50 ಕೋಟಿ ರೂ. ಮೌಲ್ಯದ ಮಾದಕ ವಸ್ತು ನಾಶಕ್ಕೆ ಚಾಲನೆ

Update: 2021-06-26 11:18 GMT

ಬೆಂಗಳೂರು, ಜೂ.26: ಒಂದು ವರ್ಷಗಳಲ್ಲಿ ಡ್ರಗ್ಸ್ ದಂಧೆಯ ಭೇದಿಸಿ ವಶಕ್ಕೆ ತೆಗೆದುಕೊಂಡಿರುವ 50 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ನಾಶಗೊಳಿಸುವ ಪ್ರಕ್ರಿಯೆಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.

ಶನಿವಾರ ಇಲ್ಲಿನ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಆಯೋಜಿಸಿದ್ದ ಮಾದಕವಸ್ತುಗಳ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು, 23.82 ಸಾವಿರ ಕೆಜಿ ಗಾಂಜಾ, 1 ಕೆಜಿ ಬ್ರೌನ್ ಶುಗರ್, 919 ಎಂಡಿಎಂ ಮಾತ್ರೆಗಳು ಸೇರಿದಂತೆ ಒಟ್ಟು 50 ಕೋಟಿ ಮೌಲ್ಯದ ವಿವಿಧ ಬಗೆಯ ಮಾದಕ ವಸ್ತುಗಳನ್ನು ನಾಶಕ್ಕೆ ಸೂಚಿಸಿದರು.

ಮಾದಕ ವಸ್ತುಗಳ ವಿರುದ್ಧದ ಸಮರದಲ್ಲಿ ತೊಡಗಿಕೊಂಡು ಕೆಲಸ ಮಾಡಿದ ರಾಜ್ಯದ ಪೊಲೀಸ್ ಇಲಾಖೆಗೆ ಅದರಲ್ಲೂ ಬೆಂಗಳೂರು ಪೊಲೀಸರ ಬಗ್ಗೆ ಅಭಿಮಾನ ಹೆಚ್ಚಿದೆ. ಎಲ್ಲ ಪೊಲೀಸರಿಗೂ ಅಭಿನಂದನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಯುವ ಜನತೆಯನ್ನು ದಿಕ್ಕು ತಪ್ಪಿಸಿ, ಅವರನ್ನು ಮಾದಕ ವಸ್ತುಗಳ ವ್ಯಸನಿಗಳನ್ನಾಗಿ ಮಾಡಿ ಅವರ ಭವಿಷ್ಯವನ್ನೇ ನಾಶಪಡಿಸುವ ಮಾದಕ ವಸ್ತುಗಳ ಜಾಲದ ಬಗ್ಗೆ ಪ್ರತಿಯೊಬ್ಬರೂ ಎಚ್ಚರ ವಹಿಸಬೇಕು. ಈ ಪಿಡುಗನ್ನು ತೊಲಗಿಸಲು ನಾಗರಿಕರು ಸರಕಾರದ ಜತೆ ಕೈ ಜೋಡಿಸಬೇಕು ಎಂದು ಹೇಳಿದರು.

ಹತ್ತು ವರ್ಷಗಳಲ್ಲಿ ವಶಪಡಿಸಿಕೊಂಡಿದ್ದ ಪ್ರಮಾಣದ ಮಾದಕ ವಸ್ತುಗಳನ್ನು ಕಳೆದ 2 ವರ್ಷಗಳಲ್ಲಿ ವಶಪಡಿಸಿಕೊಂಡಿದ್ದೇವೆ. ಮಾದಕ ವಸ್ತುಗಳ ವಿರುದ್ಧ ಸಮರ ನಿರಂತರವಾಗಲಿದೆ ಎಂದ ಅವರು, ಒಟ್ಟು 12 ವಿವಿಧ ರೀತಿಯ ಮಾದಕ ವಸ್ತುಗಳನ್ನು  ನಾಶಗೊಳಿಸುವುದಾಗಿ ಪ್ರಕಟಿಸಿದರು.

ಸದ್ಯಕ್ಕೆ 3 ಸಾವಿರ ಕೆಜಿಯಷ್ಟು ಮಾದಕ ವಸ್ತುವನ್ನು ನ್ಯಾಯಾಲಯದ ಅನುಮತಿ ಪಡೆದು ನಾಶಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಅನುಮತಿ ಪಡೆದು ಮತ್ತಷ್ಟು ಮಾದಕ ವಸ್ತುಗಳನ್ನು ನಾಶಪಡಿಸುವ ಕೆಲಸ ಮಾಡಲಾಗುವುದು ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಮಾದಕ ವಸ್ತುಗಳ ವಿರೋಧಿ ದಿನವನ್ನು ಔಪಚಾರಿಕವಾಗಿ ಆಚರಿಸುವುದಕ್ಕಿಂತ ಕಾರ್ಯಸಾಧನೆಯ ಮೂಲಕ ಆಚರಿಸುವುದು ಹೆಚ್ಚು ಅರ್ಥಪೂರ್ಣವಾಗುತ್ತದೆ. ಆ ನಿಟ್ಟಿನಲ್ಲಿ ರಾಜ್ಯ ಪೊಲೀಸರ ಸಾಧನೆ ಮೆಚ್ಚುವಂತದ್ದು ಎಂದು ನುಡಿದರು.

ಈ ಸಂದರ್ಭದಲ್ಲಿ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಪೊಲೀಸ್ ಮಹಾನಿರ್ದೇಶಕ ಪ್ರವೀಣ್‍ಸೂದ್, ನಗರ ಪೊಲೀಸ್ ಆಯುಕ್ತ ಕಮಲ್‍ಪಂತ್, ಕಾರಾಗೃಹ ಪೊಲೀಸ್ ಮಹಾನಿರ್ದೇಶಕ ಎ.ಮೋಹನ್, ಡಿಜಿಪಿ ಬಿ.ಎಸ್.ಸಂಧು ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News