ಸೋಂಕು ಕೊನೆಯಾಗಿ ಜನರು ನೆಮ್ಮದಿಯಿಂದ ಬದುಕಲಿ: ಮುಖ್ಯಮಂತ್ರಿ ಯಡಿಯೂರಪ್ಪ

Update: 2021-06-21 13:39 GMT

ಬೆಂಗಳೂರು, ಜೂ. 21: ಕೋವಿಡ್ ಸೋಂಕು ತಡೆಗಟ್ಟಲು ಹದಿನೆಂಟು ವರ್ಷ ಮೇಲ್ಪಟ್ಟವರೆಲ್ಲರಿಗೂ ಉಚಿತವಾಗಿ ಲಸಿಕೆ ನೀಡುವ ಮಹಾ ಲಸಿಕಾ ಮೇಳಕ್ಕೆ ಇಂದಿಲ್ಲಿ ಚಾಲನೆ ನೀಡಿದ ಮುಖ್ಯಮಂತ್ರಿ ಯಡಿಯೂರಪ್ಪ, `ಕರ್ನಾಟಕ ರಾಜ್ಯದಲ್ಲಿ ಇಂದು ಒಂದೇ ದಿನ 7 ಲಕ್ಷ ಜನರಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. 18 ವರ್ಷ ಮೇಲ್ಪಟ್ಟವರಿಗೆ ಉಚಿತ ಲಸಿಕೆಯನ್ನು ಕೇಂದ್ರ ಸರಕಾರದಿಂದ ನೀಡುತ್ತಿರುವುದು ಸಂತೋಷದ ವಿಷಯ' ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸೋಮವಾರ ಇಲ್ಲಿನ ಶಿವಾಜಿನಗರದ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಮಹಾ ವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆ(ಬೌರಿಂಗ್ ಆಸ್ಪತ್ರೆ) ಲಸಿಕಾ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈಗಾಗಲೇ ಎಲ್ಲ ಜಿಲ್ಲಾ ಕೇಂದ್ರಗಳಿಗೆ ಲಸಿಕೆ ಸರಬರಾಜು ಮಾಡಲಾಗಿದೆ. ಈ ಅವಕಾಶವನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು. ಆದಷ್ಟು ಬೇಗ ಸೋಂಕು ಕೊನೆಯಾಗಿ ಜನರು ನೆಮ್ಮದಿಯಿಂದ ಬದುಕಲಿ ಎಂದು ಪ್ರಾರ್ಥಿಸಿದರು.

ಜನರು ನಿರೀಕ್ಷೆಗೆ ತಕ್ಕಂತೆ ಲಾಕ್‍ಡೌನ್ ಸಡಿಲಿಕೆ ಮಾಡಿ ಜನರಿಗೆ ಅನುಕೂಲ ಮಾಡಿಕೊಟ್ಟಿದ್ದೇವೆ. ನಾವು ಎಷ್ಟೇ ಅನುಕೂಲ ಮಾಡಿಕೊಟ್ಟರೂ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು. ಬಿಎಂಟಿಸಿ ಬಸ್‍ಗಳಲ್ಲಿ ನೂಕು ನುಗ್ಗಲು ಆಗುತ್ತಿದ್ದು, ಇದನ್ನು ತಪ್ಪಿಸಬೇಕು. ಜನರು ಮಾಸ್ಕ್ ಧರಿಸಿ, ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಬೇಕು. ಎಲ್ಲರೂ ಲಸಿಕೆ ಪಡೆಯಬೇಕು. ಇದಕ್ಕಾಗಿ ಇಂದು ದೇಶಾದ್ಯಂತ ಕೋವಿಡ್ ಲಸಿಕಾ ಅಭಿಯಾನ ಮಾಡಲಾಗುತ್ತಿದೆ ಎಂದು ಯಡಿಯೂರಪ್ಪ ತಿಳಿಸಿದರು.

ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News