ಯೋಗ ದಿನದ ಅಂಗವಾಗಿ 800 ಅಂಚೆ ಕಚೇರಿಗಳಲ್ಲಿ ವಿಶೇಷ ಅಂಚೆ ಮೊಹರು ಪ್ರಕಟಣೆ

Update: 2021-06-18 18:13 GMT

ಬೆಂಗಳೂರು, ಜೂ.18: ಭಾರತೀಯ ಅಂಚೆ ಇಲಾಖೆಯು 2021ರ ಅಂತರ್‍ರಾಷ್ಟ್ರೀಯ ಯೋಗ ದಿನಾಚರಣೆಯ ಗುರುತಿಗಾಗಿ 800 ಪ್ರಧಾನ ಅಂಚೆ ಕಚೇರಿಗಳಲ್ಲಿ ವಿಶೇಷ ಅಂಚೆ ಮೊಹರನ್ನು ಹೊರತರಲಾಗುವುದು ಎಂದು ಜಯನಗರದ ಪೋಸ್ಟ್ ಮಾಸ್ಟರ್ ತಿಳಿಸಿದ್ದಾರೆ.

ಎಲ್ಲಾ ವಿತರಣಾ ಹಾಗೂ ವಿತರಣೆ ಇಲ್ಲದ ಪ್ರಧಾನ ಅಂಚೆ ಕಚೇರಿಗಳಲ್ಲಿ ಜೂ.21ರಂದು ಬುಕ್ಕಿಂಗ್ ಮಾಡಲಾದ ಎಲ್ಲಾ ಪತ್ರಗಳ ಮೇಲೆ ಈ ವಿಶೇಷ ಅಂಚೆ ಮೊಹರನ್ನು ಹಾಕಲಾಗುತ್ತದೆ. ಈ ವಿಶೇಷ ಚಿತ್ರಾತ್ಮಕವಾದ ಅಂಚೆ ಮೊಹರು ಶಾಯಿಯ ಗುರುತು ಅಥವಾ ಮುದ್ರಣವಾಗಿದ್ದು, ವಿಶೇಷವಾಗಿ ವಿನ್ಯಾಸಿಸಲ್ಪಟ್ಟ ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳೆರಡರಲ್ಲೂ ಅಂತರ್‍ರಾಷ್ಟ್ರೀಯ ಯೋಗ ದಿನ 2021 ಎಂಬುದಾಗಿ ಬರೆಯಲ್ಪಿಟ್ಟಿದೆ. ಅಂಚೆ ಚೀಟಿಗಳು ಮತ್ತೊಮ್ಮೆ ಬಳಸದಂತೆ ತಡೆಯಲು ಅಂಚೆ ಚೀಟಿಗಳ ಮೇಲೆ ವಿಶೇಷ ಅಂಚೆ ಮೊಹರು ಸ್ಪಷ್ಟಪಡಿಸಲಿದೆ.

ಭಾರತೀಯ ಅಂಚೆ ಚೀಟಿ ಸಂಗ್ರಹಕಾರರಿಗೆ ಯೋಜನೆಯೊಂದನ್ನು ನಡೆಸುತ್ತಿದ್ದು, ಸಂಗ್ರಹಕಾರರಿಗೆಂದೇ ಗೊತ್ತುಪಡಿಸಲಾದ ಫಿಲಾಟೆಲಿ ಶಾಖೆಗಳು ಹಾಗೂ ಕೌಂಟರ್ ಗಳಲ್ಲಿ ಯೋಜನೆಯನ್ನು ಪಡೆಯಬಹುದು. ದೇಶಾದ್ಯಂತ ಇರುವ ಅಂಚೆ ಇಲಾಖೆಯ ಯಾವುದೇ ಪ್ರಧಾನ ಅಂಚೆ ಕಚೇರಿಯಲ್ಲಿ 200ರೂ. ಠೇವಣಿ ಇಡುವುದರೊಂದಿಗೆ ಖಾತೆಯನ್ನು ತೆರೆದು ಅಂಚೆ ಚೀಟಿಗಳು ಹಾಗೂ ವಿಶೇಷ ಲಕೋಟೆಗಳನ್ನು ಪಡೆಯಬಹುದು. ಹೆಚ್ಚುವರಿಯಾಗಿ ಸ್ಮರಣಾರ್ಥವಾಗಿ ಹೊರತಂದ ಅಂಚೆ ಚೀಟಿಗಳು ಸೀಮಿತ ಪ್ರಮಾಣದಲ್ಲಿ ಮುದ್ರಿತವಾಗಿರುವುದರಿಂದ ಇವುಗಳು ಕೇವಲ ಶಾಖೆಗಳು ಮತ್ತು ಕೌಂಟರ್ ಗಳಲ್ಲಿ ಠೇವಣಿ ಖಾತೆಯಡಿಯಲ್ಲಿ ಲಭ್ಯವಿರುತ್ತದೆ.

ಈ ವಿಶೇಷ ಅಂಚೆ ಮೊಹರು ಬೆಂಗಳೂರು ದಕ್ಷಿಣ ಅಂಚೆ ವಿಭಾಗದ ಎರಡು ಪ್ರಧಾನ ಅಂಚೆ ಕಚೇರಿಗಳಾದ ಬಸವನಗುಡಿ ಮತ್ತು ಜಯನಗರ ಪ್ರಧಾನ ಅಂಚೆ ಕಚೇರಿಗಳಲ್ಲಿ ಜೂ.20 ರಂದು ಲಭ್ಯವಿರುತ್ತದೆ. ಅಂಚೆ ಮೊಹರನ್ನು ಪಡೆಯಲಿಚ್ಛಿಸುವ ಆಸಕ್ತರು ಹಿರಿಯ ಅಂಚೆ ಪಾಲಕರು, ಬಸವನಗುಡಿ ಮತ್ತು ಅಂಚೆ ಪಾಲಕರು, ಜಯನಗರ ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News