ಕೊರೋನ ಯುದ್ಧದ ಮಹಿಳಾ ಬಲಿಪಶುಗಳು

Update: 2021-06-28 06:12 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಯುದ್ಧಗಳಿರಲಿ, ಸಾಂಕ್ರಾಮಿಕ ರೋಗಗಳಿರಲಿ ಅದರ ನೇರ ಬಲಿಪಶು ಮಹಿಳೆ. ಆ ಬಳಿಕ ಮಕ್ಕಳು. ಅಷ್ಟೇ ಅಲ್ಲ, ಕೋಮುಗಲಭೆಗಳಲ್ಲೂ ಮೊತ್ತ ಮೊದಲು ಗುರಿಯಾಗುವುದು ಮಹಿಳೆಯರೇ. ಗುಜರಾತ್ ಹತ್ಯಾಕಾಂಡದಲ್ಲಿ ಮಹಿಳೆಯರ ಮೇಲೆ ನಡೆದ ಭೀಕರ ದೌರ್ಜನ್ಯಗಳು ಇದಕ್ಕೆ ಉದಾಹರಣೆ. ಈ ದೇಶದಲ್ಲಿ ನಡೆದ ಹೆಚ್ಚಿನ ಗಲಭೆಗಳಲ್ಲಿ ಮಕ್ಕಳು ಮತ್ತು ಮಹಿಳೆಯರಿಗೆ ನ್ಯಾಯ ಸಿಕ್ಕಿದ್ದೇ ಇಲ್ಲ. ದಂಗೆಯ ಸಂದರ್ಭದಲ್ಲಿ ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರ, ದೌರ್ಜನ್ಯಗಳಿಗೆ ನ್ಯಾಯ ನೀಡುವುದು ಸುಲಭವೂ ಇಲ್ಲ. ಸಾಂಕ್ರಾಮಿಕ ರೋಗಗಳು ಯಾವ ಯುದ್ಧಕ್ಕೂ ಕಮ್ಮಿ ಇಲ್ಲ. ಆದರೆ ಅವು ಮಹಿಳೆಯರ ಮೇಲೆ, ಮಕ್ಕಳ ಮೇಲೆ ಬೀರುವ ದುಷ್ಪರಿಣಾಮಗಳನ್ನು ಪ್ರತ್ಯೇಕವಾಗಿ ನೋಡುವುದಕ್ಕೆ ಜಗತ್ತು ಇನ್ನೂ ಕಲಿತಿಲ್ಲ. ಕೊರೋನದ ಈ ಸಂಕಟಗಳ ಕಾಲದಲ್ಲಿ ಮಹಿಳೆಯರಿಗೆ ಮತ್ತು ಮಕ್ಕಳಿಗಾಗಿ ವಿಶೇಷ ನೆರವನ್ನು ನೀಡುವಲ್ಲಿ ನಾವು ವಿಫಲವಾಗಿರುವುದಕ್ಕೆ ಇದೇ ಕಾರಣ.

ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ಅಥವಾ ಬಡ ರಾಷ್ಟ್ರವಾಗಿ ಹಿಂದಕ್ಕೆ ಚಲಿಸುತ್ತಿರುವ ದೇಶದಲ್ಲಿ ಕೊರೋನ ಮಹಿಳೆಯರ ಮೇಲೆ ಹೇಳಿಕೊಳ್ಳಲಾಗದಷ್ಟು ದುಷ್ಪರಿಣಾಮಗಳನ್ನು ಬೀರಿದೆೆ. ಸಾರ್ವಜನಿಕ ಸ್ಥಳಗಳಲ್ಲಿ ಉದ್ಯೋಗವನ್ನು ಮಾಡುತ್ತಿರುವ ನಮ್ಮ ದೇಶದ ಮಹಿಳೆಯರೆಲ್ಲರೂ ಇಲ್ಲಿ ಸ್ವಾವಲಂಬಿಗಳಾಗಿಯೇನೂ ಇಲ್ಲ. ಆದರೂ ಪುರುಷರ ದೌರ್ಜನ್ಯಗಳಿಂದ, ಶೋಷಣೆಯಿಂದ ಪಾರಾಗಲು ಈ ದೇಶದ ಲಕ್ಷಾಂತರ ಮಹಿಳೆಯರಿಗೆ ಉದ್ಯೋಗಗಳು ಭಾರೀ ಪ್ರಮಾಣದಲ್ಲಿ ನೆರವಾಗಿದ್ದವು. ಕೊರೋನ ಕಾಲದಲ್ಲಿ, ಮೊತ್ತ ಮೊದಲು ಉದ್ಯೋಗದಿಂದ ಕಿತ್ತುಹಾಕಲ್ಪಟ್ಟಿರುವುದು ಇಂತಹ ಮಹಿಳೆಯರು. ಈವರೆಗೆ ಹೊರಗೆ ಉದ್ಯೋಗ ಮಾಡಿ ಮನೆ ನಿರ್ವಹಣೆಯನ್ನು ಮಾಡುತ್ತಿದ್ದ ಮಹಿಳೆಯರು ಇರುವ ಕೆಲಸಗಳನ್ನು ಕಳೆದುಕೊಂಡು ಏಕಾಏಕಿ ಮತ್ತೆ ಪುರುಷರ ಸೂತ್ರಕ್ಕೆ ಸಿಕ್ಕಿ ಹಾಕಿಕೊಳ್ಳುವಂತಾಯಿತು. ಇತ್ತ ಕೆಲಸ ಕಳೆದುಕೊಂಡ ಪುರುಷರು ಮನೆಯಲ್ಲಿ ಕುಳಿತಿರುವುದೂ ಮಹಿಳೆಯರ ಮೇಲೆ ಇನ್ನಷ್ಟು ದೌರ್ಜನ್ಯಗಳಿಗೆ ಕಾರಣವಾಗುತ್ತಿವೆ. ಕೆಲಸವಿಲ್ಲದೆ ಪುರುಷ ಮನೆಗೆ ಅಕ್ಕಿ, ಬೇಳೆ ತರಲು ಅಸಹಾಯಕನಾದಾಗಲೂ ಮನೆಯಲ್ಲಿ ಸಂಘರ್ಷಗಳು ನಡೆಯುತ್ತವೆ. ಇದೂ ಅಂತಿಮವಾಗಿ ಮಹಿಳೆಯರ ಮೇಲಿನ ಹಲ್ಲೆಯಲ್ಲೇ ಮುಕ್ತಾಯವಾಗುತ್ತದೆ.

ಲಾಕ್‌ಡೌನ್ ಸಂದರ್ಭದಲ್ಲಿ ಮದ್ಯ ಮಾರಾಟ ಜಾರಿಯಲ್ಲಿರುವುದರಿಂದ, ಪುರುಷರು ಮದ್ಯವನ್ನು ಚಟವಾಗಿಸಿಕೊಂಡಿದ್ದಾರೆ. ಮನೆಯಲ್ಲಿರುವ ಪಾತ್ರೆ, ಪಗಡಿಗಳನ್ನು ಮಾರಿ ಕುಡಿಯುವ ಸ್ಥಿತಿಗೆ ತಲುಪಿದ್ದಾರೆ. ಇದರ ಬಲಿಪಶು ಕೂಡ ಅಂತಿಮವಾಗಿ ಮಹಿಳೆಯರೇ ಆಗಿದ್ದಾರೆ. ವಿಶ್ವದೆಲ್ಲೆಡೆ ಆತಂಕ ಮೂಡಿಸಿದ ಕೊರೋನ ಸೋಂಕಿನ ಪಿಡುಗು ಪತ್ತೆಯಾದ ಆರಂಭದ ದಿನಗಳಲ್ಲಿ, ಕ್ವಾರಂಟೈನ್ ಮತ್ತು ಲಾಕ್‌ಡೌನ್‌ನಿಂದಾಗಿ ಪ್ರತೀ 3 ತಿಂಗಳಾವಧಿಯಲ್ಲಿ ಮಹಿಳೆಯರ ವಿರುದ್ಧದ ಹಿಂಸೆಯ ಪ್ರಕರಣ 15 ಮಿಲಿಯನ್ ಹೆಚ್ಚಬಹುದು ಎಂದು ವಿಶ್ವಸಂಸ್ಥೆ ಅಂದಾಜು ಮಾಡಿತ್ತು. ದುರದೃಷ್ಟವಶಾತ್, ಈ ಊಹೆ ಈಗ ನಿಜವಾಗುವ ನಿಟ್ಟಿನಲ್ಲಿದೆ. ಗೃಹ ಹಿಂಸೆ, ಲೈಂಗಿಕ ದೌರ್ಜನ್ಯ, ಅಕ್ರಮ ಸಾಗಣೆ, ಬಾಲ್ಯ ವಿವಾಹ, ಆನ್‌ಲೈನ್ ಮೂಲಕ ಕಿರುಕುಳ ಇತ್ಯಾದಿ ರೂಪದಲ್ಲಿ ಮಹಿಳೆಯರ ವಿರುದ್ಧದ ಹಿಂಸೆ ಲಾಕ್‌ಡೌನ್ ಕಾಲದಲ್ಲಿ ಮಿತಿಮೀರಿದೆ. ವಿಶ್ವಸಂಸ್ಥೆ ಆಯ್ಕೆಮಾಡಿದ 12 ದೇಶಗಳ ವಿವಿಧ ಸಂಸ್ಥೆಗಳಲ್ಲಿ 2019ಕ್ಕೆ ಹೋಲಿಸಿದರೆ 2020ರಲ್ಲಿ ಮಹಿಳೆಯರ ವಿರುದ್ಧದ ಹಿಂಸೆ, ದೌರ್ಜನ್ಯದ ಪ್ರಕರಣ 83ಶೇ. ಹೆಚ್ಚಿದೆ. ಪೊಲೀಸರಲ್ಲಿ ದಾಖಲಾಗಿರುವ ಪ್ರಕರಣಗಳಲ್ಲೂ 63 ಶೇ. ಹೆಚ್ಚಳವಾಗಿದೆ.

ಶ್ರೀಮಂತ ರಾಷ್ಟ್ರಗಳಿಗೂ ಇದು ಹೊರತಲ್ಲ. ಕೊರೋನ ಸೋಂಕಿನ ಪ್ರಥಮ ತಿಂಗಳಿನಲ್ಲಿ ಯುರೋಪಿಯನ್ ದೇಶಗಳಲ್ಲಿ ಸಹಾಯವಾಣಿಗೆ ಬಂದಿರುವ ಕರೆಗಳ ಸಂಖ್ಯೆಯಲ್ಲಿ ಸರಾಸರಿ 60ಶೇ. ಏರಿಕೆಯಾಗಿದೆ. ಥಾಯ್ಲೆಂಡ್‌ನಲ್ಲಿ ಆಸ್ಪತ್ರೆಗಳಲ್ಲಿರುವ ಗೃಹಹಿಂಸೆಗೆ ಸಂಬಂಧಿಸಿದ ವಿಭಾಗದಲ್ಲಿ ದಾಖಲಾದ ಪ್ರಕರಣಗಳು 2019ಕ್ಕೆ ಹೋಲಿಸಿದರೆ ದುಪ್ಪಟ್ಟಾಗಿದೆ. ಇಂದು ಕೊರೋನ ಎದುರಿಸುವ ನಿಟ್ಟಿನಲ್ಲಿ ಲಸಿಕೆ ಕಂಡು ಹಿಡಿಯಲಾಗಿದೆ. ಈ ಲಸಿಕೆಯಿಂದ ಕೊರೋನವನ್ನು ಜಗತ್ತು ಸಮರ್ಥವಾಗಿ ಎದುರಿಸುತ್ತದೆಯೋ ಇಲ್ಲವೋ ಎನ್ನುವುದು ಇನ್ನೂ ಸ್ಪಷ್ಟವಿಲ್ಲ. ಆದರೆ ಕೊರೋನ-ಲಾಕ್‌ಡೌನ್ ಸಂದರ್ಭದಲ್ಲಿ ಮುರಿದ ಮನೆಗಳನ್ನು, ಮುರಿದ ಮನಸ್ಸುಗಳನ್ನು ಯಾವ ಲಸಿಕೆಗಳೂ ಸರಿಪಡಿಸಲಾರವು. ಅದಕ್ಕಾಗಿ ಪ್ರತ್ಯೇಕವಾದ ಅಭಿಯಾನವೊಂದು ಆರಂಭವಾಗಬೇಕಾಗಿದೆ. ಭಾರತದಂತಹ ದೇಶದಲ್ಲಿ ಇಂತಹ ಅಭಿಯಾನಗಳೂ ಯಶಸ್ವಿಯಾಗುವುದು ಕಷ್ಟ ಎಂದು ತಜ್ಞರು ಹೇಳುತ್ತಾರೆ. ಯಾಕೆಂದರೆ, ಭಾರತೀಯ ಮನಸ್ಥಿತಿ ಮಹಿಳಾ ದೌರ್ಜನ್ಯವನ್ನು ಗಂಭೀರವಾಗಿ ತೆಗೆದುಕೊಂಡೇ ಇಲ್ಲ. ‘ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ’ ಎಂಬ ಗಾದೆಯೇ, ಮಹಿಳೆಯರ ಮೇಲೆ ನಡೆಯುವ ಹಲ್ಲೆ, ದೌರ್ಜನ್ಯಗಳನ್ನು ಭಾರತ ಎಷ್ಟರಮಟ್ಟಿಗೆ ಹಗುರವಾಗಿಸಿದೆ ಎನ್ನುವುದನ್ನು ಹೇಳುತ್ತದೆ.

ಮಹಿಳೆಯರ ಮತ್ತು ಹುಡುಗಿಯರ ವಿರುದ್ಧದ ಹಿಂಸಾಚಾರ ಕೊನೆಗೊಳಿಸಲು ನಡೆಸಿದ ಅಭಿಯಾನ 2020ರಲ್ಲಿ 25 ದೇಶಗಳಲ್ಲಿ ಗಮನಾರ್ಹ ಫಲ ನೀಡಿದೆ. ಮಹಿಳೆಯರು ಮತ್ತು ಹುಡುಗಿಯರ ಸಬಲೀಕರಣ ಕಾನೂನನ್ನು ಜಾರಿಗೊಳಿಸಲು ಅಥವಾ ಇದ್ದ ಕಾನೂನನ್ನು ಸಶಕ್ತಗೊಳಿಸುವ ನಿಟ್ಟಿನಲ್ಲಿ 84 ಕಾಯ್ದೆ ಮತ್ತು ನಿಯಮಗಳು ಜಾರಿಯಾಗಿವೆೆ. ಅಪರಾಧಿಗಳ ವಿರುದ್ಧದ ಕಾನೂನು ಉಪಕ್ರಮದಲ್ಲಿ 22ಶೇ. ಹೆಚ್ಚಳವಾಗಿದೆ. ಲಾಕ್‌ಡೌನ್ ಮತ್ತು ಸಂಚಾರ ನಿರ್ಬಂಧದ ಹೊರತಾಗಿಯೂ ಸುಮಾರು 6,50,000 ಮಹಿಳೆಯರು ಮತ್ತು ಹುಡುಗಿಯರು ನೆರವು ಪಡೆದಿದ್ದಾರೆ. ಧಾರ್ಮಿಕ ಸಂಸ್ಥೆಗಳ ಮುಖಂಡರು, ಪುರುಷ ಟ್ಯಾಕ್ಸಿ ಚಾಲಕರು, ಯುವ ಕ್ರೀಡಾಳುಗಳ ಸಹಿತ ಸುಮಾರು 9 ಲಕ್ಷ ಪುರುಷರು ಮತ್ತು ಬಾಲಕರನ್ನು ಮಹಿಳೆಯರ ವಿರುದ್ಧದ ದೌರ್ಜನ್ಯ ಸಮಸ್ಯೆಗೆ ಪರಿಹಾರ ರೂಪಿಸುವ ಪ್ರಕ್ರಿಯೆಯಲ್ಲಿ ಸೇರಿಸಿಕೊಳ್ಳಲಾಗಿದೆ.

ಈ ದೇಶಗಳಲ್ಲಿ ಮಹಿಳೆಯರ ಮತ್ತು ಹುಡುಗಿಯರ ವಿರುದ್ಧದ ಹಿಂಸಾಚಾರ ಕೊನೆಗೊಳಿಸುವ ನಿಟ್ಟಿನಲ್ಲಿ ಬಜೆಟ್ ಅನುದಾನದಲ್ಲಿ 32ಶೇ. ಹೆಚ್ಚಳ ಮಾಡಲಾಗಿದೆ. ಆದರೂ ಅಭಿವೃದ್ಧಿ ಹೊಂದುತ್ತಿರುವ ಭಾರತದಂತಹ ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಈ ದೌರ್ಜನ್ಯಗಳನ್ನು ತಡೆಯಲು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಂಡಿಲ್ಲ. ಲಾಕ್‌ಡೌನ್‌ನಿಂದಾಗಿ ಜೀತ, ಲೈಂಗಿಕ ಶೋಷಣೆಗಳು ಕೂಡ ಹೆಚ್ಚುತ್ತಿವೆಯಾದರೂ ಇವನ್ನೆಲ್ಲ ಗುರುತಿಸುವಲ್ಲೇ ಸರಕಾರ ಎಡವುತ್ತಿದೆ. ರೋಗವನ್ನೇ ಗುರುತಿಸಲು ವಿಫಲವಾಗಿರುವಾಗ ಅದಕ್ಕೆ ಲಸಿಕೆ ನೀಡುವ ಪ್ರಶ್ನೆಯಾದರೂ ಎಲ್ಲಿ ಬಂತು? ಕೊರೋನ ರೋಗದಿಂದ ನಾವು ಒಂದಲ್ಲ ಒಂದು ದಿನ ಮುಕ್ತರಾಗಬಹುದು, ಆದರೆ ಲಾಕ್‌ಡೌನ್‌ನ ಗಾಯಗಳಿಂದ ಮುಕ್ತವಾಗಲು ಔಷಧಿಗಳನ್ನು ಕಂಡು ಹಿಡಿಯುವ ಪ್ರಯತ್ನ ನಡೆಯದೇ ಇದ್ದರೆ, ನಮ್ಮ ಭವಿಷ್ಯ ಹೊಸ ರೋಗಗಳಿಗೆ ತೆರೆದುಕೊಳ್ಳುವ ಅಪಾಯಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News