ತೈಲ ದರ ಏರಿಕೆ: ಬೆಂಗಳೂರಿನಲ್ಲಿ 100 ರೂ. ಗಡಿ ದಾಟಿದ ಪೆಟ್ರೋಲ್ ಬೆಲೆ

Update: 2021-06-18 17:53 GMT

ಬೆಂಗಳೂರು, ಜೂ.18: ಬೆಂಗಳೂರಿನಲ್ಲಿ ಪೆಟ್ರೋಲ್ ದರ 100ರ ಗಡಿಯನ್ನು ದಾಟಿದೆ. ಶುಕ್ರವಾರ ಬೆಳಗ್ಗೆಯಿಂದ ಪೆಟ್ರೋಲ್ ದರ ಏರಿಕೆಯಾಗಿದ್ದು ನಗರದ ಬಂಕ್‍ಗಳಲ್ಲಿ ಪೆಟ್ರೋಲ್ ದರ 100.25 ಪೈಸೆ ಆಗಿದೆ. 

ನಗರದ ಭಾರತ್ ಪೆಟ್ರೋಲಿಯಂ ಬಂಕ್‍ನಲ್ಲಿ 100.25 ಪೈಸೆ, ಇಂಡಿಯನ್ ಆಯಿಲ್ ಬಂಕ್‍ಗಳಲ್ಲಿ ಪೆಟ್ರೋಲ್ 100.17 ಪೈಸೆ ಏರಿಕೆಯಾಗಿದೆ. ಡಿಸೇಲ್ ದರ 92.97 ಪೈಸೆಯಷ್ಟು ಏರಿಕೆಯಾಗಿದೆ. ಕಳೆದ ಒಂದೂವರೆ ತಿಂಗಳಿಂದ ಪೆಟ್ರೋಲ್ ಮತ್ತು ಡಿಸೇಲ್ ದರ ನಿರಂತರವಾಗಿ ಏರಿಕೆಯಾಗುತ್ತಿದೆ. ಬೆಂಗಳೂರಿನ ಕಳೆದ ಒಂದು ವಾರದಿಂದ 99 ರೂಪಾಯಿ ಆಸುಪಾಸಿನಲ್ಲಿದ್ದ ಪೆಟ್ರೋಲ್ ದರ ಶುಕ್ರವಾರ ಬೆಳಗ್ಗೆ 100ರ ಗಡಿಯನ್ನು ದಾಟಿದೆ.

ಇನ್ನೂ ಸತತವಾಗಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಗಳು ಏರಿಕೆ ಆಗುತ್ತಿರುವುದರಿಂದ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಕಳೆದ ಒಂದೂವರೆ ತಿಂಗಳಿಂದ ಸುಮಾರು 40ಕ್ಕೂ ಹೆಚ್ಚು ಬಾರಿ ಪೆಟ್ರೋಲ್ ಬೆಲೆ ಏರಿಕೆ ಆಗಿದ್ದು ವಾಹನ ಸವಾರರ ಜೇಬಿಗೆ ಕತ್ತರಿ ಬೀಳುವಂತಾಗಿದೆ.  ಪೆಟ್ರೋಲ್ ದರ ಏರಿಕೆಯಿಂದ ಬಡವರ, ಮಧ್ಯಮ ವರ್ಗದ ಜನರ ಮೇಲೆ ಬಾರಿ ಪೆಟ್ಟು ಬೀಳಲಿದೆ ಎಂದು ವಾಹನ ಸವಾರರು ಬೇಸರ ವ್ಯಕ್ತಪಡಿಸಿದರು.

ಪ್ರತಿದಿನ ಕೂಲಿ ಕೆಲಸಕ್ಕಾಗಿ ನಗರದ ಒಂದು ಕಡೆಯಿಂದ ಇನ್ನೊಂದು ಕಡೆಗೆ ಬೈಕ್‍ಗಳಲ್ಲಿ ಓಡಾಡುತ್ತಿದ್ದೇವೆ. ಆದರೆ, ಪ್ರತಿದಿನ ಪೈಸೆಗಳ ಲೆಕ್ಕದಲ್ಲಿ ಪೆಟ್ರೋಲ್ ದರ ಏರಿಕೆ ಆಗುತ್ತಿದ್ದು ಒಂದು ದಿನಕ್ಕೆ ನೂರು ರೂಪಾಯಿ ಪೆಟ್ರೋಲ್ ಹಾಕಿಸಿದರು ಸಾಕಾಗುತ್ತಿಲ್ಲ. ದಿನ ಕೂಲಿ 500 ರೂಪಾಯಿ ಕೊಡುತ್ತಾರೆ ಅದರಲ್ಲಿ ಮನೆ ಖರ್ಚು ವೆಚ್ಚ, ಬಾಡಿಗೆ, ಮಕ್ಕಳು, ಪೆಟ್ರೋಲ್ ಸೇರಿ ಎಲ್ಲವೂ ಹೊಂದಾಣಿಕೆ ಮಾಡಬೇಕು. ಆದರೆ, ಪೆಟ್ರೋಲ್ ದರ ದಿನ ಹೀಗೆ ಏರಿಕೆ ಆಗುತ್ತಿದ್ದರೆ ಹೇಗೆ ನಾವು ಬದುಕುವುದು ಎಂದು ಗಾರೆ ಕೆಲಸ ಮಾಡುವ ವ್ಯಕ್ತಿ ತಮ್ಮ ಅಳಲು ವ್ಯಕ್ತಪಡಿಸಿದರು.

ಇನ್ನು ಕೊರೋನ ಹಿನ್ನೆಲೆಯಲ್ಲಿ ಕೆಲಸಗಳು ಕಡಿತವಾಗಿದೆ. ಸಂಬಳ ಸಹ ಸರಿಯಾಗಿ ಸಿಗುತ್ತಿಲ್ಲ. ಬೈಕ್ ಇದ್ದರೆ ಎಲ್ಲೊ ಒಂದು ಕಡೆ ಓಡಾಡಿ ಏನಾದರೂ ಕೆಲಸ ಮಾಡಬಹುದು. ಆದರೆ, ಈಗ ಪೆಟ್ರೋಲ್ ದರ ಗಗನಕ್ಕೇರುತ್ತಿದ್ದು ನಮ್ಮಂತಹ ಮಧ್ಯಮ ವರ್ಗದ ಜನರ ಕಷ್ಟ ಕೇಳುವವರು ಯಾರು ಅನ್ನೋದು ಸಾರ್ವಜನಿಕರ ಮಾತಾಗಿದೆ.

ಕಳೆದ ಎರಡು ತಿಂಗಳು ಲಾಕ್ ಡೌನ್ ಇರುವುದರಿಂದ ಕೆಲಸವಿಲ್ಲದೆ ಮನೆಯಲ್ಲಿ ಇದ್ದು ಈಗ ಕೆಲಸದತ್ತ ಮುಖ ಮಾಡಿದ್ದೇವೆ. ಆದರೆ, ಜೀವನ ತುಂಬ ಕಷ್ಟ ಆಗುತ್ತಿದೆ. ಸರಕಾರ ಬಡವರ ಬಗ್ಗೆ ಸ್ವಲ್ಪ ಗಮನಹರಿಸಬೇಕು ಅನ್ನೋದು ಸಾರ್ವಜನಿಕ ಅಭಿಪ್ರಾಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News