ನೂತನ ಲಸಿಕೆ ನೀತಿಯ ಮೊದಲ ದಿನ ದಾಖಲೆಯ 69 ಲಕ್ಷ. ಜನರಿಗೆ ಲಸಿಕೆ

Update: 2021-06-21 17:19 GMT

ಹೊಸದಿಲ್ಲಿ,ಜೂ.21: ನೂತನ ಲಸಿಕೆ ನೀತಿಯು ಸೋಮವಾರ ಜಾರಿಗೊಂಡಿದ್ದು,ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 69 ಲಕ್ಷಕ್ಕೂ ಅಧಿಕ ಡೋಸ್ ಕೋವಿಡ್ ಲಸಿಕೆಯನ್ನು ನೀಡಲಾಗಿದೆ. ಇದು ಈವರೆಗಿನ ದಾಖಲೆ ಸಂಖ್ಯೆಯ ದೈನಂದಿನ ಲಸಿಕೆ ನೀಡಿಕೆಯಾಗಿದೆ.

ಇದರೊಂದಿಗೆ ಸರಕಾರವು 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಿಕೆಯನ್ನು ಆರಂಭಿಸಿದ್ದು,ಲಸಿಕೆ ನೀಡಿಕೆಯ ಮೇಲಿನ ನಿಯಂತ್ರಣವನ್ನು ರಾಜ್ಯಗಳಿಂದ ವಾಪಸ್ ಪಡೆದುಕೊಂಡಿದೆ.

ರಾಜ್ಯಗಳಿಗೆ ಹಂಚಿಕೆ ಮಾಡಲಾಗಿದ್ದ ಶೇ.25ರಷ್ಟು ಸೇರಿದಂತೆ ಕಂಪನಿಗಳು ಉತ್ಪಾದಿಸುವ ಶೇ.75ರಷ್ಟು ಲಸಿಕೆಗಳನ್ನು ಕೇಂದ್ರವೇ ಖರೀದಿಸಲಿದೆ ಮತ್ತು 18 ವರ್ಷಕ್ಕೆ ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ಲಸಿಕೆಯನ್ನು ಒದಗಿಸಲಿದೆ. ಉಳಿದ ಶೇ.25ರಷ್ಟು ಉತ್ಪಾದನೆಯ ಖರೀದಿಯನ್ನು ಖಾಸಗಿ ಆಸ್ಪತ್ರೆಗಳು ಮುಂದುವರಿಸಲಿವೆ ಮತ್ತು ಹಣ ಪಾವತಿ ಮಾಡಲು ಸಿದ್ಧವಿರುವವರಿಗೆ ಲಸಿಕೆಗಳನ್ನು ನೀಡಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಈ ತಿಂಗಳ ಆರಂಭದಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಪ್ರಕಟಿಸಿದ್ದರು.

ಎ.2ರಂದು ದೇಶಾದ್ಯಂತ 42,65,157 ಡೋಸ್ ಲಸಿಕೆಯನ್ನು ನೀಡಲಾಗಿದ್ದು,ಅದು ಈವರೆಗಿನ ಏಕದಿನದ ದಾಖಲೆಯಾಗಿತ್ತು.

ಲಾಕ್‌ಡೌನ್ ನಿರ್ಬಂಧಗಳು ಸಡಿಲಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಹಲವಾರು ರಾಜ್ಯಗಳು ಹೆಚ್ಚಿನ ದೈನಂದಿನ ಲಸಿಕೆ ನೀಡಿಕೆ ಗುರಿಗಳನ್ನು ನಿಗದಿಗೊಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News