚುನಾವಣೆಗೆ ಎಡಪಕ್ಷಗಳ ಜತೆ ಮೈತ್ರಿ ಮಾಡಿಕೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News