ದೇಶದಲ್ಲಿ 5 ತಿಂಗಳಲ್ಲಿ ಕೋವಿಡ್ ಲಸಿಕೆ ಲಭಿಸಿದ್ದೆಷ್ಟು ಮಂದಿಗೆ ಗೊತ್ತೇ?

Update: 2021-06-19 04:14 GMT

ಹೊಸದಿಲ್ಲಿ, ಜೂ.19: ದೇಶದಲ್ಲಿ ಕೋವಿಡ್-19 ಲಸಿಕೆ ನೀಡಿಕೆ ಆರಂಭವಾಗಿ ಐದು ತಿಂಗಳು ಕಳೆದರೂ, ಶೇಕಡ 5ರಷ್ಟು ಮಂದಿಗೆ ಮಾತ್ರ ಲಸಿಕೆಯ ಎರಡೂ ಡೋಸ್‌ಗಳನ್ನು ನೀಡಲಾಗಿದೆ ಎನ್ನುವುದು ಸರ್ಕಾರದ ಅಂಕಿ ಅಂಶಗಳಿಂದ ತಿಳಿದು ಬರುತ್ತದೆ.

ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ನೀಡಿದ ಅಂಕಿ ಅಂಶಗಳ ಪ್ರಕಾರ ದೇಶದ 94 ಕೋಟ ವಯಸ್ಕರ ಪೈಕಿ 5.03 ಕೋಟಿ ಮಂದಿಗೆ ಮಾತ್ರ ಎರಡೂ ಡೋಸ್‌ಗಳನ್ನು ಪೂರ್ಣಗೊಳಿಸಲಾಗಿದೆ.

ದೇಶದಲ್ಲಿ ಒಟ್ಟು 27.07 ಕೋಟಿ ಡೋಸ್‌ಗಳನ್ನು ಇದುವರೆಗೆ ನೀಡಲಾಗಿದೆ. ಅಂದರೆ ಶೇಕಡ 25ರಷ್ಟು ವಯಸ್ಕರು ಕನಿಷ್ಠ ಒಂದು ಡೋಸ್ ಪಡೆದಿದ್ದಾರೆ. ವಿಶ್ವದಲ್ಲಿ ಎರಡೂ ಡೋಸ್‌ಗಳನ್ನು ಪಡೆದವರ ಜನರ ಪ್ರಮಾಣದಲ್ಲಿ 80 ದೇಶಗಳು ಭಾರತಕ್ಕಿಂತ ಮುಂದಿವೆ.

ಕಳೆದ ಒಂದು ವಾರದಿಂದ ದೇಶದಲ್ಲಿ ಸರಾಸರಿ ದೈನಿಕ ಲಸಿಕೆ ನೀಡಿಕೆ ಸಂಖ್ಯೆ 30.57 ಲಕ್ಷ ಆಗಿದೆ. ಇದು ಕೇಂದ್ರ ಸರ್ಕಾರ ಸದ್ಯ ತಿಂಗಳಿಗೆ ನಿಗದಿಪಡಿಸಿದ್ದ ದೈನಿಕ 40 ಲಕ್ಷದ ಗುರಿಗೆ ಹೋಲಿಸಿದರೆ ಕಡಿಮೆ. ಇದುವರೆಗಿನ ಗರಿಷ್ಠ ಎಂದರೆ ದೇಶದಲ್ಲಿ 38.20 ಲಕ್ಷ ಡೋಸ್‌ಗಳನ್ನು ನೀಡಲಾಗಿತ್ತು.

ಈ ವರ್ಷದ ಕೊನೆಯ ಒಳಗಾಗಿ ಎಲ್ಲ ವಯಸ್ಕ ಜನಸಂಖ್ಯೆಗೆ ಲಸಿಕೆ ನೀಡಿಕೆ ಪೂರ್ಣಗೊಳಿಸಲಾಗುವುದು ಎಂಬ ಕೇಂದ್ರ ಸರ್ಕಾರದ ಘೋಷಣೆ ನಿಜವಾಗಬೇಕಿದ್ದರೆ ದಿನಕ್ಕೆ ಸರಾಸರಿ 70-75 ಲಕ್ಷ ಡೋಸ್‌ಗಳನ್ನು ನೀಡುವುದು ಅಗತ್ಯ ಎಂದು ರಾಷ್ಟ್ರೀಯ ಕೋವಿಡ್ ಕಾರ್ಯಪಡೆಯ ಸದಸ್ಯರೊಬ್ಬರು ಹೇಳಿದ್ದಾರೆ. ಆದರೆ ಲಸಿಕೆ ಕೊರತೆ ಕಾರಣದಿಂದಾಗಿ ಗುರಿ ತಲುಪಲು ಸಾಧ್ಯವಾಗಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News