ಪಿಂಜ್ರಾ ತೋಡ್ ಕಾರ್ಯಕರ್ತೆಯರಾದ ದೇವಾಂಗನಾ ,ನತಾಶಾ ನರ್ವಾಲ್, ಜಾಮಿಯಾ ವಿದ್ಯಾರ್ಥಿ ಆಸಿಫ್ ಗೆ ಜಾಮೀನು

Update: 2021-06-15 16:02 GMT
ನತಾಶಾ ನರ್ವಾಲ್,ದೇವಾಂಗನಾ ಕಲಿತಾ, photo: India Today 

ಹೊಸದಿಲ್ಲಿ, ಜೂ.15: ಸಾಂವಿಧಾನಿಕವಾಗಿ ಖಾತರಿ ಪಡಿಸಿದ ಪ್ರತಿಭಟಿಸುವ ಹಕ್ಕು ಮತ್ತು ಭಯೋತ್ಪಾದಕ ಕೃತ್ಯದ ಮಧ್ಯೆ ವ್ಯತ್ಯಾಸವಿದೆ ಎಂದು ಹೇಳಿದ ದಿಲ್ಲಿ ಹೈಕೋರ್ಟ್, ವಿವಾದಾತ್ಮಕ ಪೌರತ್ವ ಕಾಯ್ದೆಯ ವಿರುದ್ಧದ ಪ್ರತಿಭಟನೆ ಸಂದರ್ಭ ದಿಲ್ಲಿಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ಒಂದು ವರ್ಷಕ್ಕೂ ಅಧಿಕ ಸಮಯದಿಂದ ಬಂಧನದಲ್ಲಿರುವ 3 ಹೋರಾಟಗಾರರಿಗೆ ಜಾಮೀನು ಮಂಜೂರುಗೊಳಿಸಿದೆ. 

ಮಹಿಳೆಯರ ಹಕ್ಕುಗಳಿಗೆ ಹೋರಾಡುವ ‘ಪಿಂಜ್ರಾ ತೋಡ್’ನ ಕಾರ್ಯಕರ್ತೆಯರಾದ ನತಾಶಾ ನರ್ವಾಲ್ ಮತ್ತು ದೇವಾಂಗನಾ ಕಲಿತಾ ಹಾಗೂ ಜೆಎಂಐ ವಿದ್ಯಾರ್ಥಿ ಆಸಿಫ್ ಇಕ್ಬಾಲ್ ತನ್ಹಾರನ್ನು 2020ರ ಮೇ ತಿಂಗಳಿನಲ್ಲಿ ಬಂಧಿಸಲಾಗಿತ್ತು. 2020ರ ಫೆಬ್ರವರಿಯಲ್ಲಿ ನಡೆದಿದ್ದ ಹಿಂಸಾಚಾರದ ನಿಯೋಜಕರೆಂದು ಇವರ ವಿರುದ್ಧ ಆರೋಪಿಸಲಾಗಿತ್ತು. ಜಾಮೀನು ಕೋರಿ ಈ ಮೂವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ತಿರಸ್ಕರಿಸಿತ್ತು.

ನತಾಶಾ ಮತ್ತು ದೇವಾಂಗನಾ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ನ ನ್ಯಾಯಾಧೀಶರಾದ ಸಿದ್ದಾರ್ಥ ಮೃದುಲ್ ಮತ್ತು ಅನೂಪ್ ಜೈರಾಮ್ ಭಂಭಾನಿ ಅವರಿದ್ದ ವಿಭಾಗೀಯ ಪೀಠ ‘ಭಿನ್ನಾಭಿಪ್ರಾಯವನ್ನು ನಿಗ್ರಹಿಸುವ ಉತ್ಸುಕತೆಯಲ್ಲಿ, ಸಾಂವಿಧಾನಿಕವಾಗಿ ಖಾತರಿಗೊಳಿಸಿದ ಪ್ರತಿಭಟನೆ ನಡೆಸುವ ಹಕ್ಕು ಮತ್ತು ಭಯೋತ್ಪಾದಕ ಕೃತ್ಯಗಳ ನಡುವಿನ ಗೆರೆಯ ಕುರಿತ ತಿಳುವಳಿಕೆ ಕೇಂದ್ರ ಸರಕಾರದ ಮನಸ್ಸಿನಲ್ಲಿ ಮಸುಕಾದಂತೆ ಕಾಣಿಸುತ್ತಿದೆ ಎಂದು ಹೇಳದೆ ವಿಧಿಯಿಲ್ಲ. 

ಈ ಮನಸ್ಥಿತಿ ಹೆಚ್ಚಾದರೆ ಅದು ಪ್ರಜಾಪ್ರಭುತ್ವಕ್ಕೆ ಅತ್ಯಂತ ನಿರಾಸೆಯ ದಿನವಾಗಲಿದೆ ಎಂದು ಕೇಂದ್ರವನ್ನು ತರಾಟೆಗೆತ್ತಿಕೊಂಡಿತು. ಕೇಂದ್ರದ ಅಥವಾ ಸಂಸತ್ತಿನ ಉಪಕ್ರಮಗಳಿಗೆ ವ್ಯಾಪಕ ವಿರೋಧವಿದ್ದಾಗ ಪ್ರಚೋದನಾತ್ಮಕ ಭಾಷಣ, ರಸ್ತೆ ತಡೆ ನಡೆಸುವುದು ಮತ್ತಿತರ ಕೃತ್ಯಗಳು ಅಸಹಜವಲ್ಲ. ಇಂತಹ ಪ್ರತಿಭಟನೆಗಳು ಶಾಂತರೀತಿಯಲ್ಲಿ ಅಹಿಂಸಾತ್ಮಕವಾಗಿ ನಡೆಯಬೇಕು ಎಂಬ ನಿರೀಕ್ಷೆಯಿದ್ದರೂ ಪ್ರತಿಭಟನಾಕಾರರು ಕಾನೂನಿನಲ್ಲಿ ಅನುಮತಿಸಲಾದ ಮಿತಿ ಮೀರಿ ವರ್ತಿಸುವುದೂ ಅಸಹಜವಲ್ಲ. 

ಇಲ್ಲಿ ಆರೋಪಿಗಳು ಈ ಮಿತಿಯನ್ನು ಮೀರಿದ್ದಾರೆ ಎಂದು ವಾದಿಸ ಬಹುದಾದರೂ, ಅವರ ಈ ನಡೆ ಯುಎಪಿಎ ಕಾಯ್ದೆಯಡಿ ವ್ಯಾಖ್ಯಾನಿಸಿದ ‘ಭಯೋತ್ಪಾದಕ ಕೃತ್ಯ ಅಥವಾ ಷಡ್ಯಂತ್ರ, ಅಥವಾ ಭಯೋತ್ಪಾದಕ ಕೃತ್ಯ ನಡೆಸುವುದಕ್ಕೆ ಪೀಠಿಕೆಯಾಗಿ ನಡೆಸಿದ ಕೃತ್ಯ’ ಎಂದು ಪರಿಗಣಿಸಲಾಗದು. ಆದ್ದರಿಂದ 2020 ಸೆಪ್ಟಂಬರ್ 16ರಂದು ಯುಎಪಿಎ ಕಾಯ್ದೆಯ ಸೆಕ್ಷನ್ 15,17 ಮತ್ತು 18 ಸೆಕ್ಷನ್ನಡಿ ದಾಖಲಿಸಿದ ಆರೋಪಪಟ್ಟಿಯಲ್ಲಿರುವ ಅಂಶಗಳು ಮೇಲ್ನೋಟಕ್ಕೆ ಸತ್ಯವಲ್ಲ ಎಂದು ಕಂಡುಬಂದಿದೆ ಎಂದು ಹೇಳಿದ ಹೈಕೋರ್ಟ್, ತಲಾ 50,000 ರೂ. ಮೊತ್ತದ ಒಂದು ವೈಯಕ್ತಿಕ ಬಾಂಡ್, 2 ಜಾಮೀನು ಬಾಂಡ್ ಸಲ್ಲಿಸಬೇಕು, ಪಾಸ್ಪೋರ್ಟ್ಗಳನ್ನು ಒಪ್ಪಿಸಬೇಕು ಮುಂತಾದ ಶರತ್ತು ವಿಧಿಸಿ ಜಾಮೀನು ಮಂಜೂರುಗೊಳಿಸಿತು. 

ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆ(ಯುಎಪಿಎ)ಯಡಿ ಪ್ರಕರಣ ದಾಖಲಿಸುವ ಮುನ್ನ ಭಯೋತ್ಪಾದಕ ಕೃತ್ಯಗಳ ಲಕ್ಷಣ ಮತ್ತು ಭಯೋತ್ಪಾದಕ ಕೃತ್ಯಗಳನ್ನು ಕೇಂದ್ರ ಸರಕಾರ ತಿಳಿದುಕೊಳ್ಳಬೇಕು ಮತ್ತು ನಿರ್ಲಕ್ಷ್ಯದಿಂದ ಎಲ್ಲಾ ಅಪರಾಧ ಕೃತ್ಯಗಳಿಗೆ ಬಳಸುವಂತಿಲ್ಲ ಎಂದು ಹೈಕೋರ್ಟ್ ಹೇಳಿದೆ.

 ಇದಕ್ಕೂ ಮುನ್ನ ಆಸಿಫ್ ಇಕ್ಬಾಲ್ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಐಪಿಸಿ ಸೆಕ್ಷನ್ನಡಿ ಅಪರಾಧ ಕೃತ್ಯ ಎಂದು ವ್ಯಾಖ್ಯಾನಿಸಿದ ಕೃತ್ಯಗಳನ್ನು ಭಯೋತ್ಪಾದಕ ಕೃತ್ಯಗಳೊಂದಿಗೆ ಸಮೀಕರಿಸಲಾಗದು. ಯಾವುದೇ ನಿರ್ದಿಷ್ಟ ಆರೋಪವಿಲ್ಲದ ಕೇವಲ ಶಬ್ದಾಡಂಬರದ ಪ್ರಕರಣಗಳಲ್ಲಿ ಕಾನೂನುಬಾಹಿರ ಕೃತ್ಯ ತಡೆ ಕಾಯ್ದೆಯನ್ನು ಅನ್ವಯಿಸಲಾಗದು ಎಂದು ಹೇಳಿ ಜಾಮೀನು ಮಂಜೂರುಗೊಳಿಸಿದೆ. 

ಮೂವರೂ ತನಿಖಾಧಿಕಾರಿಗಳಿಗೆ ತಮ್ಮ ಮೊಬೈಲ್ ನಂಬರ್ ಒದಗಿಸಬೇಕು ಮತ್ತು ಫೋನ್ ಸ್ವಿಚ್ಡ್ ಆಫ್ ಆಗದಂತೆ ನೋಡಿಕೊಳ್ಳಬೇಕು. ವಿಚಾರಣಾ ನ್ಯಾಯಾಲಯದ ದಾಖಲೆಯಲ್ಲಿರುವ ವಿಳಾಸದ ನಿವಾಸವನ್ನು ಬದಲಿಸುವುದಾದರೆ ತನಿಖಾಧಿಕಾರಿಗೆ ಮಾಹಿತಿ ನೀಡಬೇಕು. ಪಾಸ್ಪೋರ್ಟ್ ಒಪ್ಪಿಸಬೇಕು ಮತ್ತು ನ್ಯಾಯಾಲಯದ ಅನುಮತಿ ಪಡೆಯದೆ ವಿದೇಶಕ್ಕೆ ತೆರಳಬಾರದು. ಯಾವುದೇ ಸಾಕ್ಷಿಗಳನ್ನು ಸಂಪರ್ಕಿಸಲು ಯತ್ನಿಸಬಾರದು ಅಥವಾ ಅವರಿಗೆ ಬೆದರಿಕೆ ಒಡ್ಡಬಾರದು. ಸಾಕ್ಷ್ಯನಾಶಕ್ಕೆ ಪ್ರಯತ್ನಿಸಬಾರದು ಎಂದು ಷರತ್ತು ವಿಧಿಸಿದೆ.

 740 ಸಾಕ್ಷಿಗಳ ವಿಚಾರಣೆ ಬಾಕಿ

ಆರೋಪಪಟ್ಟಿ ಸಲ್ಲಿಸಲಾಗಿದ್ದರೂ ಅದರಲ್ಲಿ ಉ್ಲೇಖಿಸಲಾಗಿರುವ ಆರೋಪಗಳ ಬಗ್ಗೆ ವಿಶೇಷ ನ್ಯಾಯಾಲಯ ಇನ್ನೂ ಗಮನಿಸಿಲ್ಲ. ಸ್ಥಳೀಯ ಸಾಕ್ಷಿಗಳು, ಸಂರಕ್ಷಿತ ಸಾಕ್ಷಿಗಳು, ಪೊಲೀಸ್ ಸಾಕ್ಷಿಗಳ ಸಹಿತ ಸುಮಾರು 740 ಸಾಕ್ಷಿಗಳಿದ್ದಾರೆ ಎಂದು ಅರ್ಜಿದಾರರು ಹೇಳಿದ್ದಾರೆ. ಇವರಲ್ಲಿ ಒಬ್ಬರನ್ನೂ ಇದುವರೆಗೆ ವಿಚಾಣೆ ನಡೆಸಿ ಹೇಳಿಕೆ ದಾಖಲಿಸಿಲ್ಲ. ಅಲ್ಲದೆ ಕೊರೋನ ಸೋಂಕಿನಿಂದ ಉದ್ಭವಿಸಿರುವ ಪರಿಸ್ಥಿತಿಯಿಂದ ನ್ಯಾಯಾಲಯದ ಕಲಾಪಗಳ ಮೇಲೆಯೂ ಪರಿಣಾಮ ಬೀರಲಿದ್ದು ಈ ಪ್ರಕರಣದ ವಿಚಾರಣೆ ಸುದೀರ್ಘಾವಧಿಗೆ ವಿಸ್ತರಿಸುವ ಸಾಧ್ಯತೆಯಿದೆ ಎಂದು ಜಾಮೀನು ಮಂಜೂರುಗೊಳಿಸಿದ ಹೈಕೋರ್ಟ್ ಹೇಳಿದೆ.‌

ಆಸಿಫ್ ಷಡ್ಯಂತ್ರದ ರೂವಾರಿ ಎಂದು ನಮೂದಿಸಿಲ್ಲ 

ಆಸಿಫ್ ಇಕ್ಬಾಲ್ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, ಆಸಿಫ್ ಇತರ ಪಿತೂರಿಗಾರರಿಗೆ ಮಾರ್ಗದರ್ಶಕನಾಗಿದ್ದ ಅಥವಾ ಈತ ಷಡ್ಯಂತ್ರದ ರೂವಾರಿ ಎಂದು ಆರೋಪಪಟ್ಟಿಯಲ್ಲಿ ನಮೂದಿಸಿಲ್ಲ ಎಂದು ಹೇಳಿದೆ. ಆಸಿಫ್ ಜಾಮಿಯಾ ಸಮನ್ವಯ ಸಮಿತಿ(ಜೆಸಿಸಿ)ಯನ್ನು ರೂಪಿಸಿದ್ದ ಅಥವಾ ಈತ ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿ ಪ್ರತಿಭಟನೆಯನ್ನು ಸಂಘಟಿಸುವ ವ್ಯಾಟ್ಸಾಪ್ ಗ್ರೂಪ್‌ ನ ಅಡ್ಮಿನ್ ಆಗಿದ್ದ ಎಂದು ಎಲ್ಲೂ ಉಲ್ಲೇಖಿಸಿಲ್ಲ. 

ಇವರು ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಷನ್(ಎಸ್ಐಒ) ಮತ್ತು ಜೆಸಿಸಿಯ ಕಾರ್ಯಕರ್ತ ಎಂದು ಆರೋಪಪಟ್ಟಿಯಲ್ಲಿ ಹೇಳಲಾಗಿದೆ. ಆದರೆ ಇವು ಯಾವುದೂ ಯುಎಪಿಎ ಕಾಯ್ದೆಯಡಿ ಪಟ್ಟಿ ಮಾಡಿರುವ ನಿಷೇಧಿತ ಉಗ್ರ ಸಂಘಟನೆಗಳಲ್ಲ. ಜೆಸಿಸಿ ಎಂಬುದು ಸಂಘಟನೆಯಲ್ಲ, ಕೇವಲ ಪ್ರಾಸಂಗಿಕ ಸಮಿತಿ ಅಷ್ಟೇ ಎಂದು ನ್ಯಾಯಪೀಠ ಹೇಳಿದೆ.

ಮುಸ್ಲಿಮ್ ಪ್ರದೇಶಗಳಿಗೆ ಭೇಟಿ ನೀಡಿ ಸ್ಥಳೀಯ ಇಮಾಮ್ ಗಳನ್ನು ಸಂಘಟಿಸುವ ಮತ್ತು ದಿಲ್ಲಿಯ ವಿವಿಧೆಡೆ ಪ್ರತಿಭಟನೆಗಳನ್ನು ಸಂಘಟಿಸಲು ನೆರವಾಗುವ ಕಾರ್ಯವನ್ನು ಆಸಿಫ್ ಗೆ ವಹಿಸಲಾಗಿತ್ತು ಎಂಬ ಪೊಲೀಸರ ಆರೋಪವನ್ನು ತಳ್ಳಿಹಾಕಿದ ನ್ಯಾಯಪೀಠ, ಪ್ರತಿಭಟನೆ ಈಶಾನ್ಯ ದಿಲ್ಲಿಗೆ ಮಾತ್ರ ಸೀಮಿತವಾಗಿತ್ತು ಎಂದು ಹೇಳಿದೆ. 

ಅಲ್ಲದೆ, ಪ್ರತಿಭಟನೆಯು ಸಮುದಾಯದ ಮೇಲೆ ವ್ಯಾಪಕ ಪರಿಣಾಮ ಬೀರಿರುವುದರಿಂದ ಇದು ಭಯೋತ್ಪಾದನಾ ಕೃತ್ಯಕ್ಕೆ ಸಮವಾಗಿದೆ ಎಂದು ಹೇಳುವುದು ಸರಿಯಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಿದೆ. ಇಲ್ಲಿ ಆಸಿಫ್ ನ ಒಂದು ಕೃತ್ಯವನ್ನು ಗಮನಿಸಲಾಗಿದೆ. ಆತ ಬೇರೊಬ್ಬರು ನೀಡಿದ ಸಿಮ್ ಕಾರ್ಡ್ ಅನ್ನು ಸಹ ಆರೋಪಿಗೆ ಹಸ್ತಾಂತರಿಸಿದ್ದಾನೆ. ಈ ಸಿಮ್ಕಾರ್ಡ್ ಬಳಸಿ ಸಹ ಆರೋಪಿ ವಾಟ್ಸ್ಯಾಪ್ ಗ್ರೂಪ್ ನಲ್ಲಿ ಸಂದೇಶ ರವಾನಿಸಿದ್ದಾನೆ. ಈ ಆರೋಪದ ಹೊರತುಪಡಿಸಿ ಇತರ ಯಾವುದೇ ಆರೋಪ ನ್ಯಾಯಾಲಯದ ಗ್ರಹಿಕೆಗೆ ಬಂದಿಲ್ಲ ಎಂದು ನ್ಯಾಯಪೀಠ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News