ರವಿ ಪೂಜಾರಿಯನ್ನು ತಮ್ಮ ಕಸ್ಟಡಿಗೆ ನೀಡಲು ಗುಜರಾತ್ ಪೊಲೀಸರ ಮನವಿ

Update: 2021-06-21 16:53 GMT

ಬೆಂಗಳೂರು, ಜೂ.21: ಗಂಭೀರ ಅಪರಾಧ ಪ್ರಕರಣಗಳ ಸಂಬಂಧ ಭೂಗತ ಪಾತಕಿ ರವಿಪೂಜಾರಿ ವಿಚಾರಣೆಯನ್ನು ಕೇರಳ ಪೊಲೀಸರು ಮುಗಿಸಿದ ಬೆನ್ನಲ್ಲೇ ಗುಜರಾತ್ ಪೊಲೀಸರು ಬಾಡಿ ವಾರೆಂಟ್ ಮೇಲೆ ಕಸ್ಟಡಿಗೆ ಪಡೆಯಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ.

ಗುಜರಾತ್ ಭಯೋತ್ಪಾದಕ ನಿಗ್ರಹ ದಳ (ಎಟಿಎಸ್) ಕಸ್ಟಡಿಗೆ ನೀಡುವಂತೆ ಬೆಂಗಳೂರಿನ 62ನೇ ಸಿಸಿಹೆಚ್ ನ್ಯಾಯಾಲಯಕ್ಕೆ ಅಲ್ಲಿನ ಪೊಲೀಸರು ಮನವಿ ಸಲ್ಲಿಸಿದ್ದಾರೆ.

ಅರ್ಜಿ ಏಕೆ?: ಮಹಾರಾಷ್ಟ್ರ, ಕೇರಳ ಬಳಿಕ ಇದೀಗ ಗುಜರಾತ್ ಪೊಲೀಸರು ವಿಚಾರಣೆ ನಡೆಸಲಿದ್ದಾರೆ. ಇನ್ನು, 2017ರ ಜನವರಿಯಲ್ಲಿ ಗುಜರಾತ್‍ನ ಬೊರ್ಸಾದ್ ಕೌನ್ಸಿಲರ್ ಆಗಿದ್ದ ಪ್ರಗ್ನೇಶ್ ಪಟೇಲ್ ಎಂಬವರ ಮೇಲೆ ಬೈಕ್‍ನಲ್ಲಿ ಬಂದ ಮೂವರು ಆಗಂತುಕರು ಗುಂಡಿನ ದಾಳಿ ನಡೆಸಿ ಕೊಲೆಗೈದಿದ್ದರು.

ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮೂವರು ಸುಪಾರಿ ಹಂತಕರನ್ನು ಗುಜರಾತ್ ಎಟಿಎಸ್ ಅಧಿಕಾರಿಗಳು ಬಂಧಿಸಿದ್ದರು. ವಿಚಾರಣೆ ವೇಳೆ ಪಾತಕಿಯಾಗಿದ್ದ ರವಿ ಪೂಜಾರಿ ಪಾತ್ರ ಬೆಳಕಿಗೆ ಬಂದಿತ್ತು. ಈ ಸಂಬಂಧ ಹೆಚ್ಚಿನ ತನಿಖೆಗಾಗಿ ಆರೋಪಿಯನ್ನು ವಶಕ್ಕೆ ನೀಡುವಂತೆ ಎಟಿಎಸ್ ಅಧಿಕಾರಿಗಳು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಕರ್ನಾಟಕ ಸೇರಿದಂತೆ ನೆರೆ ರಾಜ್ಯಗಳಲ್ಲಿ ರೌಡಿಯಾಗಿದ್ದ ರವಿ ಪೂಜಾರಿ, ಬಂಧನ ಭೀತಿಯಿಂದ ಎರಡು ದಶಕಗಳ ಹಿಂದೆ ದೇಶ ಬಿಟ್ಟು ಪರಾರಿಯಾಗಿದ್ದ. ಸುದೀರ್ಘ ರಾಜ್ಯ ಗುಪ್ತಚರ ಇಲಾಖೆಯ ಪತ್ತೆ ಕಾರ್ಯ ಹಿನ್ನೆಲೆ 2019 ಜ.19ರಂದು ಸೆನೆಗಲ್ ಪೊಲೀಸರು ಈತನನ್ನು ಬಂಧಿಸಿದ್ದರು. ತದನಂತರ ರಾಜ್ಯ ಪೊಲೀಸರು ರವಿ ಪೂಜಾರಿಯನ್ನು ಭಾರತಕ್ಕೆ ಕರೆತಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News