ಬೆಂಗಳೂರು: ಲಸಿಕೆ ಪಡೆದ ಆಟೋ, ಟ್ಯಾಕ್ಸಿ ಚಾಲಕರಿಗೆ ಮಾತ್ರ ವಾಹನ ಚಲಾವಣೆಗೆ ಅವಕಾಶ

Update: 2021-06-15 12:43 GMT

ಬೆಂಗಳೂರು, ಜೂ.15: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಅನ್‍ಲಾಕ್ ನಡುವೆ ಕೆಲವೊಂದು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಆಟೋ-ಟ್ಯಾಕ್ಸಿ ಚಾಲಕರಿಗೆ ಕಡ್ಡಾಯ ಲಸಿಕೆ, ಪಾರ್ಕ್‍ಗಳಲ್ಲಿ ಮಾಸ್ಕ್ ಧರಿಸುವಿಕೆ, ಅಪಾರ್ಟ್ ಮೆಂಟ್‍ಗಳಲ್ಲಿ ಪಾರ್ಟಿಗಳಿಗೆ ಕಡಿವಾಣ ಸೇರಿದಂತೆ ಇನ್ನಿತರೆ ನಿರ್ಬಂಧ ಮುಂದುವರಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‍ಗುಪ್ತ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಸಿಕೆ ಪಡೆದಿರುವ ಆಟೋ ಮತ್ತು ಟ್ಯಾಕ್ಸಿ ಚಾಲಕರು ಮಾತ್ರ ವಾಹನ ಚಲಾವಣೆ ಮಾಡಬಹುದು. ಲಸಿಕೆ ಪಡೆದಿರುವ ಬಗ್ಗೆ ಪೊಲೀಸರು ಇಲ್ಲವೇ ಬಿಬಿಎಂಪಿ ಅಧಿಕಾರಿಗಳು ಕೇಳಿದ ಕೂಡಲೇ ಲಸಿಕೆ ಹಾಕಿಸಿಕೊಂಡಿರುವ ದಾಖಲೆ ಸಂದೇಶ ತೋರಿಸಬೇಕೆಂದು ಹೇಳಿದ್ದಾರೆ.

ಟ್ಯಾಕ್ಸಿ ಹಾಗೂ ಆಟೋ ಚಾಲಕರು ತಮ್ಮ ವಾಹನಗಳನ್ನು ಆಗಾಗ ಸ್ಯಾನಿಟೈಸ್ ಮಾಡುವುದನ್ನು ಮರೆಯಬಾರದು. ಪ್ರಯಾಣಿಕರು ಹೆಚ್ಚು ಮುಟ್ಟುವಂತಹ ಜಾಗಗಳಲ್ಲಿ ಪದೇ ಪದೇ ಸ್ಯಾನಿಟೈಸ್ ಮಾಡುತ್ತಿರಬೇಕು. ಹಾಗೂ ಪ್ರಯಾಣಿಕರು ಹಾಗೂ ಚಾಲಕ ನಡುವೆ ಪರದೆ ಹಾಕಿರಬೇಕು. ಇಬ್ಬರಿಗಿಂತಲೂ ಹೆಚ್ಚು ಪ್ರಯಾಣಿಕರನ್ನು ಕೂರಿಸುವಂತಿಲ್ಲ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಅಪಾರ್ಟ್‍ಮೆಂಟ್ ಸಮುಚ್ಚಯಗಳಲ್ಲಿ ಕೋವಿಡ್ ಹರಡದಂತೆ ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಂಬಂಧಿಸಿದಂತೆ ಬಿಬಿಎಂಪಿ ಮತ್ತೊಮ್ಮೆ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಇದರಲ್ಲಿ ವಸತಿ ಸಮುಚ್ಚಯಗಳ ಆವರಣಗಳಲ್ಲಿ ಹುಟ್ಟಿದ ಹಬ್ಬ ಮತ್ತಿತರ ಸಭೆ ಸಮಾರಂಭಗಳನ್ನು ಏರ್ಪಡಿಸುವಂತಿಲ್ಲ. ಹಾಗೂ ಈಗಿನ ಅನ್‍ಲಾಕ್‍ನಲ್ಲಿ ವ್ಯಾಯಮಶಾಲೆ, ಕ್ರೀಡಾ ಸೌಕರ್ಯ, ಈಜುಕೊಳ, ಮನರಂಜನಾ ಕ್ಲಬ್‍ಗಳ ಬಳಕೆಗೂ ಅವಕಾಶವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

-ಚಿಲ್ಲರೆ ಮಾರಾಟ ಮಳಿಗೆಗಳು ಉತ್ಪನ್ನಗಳ ಮಾರಾಟ ಉತ್ತೇಜನಕ್ಕಾಗಿ ವಿಶೇಷ ಕೊಡುಗೆಗಳನ್ನು ನೀಡುವಂತಿಲ್ಲ. ಮಾರಾಟ ಮೇಳಗಳನ್ನು ಹಮ್ಮಿಕೊಳ್ಳುವಂತಿಲ್ಲ. ನಿರ್ಬಂಧದ ಆದೇಶ ಜಾರಿಯಲ್ಲಿದ್ದರೂ ಜನರಿಗೆ ಅವಶ್ಯಕ ಸಾಮಗ್ರಿ ಸಿಗಬೇಕು ಎಂಬ ಕಾರಣಕ್ಕೆ ಮಳಿಗೆಗಳನ್ನು ತೆರೆಯಲು ಅವಕಾಶ ನೀಡಲಾಗಿದೆ.

-ನಗರದ ಉದ್ಯಾನಗಳನ್ನು ಮುಂಜಾನೆಯ ವಾಯು ವಿಹಾರಕ್ಕಾಗಿ ಬೆಳಗ್ಗೆ 5ರಿಂದ 10 ಗಂಟೆವರೆಗೆ ಬಳಸುವುದಕ್ಕೆ ಬಿಬಿಎಂಪಿ ಅವಕಾಶ ನೀಡಿದೆ. ಆದರೆ, ಈ ಉದ್ಯಾನಗಳಲ್ಲಿ ಅಳವಡಿಸಿರುವ ವ್ಯಾಯಾಮ ಪರಿಕರಗಳ ಬಳಕೆಯನ್ನು ನಿರ್ಬಂಧಿಸಿದೆ.

-ಉದ್ಯಾನಗಳಲ್ಲಿ, ಮನರಂಜನಾ ತಾಣಗಳಲ್ಲಿ ಹಾಗೂ ವ್ಯಾಯಾಮ ನಡೆಸುವ ಸ್ಥಳಗಳಲ್ಲಿ ಜನರು ಗುಂಪುಗೂಡಬಾರದು. ಪರಸ್ಪರ ಸುರಕ್ಷಿತ ಅಂತರ ಕಾಪಾಡಬೇಕು. ಮಾಸ್ಕನ್ನು ಕಡ್ಡಾಯವಾಗಿ ಧರಿಸಬೇಕು. ಮಕ್ಕಳು ಗುಂಪು ಸೇರಿ ಆಟವಾಡುವುದಕ್ಕೆ ಅವಕಾಶ ಕಲ್ಪಿಸಬಾರದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News