ಬಡವರಿಗೆ ಸಮಗ್ರ ಆರ್ಥಿಕ ಪ್ಯಾಕೇಜ್ ಘೋಷಿಸಲು ಆಗ್ರಹಿಸಿ ಸಿಎಂ ಮನೆಗೆ ಜನಾಗ್ರಹ ನಡಿಗೆ: ಪ್ರತಿಭಟನಾಕಾರರ ಬಂಧನ

Update: 2021-06-15 13:18 GMT

ಬೆಂಗಳೂರು, ಜೂ.15: ಕೋವಿಡ್ ಲಾಕ್‍ಡೌನ್‍ನಿಂದಾಗಿ ಆರ್ಥಿಕ ಸಂಕಷ್ಟ ಅನುಭವಿಸುತ್ತಿರುವ ಬಡವರು ಹಾಗೂ ಕೂಲಿಕಾರ್ಮಿಕರಿಗೆ ಸಮಗ್ರ ಆರ್ಥಿಕ ಪ್ಯಾಕೇಜ್ ಒತ್ತಾಯಿಸಿ ಜನಾಗ್ರಹ ಆಂದೋಲನದ ವತಿಯಿಂದ ಹಮ್ಮಿಕೊಂಡಿದ್ದ ಮುಖ್ಯಮಂತ್ರಿ ಮನೆಗೆ ಜನಾಗ್ರಹ ನಡಿಗೆ ಜಾಥಾವನ್ನು ಪೊಲೀಸರು ತಡೆದು ವಿವಿಧ ಸಂಘಟನೆಗಳ ಮುಖಂಡರನ್ನು ಬಂಧಿಸಿ ನಂತರ ಬಿಡುಗಡೆ ಮಾಡಿದ್ದಾರೆ.

ಮೌರ್ಯ ವೃತ್ತದಿಂದ ಹಮ್ಮಿಕೊಂಡಿದ್ದ ಜನಾಗ್ರಹ ನಡೆಗೆಗೆ ಅವಕಾಶವಿಲ್ಲವೆಂದು ಪೊಲೀಸರು ಹೋರಾಟಗಾರರನ್ನು ಚದುರಿಸಲು ಪ್ರಯತ್ನಿಸಿದರು. ಮುಖ್ಯಮಂತ್ರಿಗಳನ್ನು ಭೇಟಿಯಾಗಲೇಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಈ ವೇಳೆ ಪೊಲೀಸರು ಎಲ್ಲರನ್ನೂ ಬಂಧಿಸಿ ಹೈಗ್ರೌಂಡ್ ಪೊಲೀಸ್ ಠಾಣೆಗೆ ಕರೆದೊಯ್ದರು. ಮುಖಂಡರು ಪೊಲೀಸ್ ಠಾಣೆಯಲ್ಲೂ ಫಲಕಗಳನ್ನು ಹಿಡಿದು ಪ್ರತಿಭಟನೆಯನ್ನು ಮುಂದುವರಿಸಿದರು.

“ಸರಕಾರ ಅರೆಬರೆ ಕ್ರಮಗಳನ್ನು ಮಾತ್ರ ಘೋಷಿಸುತ್ತಿದೆ. ಜನರ ಜೀವನ ಕುಸಿಯುತ್ತಿದ್ದರೂ, ಮೂರನೇ ಅಲೆಯ ಅಪಾಯ ತಲೆಮೇಲೆ ತೂಗುತ್ತಿದ್ದರೂ ಪರಿಣಾಮಕಾರಿಯಾದ ಕ್ರಮಗಳಿಗೆ ಅದು ಸಿದ್ಧವಿಲ್ಲ. ನೆರೆ ರಾಜ್ಯಗಳ ಸರಕಾರಗಳು ತೆಗೆದುಕೊಂಡಿರುವ ಕ್ರಮಗಳನ್ನೂ ಅಳವಡಿಸಲು ಸಿದ್ಧವಿಲ್ಲ” ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಕನಿಷ್ಠ ಮುಖ್ಯಮಂತ್ರಿಯವರ ಜೊತೆ ಈ ಕುರಿತು ಒಂದು ಚರ್ಚೆಗೆ ವ್ಯವಸ್ಥೆಯಾಗಬೇಕು ಎಂದು ಪ್ರತಿಭಟನಾನಿರತರು ಪಟ್ಟು ಹಿಡಿದರು. ಪೊಲೀಸರೂ ನಿಯೋಗವೊಂದನ್ನು ಕರೆದೊಯ್ಯಲು ಪ್ರಯತ್ನ ನಡೆಸಿದರು. ಆದರೆ, ಮುಖ್ಯಮಂತ್ರಿಗಳು ಜನಾಗ್ರಹ ಮುಖಂಡರ ಭೇಟಿಯನ್ನು ನಿರಾಕರಿಸಿದರು. ಹೀಗಾಗಿ ಬಂಧನಕ್ಕೊಳಗಾದ ಪ್ರತಿಭಟನಾಕಾರರು ಪೊಲೀಸ್ ಠಾಣೆಯಲ್ಲೇ ಪ್ರತಿಭಟನೆಯನ್ನು ನಡೆಸಿದರು.

ಈ ವೇಳೆ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಹಿರಿಯ ವಕೀಲ ಎಸ್.ಬಾಲನ್ ಮಾತನಾಡಿ, ಸರಕಾರದ ಜನವಿರೋಧಿ ನಡೆ ಹಾಗೂ ಪ್ರತಿಭಟನಾಕಾರರ ಬಂಧನವನ್ನು ಖಂಡಿಸಿದರು. ಮದ್ಯಾಹ್ನದ ಮೇಲೆ ಪೊಲೀಸರು ಪ್ರತಿಭಟನಾಕಾರರನ್ನು ಬಿಡುಗಡೆ ಮಾಡಿದರು.

ರೈತ ಮುಖಂಡರಾದ ಕೋಡಿಹಳ್ಳಿ ಚಂದ್ರಶೇಖರ್, ಬಡಗಲಪುರ ನಾಗೇಂದ್ರ, ದಲಿತ ಸಂಘರ್ಷ ಸಮಿತಿಯ ಮಾವಳ್ಳಿ ಶಂಕರ್, ಹಿರಿಯ ವಕೀಲರಾದ ಎಸ್.ಬಾಲನ್, ಯೂಸೂಫ್ ಕನ್ನಿ, ಸಿರಿ ಗೌರಿ, ಹೆಬ್ಬಾಳೆ ವೆಂಕಟೇಶ್, ಕುಮಾರ್ ಸಮತಳ, ಗೋಪಾಲ್, ಕೆ.ಜೆ.ಎಸ್ ಮರಿಯಪ್ಪ, ಅಫ್ಸರ್ ಕೊಡ್ಲಿಪೇಟೆ, ವರದರಾಜೇಂದ್ರ, ರವಿ ಮೋಹನ್, ಯಲಹಂಕ ಮಂಜುನಾಥ್, ತನ್ವೀರ್ ಅಹ್ಮದ್, ರಾಜಶೇಖರ್ ಅಕ್ಕಿ ಮುಂತಾದ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಜೂ.22 ರಂದು ಸತ್ಯಾಗ್ರಹ

ಸರಕಾರದ ಬಡವರ, ಕೂಲಿ ಕಾರ್ಮಿಕರ ಬಗೆಗಿನ ಸಂವೇದನಾರಹಿತ ನಡುವಳಿಕೆಯನ್ನು ಜನಾಗ್ರಹವು ತೀವ್ರವಾಗಿ ಖಂಡಿಸುತ್ತದೆ. ಜನಾಗ್ರಹ ವತಿಯಿಂದ ಸಮಗ್ರ ಮೂರನೇ ಪ್ಯಾಕೇಜ್‍ಗಾಗಿ ಒತ್ತಾಯವನ್ನು ಮುಂದುವರಿಸಲಾಗುತ್ತದೆ. ಇದರ ಭಾಗವಾಗಿ ಜೂ.22 ರಂದು ರಾಜ್ಯವ್ಯಾಪಿಯಾಗಿ ಎಲ್ಲಾ ಆಡಳಿತರೂಢ ಶಾಸಕರು ಮತ್ತು ಮಂತ್ರಿಗಳ ಕಚೇರಿಗಳ ಎದುರು ಖಾಲಿ ಚೀಲ ಸುಟ್ಟು ಪ್ರತಿಭಟಿಸಲು ಮತ್ತು ಸತ್ಯಾಗ್ರಹ ಹೂಡಲು ಕರೆ ಕೊಟ್ಟಿದೆ.

-ಮಾವಳ್ಳಿ ಶಂಕರ್, ದಸಂಸ ಮುಖಂಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News