ಇಬ್ಬರ ಬಾಳಿಗೆ ಬೆಳಕು ನೀಡಿದ ಸಂಚಾರಿ ವಿಜಯ್: ಇಬ್ಬರಿಗೆ ನೇತ್ರದಾನ, ಒಬ್ಬರಿಗೆ ಕಿಡ್ನಿ ಜೋಡಣೆ

Update: 2021-06-15 08:03 GMT

ಬೆಂಗಳೂರು, ಜೂ.15: ರಸ್ತೆ ಅಪಘಾತದಲ್ಲಿ ಮೃತಪಟ್ಟ ಚಲನಚಿತ್ರ ನಟ ಸಂಚಾರಿ ವಿಜಯ್ ಅವರ ಅಂಗಾಂಗಗಳನ್ನು ಅಗತ್ಯ ಇರುವವರಿಗೆ ಜೋಡಣೆ ಪ್ರಕ್ರಿಯೆ ಆರಂಭಗೊಂಡಿದ್ದು, ಈಗಾಗಲೇ ಇಬ್ಬರಿಗೆ ಕಣ್ಣು, ಒಬ್ಬರಿಗೆ ಕಿಡ್ನಿ ಕಸಿ ಯಶಸ್ವಿಯಾಗಿ ಮಾಡಲಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಈ ಮೂಲಕ ಸಾವಲ್ಲೂ ಅವರು ಹಲವರ ಬಾಳಿಗೆ ಬೆಳಕು ನೀಡಿದ್ದಾರೆ.

ವಿಜಯ್ ಅವರ ಅಂಗಾಂಗ ದಾನಕ್ಕೆ ಸಂಬಂಧಿಸಿ ಅವರ ಕುಟುಂಬಸ್ಥರು ಸೋಮವಾರವೇ ಒಪ್ಪಿಗೆ ನೀಡಿದ್ದರು. ಅದರಂತೆ ಅವರ ಕಿಡ್ನಿಯನ್ನು ಮಹಿಳೆಯೊಬ್ಬರಿಗೆ ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಜೋಡಣೆ ಮಾಡಲಾಗಿದೆ.

ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಗರದ ಲಗ್ಗೆರೆ ಮೂಲದ 34 ವರ್ಷದ ಮಹಿಳೆಯೊಬ್ಬರಿಗೆ ಕಿಡ್ನಿಯ ಅಗತ್ಯವಿತ್ತು. ಸಂಚಾರಿ ವಿಜಯ್ ಅವರ ಕಿಡ್ನಿ ಮಹಿಳೆಗೆ ಹೊಂದಾಣಿಕೆ ಆಗುತ್ತಿರುವುದರಿಂದ ಯಶಸ್ವಿಯಾಗಿ ಟ್ರಾನ್ಸ್ ಪ್ಲಾಂಟೇಶನ್ ಮಾಡಲಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಇಬ್ಬರಿಗೆ ನೇತ್ರದಾನ

ಇನ್ನೊಂದೆಡೆ ಬೆಂಗಳೂರಿನ ಮಿಂಟೋ ಆಸ್ಪತ್ರೆಯಲ್ಲಿ ಇಬ್ಬರಿಗೆ ವಿಜಯ್ ಅವರ ಕಣ್ಣುಗಳನ್ನು ಜೋಡಿಸಲಾಗಿದ್ದು, ಆ ಮೂಲಕ ಇಬ್ಬರ ಬಾಳಿಗೆ ಅವರು ಬೆಳಕು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News