ವೈದ್ಯರ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಎಫ್ಐಆರ್ ದಾಖಲಿಸಿ: ರಾಜ್ಯಗಳಿಗೆ ಕೇಂದ್ರದ ಸೂಚನೆ

Update: 2021-06-20 18:35 GMT

ಹೊಸದಿಲ್ಲಿ: ವೈದ್ಯರು ಮತ್ತು ಆರೋಗ್ಯಕಾರ್ಯಕರ್ತರ ವಿರುದ್ಧ ಹಲ್ಲೆ ನಡೆಸುವವರ ವಿರುದ್ಧ 2020ರ ಸಾಂಕ್ರಾಮಿಕ ರೋಗ(ತಿದ್ದುಪಡಿ) ಕಾಯ್ದೆಯ ಪ್ರಕಾರ ಪ್ರಕರಣ ದಾಖಲಿಸುವಂತೆ ಕೇಂದ್ರ ಸರಕಾರ ರಾಜ್ಯಗಳಿಗೆ ಶನಿವಾರ ಸೂಚಿಸಿದೆ.

ಕೊರೋನ ಸೋಂಕಿನ ಸಂದರ್ಭ ದೇಶದ ಹಲವೆಡೆ ವೈದ್ಯರು, ನರ್ಸ್ಗಳು ಸೇರಿದಂತೆ ಆರೋಗ್ಯ ಕಾರ್ಯಕರ್ತರ ಮೇಲಿನ ಹಲ್ಲೆ ಘಟನೆ ವರದಿಯಾದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಇಲಾಖೆಯ ಕಾರ್ಯದರ್ಶಿ ಅಜಯ್ ಭಲ್ಲಾ ಈ ಕುರಿತು ಪತ್ರ ರವಾನಿಸಿದ್ದಾರೆ.

ವೈದ್ಯರು ಹಾಗೂ ಇತರ ಆರೋಗ್ಯ ಕಾರ್ಯಕರ್ತರ ಮೇಲೆ ಹಲ್ಲೆ ನಡೆದರೆ ಅವರ ನೈತಿಕ ಸ್ಥೈರ್ಯ ಕುಸಿಯುವ ಜೊತೆಗೆ ಅವರಲ್ಲಿ ಅಭದ್ರತೆಯ ಭಾವನೆ ಮೂಡಿಸುತ್ತದೆ ಎಂಬುದನ್ನು ನೀವು ಒಪ್ಪುತ್ತೀರಿ. ಇಂತಹ ಘಟನೆ ಆರೋಗ್ಯಸೇವೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಆದ್ದರಿಂದ ಈಗಿನ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಆರೋಗ್ಯಕಾರ್ಯಕರ್ತರ ಮೇಲೆ ಹಲ್ಲೆ ನಡೆಸುವವರ ವಿರುದ್ಧ ಅತ್ಯಂತ ಕಠಿಣ ಕ್ರಮ ಕೈಗೊಳ್ಳದೆ ವಿಧಿಯಿಲ್ಲ ಎಂದು ಪತ್ರದಲ್ಲಿ ಹೇಳಲಾಗಿದೆ.

ಹಲ್ಲೆ ನಡೆಸುವವರ ವಿರುದ್ಧ 2020 ರ ಸಾಂಕ್ರಾಮಿಕ ರೋಗ(ತಿದ್ದುಪಡಿ) ಕಾಯ್ದೆಯ ಪ್ರಕಾರ ಎಫ್ಐಆರ್ ದಾಖಲಿಸಿ ತ್ವರಿತ ವಿಚಾರಣೆ ನಡೆಸಬೇಕು ಎಂದು ಸೂಚಿಸಲಾಗಿದೆ. ಈ ಕಾಯ್ದೆಯ ಪ್ರಕಾರ, ವೈದ್ಯರು ಮತ್ತು ಆರೋಗ್ಯಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದವರಿಗೆ ೫ ವರ್ಷ ಜೈಲುಶಿಕ್ಷೆ ಹಾಗೂ 2 ಲಕ್ಷ ರೂ.ವರೆಗೆ ದಂಡ ವಿಧಿಸಬಹುದಾಗಿದೆ. ಒಂದು ವೇಳೆ ಹಲ್ಲೆಯಿಂದ ಗಂಭೀರ ಗಾಯವಾದರೆ ಆಗ 7 ವರ್ಷ ಜೈಲುಶಿಕ್ಷೆ, 5 ಲಕ್ಷ ರೂ.ವರೆಗೆ ದಂಡ ವಿಧಿಸಬಹುದು. ಇದು ಜಾಮೀನುರಹಿತ ಅಪರಾಧವಾಗಿದೆ ಎಂದು ಕಾಯ್ದೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News