ವಿಶ್ವದಲ್ಲಿ 40 ಲಕ್ಷ ದಾಟಿದ ಕೋವಿಡ್ ಸಾವು : ವರದಿ

Update: 2021-06-18 03:50 GMT

ಹೊಸದಿಲ್ಲಿ: ವಿಶ್ವದ ಹಲವು ದೇಶಗಳು ಕೋವಿಡ್-19 ಲಸಿಕೆ ಕೊರತೆಯಿಂದ ಕಂಗೆಟ್ಟಿರುವ ನಡುವೆಯೇ ಈ ಸೋಂಕಿಗೆ ಬಲಿಯಾದವರ ಸಂಖ್ಯೆ ಶುಕ್ರವಾರ 40 ಲಕ್ಷದ ಗಡಿದಾಟಿದೆ ಎಂದು hindustan times ವರದಿ ಮಾಡಿದೆ.

ಅಮೆರಿಕ ಹಾಗೂ ಬ್ರಿಟನ್‌ನಂಥ ಕೆಲ ದೇಶಗಳಲ್ಲಿ ಹೊಸ ಪ್ರಕರಣ ಮತ್ತು ಸಾವಿನ ಸಂಖ್ಯೆಯನ್ನು ನಿಯಂತ್ರಿಸಿರುವ ನಡುವೆಯೇ ವಿಶ್ವದ ಹಲವು ದೇಶಗಳಲ್ಲಿ ಡೆಲ್ಟಾ ಪ್ರಬೇಧ ಹರಡುತ್ತಿದೆ. ಹಲವು ದೇಶಗಳು ಲಸಿಕೆ ಕೊರತೆ ಎದುರಿಸುತ್ತಿವೆ. ಕೊರೋನ ವೈರಸ್ ಸೋಂಕಿನಿಂದ ಮೊದಲ ಇಪ್ಪತ್ತು ಲಕ್ಷ ಮಂದಿ ಸಾಯಲು ಒಂದು ವರ್ಷ ಅವಧಿ ಹಿಡಿದಿದ್ದರೆ, ನಂತರ ಇಪ್ಪತ್ತು ಲಕ್ಷ ಮಂದಿ ಕೇವಲ 166 ದಿನಗಳಲ್ಲಿ ಬಲಿಯಾಗಿದ್ದಾರೆ ಎಂದು ರಾಯ್ಟರ್ಸ್‌ ಸುದ್ದಿಸಂಸ್ಥೆ ಅಂಕಿ ಅಂಶಗಳ ವಿಶ್ಲೇಷಣೆ ಮಾಡಿದೆ.

ಸಾವಿನಲ್ಲಿ ಅಮೆರಿಕ, ಬ್ರೆಝಿಲ್, ಭಾರತ, ರಷ್ಯಾ ಮತ್ತು ಮೆಕ್ಸಿಕೋ ಅಗ್ರಸ್ಥಾನದಲ್ಲಿವೆ. ಇಡೀ ವಿಶ್ವದಲ್ಲಿ ಸೋಂಕಿಗೆ ಬಲಿಯಾಗಿರುವ ಒಟ್ಟು ಸಂಖ್ಯೆಯ ಪೈಕಿ ಅರ್ಧದಷ್ಟು ಮಂದಿ ಈ ಐದು ದೇಶಗಳಲ್ಲಿ ಮೃತಪಟ್ಟಿದ್ದಾರೆ. ಆದರೆ ಜನಸಂಖ್ಯೆಗೆ ಹೋಲಿಸಿದರೆ ಅತ್ಯಧಿಕ ಸಾವಿನ ಪ್ರಮಾಣ ದಾಖಲಾಗಿರುವುದು ಪೆರು, ಹಂಗೇರಿ, ಬೋಸ್ನಿಯಾ ಮತ್ತು ಜೆಕ್ ಗಣರಾಜ್ಯದಲ್ಲಿ.

ಕಳೆದ ಮಾರ್ಚ್‌ನಿಂದೀಚೆಗೆ ಸಾಂಕ್ರಾಮಿಕ ಲ್ಯಾಟಿನ್ ಅಮೆರಿಕ ದೇಶಗಳಲ್ಲಿ ವ್ಯಾಪಕವಾಗಿದ್ದು, ಪ್ರತಿ 100 ಮಂದಿಯ ಪೈಕಿ 43 ಮಂದಿ ಸೋಂಕಿತರಾಗಿರುವುದು ಕಳವಳಕಾರಿ ಬೆಳವಣಿಗೆ. ಕಳೆದ ವಾರ ವಿಶ್ವದಲ್ಲೇ ಅತ್ಯಧಿಕ ಸಾವಿನ ದರ ದಾಖಲಾಗಿರುವ ದೇಶಗಳ ಪೈಕಿ ಲ್ಯಾಟಿನ್ ಅಮೆರಿಕ ದೇಶಗಳು ಮೊದಲ ಒಂಬತ್ತು ಸ್ಥಾನಗಳನ್ನು ಆಕ್ರಮಿಸಿಕೊಂಡಿವೆ.

ಬೊಲಿವಿಯಾ, ಚಿಲಿ ಮತ್ತು ಉರುಗ್ವೆಯಂಥ ದೇಶಗಳ ಆಸ್ಪತ್ರೆಗಳಲ್ಲಿ 25 ರಿಂದ 40 ವರ್ಷ ವಯಸ್ಸಿನ ಮಂದಿ ಹೆಚ್ಚಾಗಿ ಸಾಯುತ್ತಿದ್ದಾರೆ. ಅತ್ಯಧಿಕ ದೈನಿಕ ಸಾವಿನ ಸಂಖ್ಯೆ ಭಾರತ ಮತ್ತು ಬ್ರೆಝಿಲ್‌ನಿಂದ ವರದಿಯಾಗುತ್ತಿವೆ ಎಂದು ಅಂಕಿಅಂಶ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News