ನ್ಯಾಯಾಂಗ ನಿಂದನೆ: ದ.ಆಪ್ರಿಕಾದ ಮಾಜಿ ಅಧ್ಯಕ್ಷ ಝುಮಾಗೆ ಜೈಲುಶಿಕ್ಷೆ

Update: 2021-06-29 18:34 GMT
ಜಾಕೊಬ್ ಝುಮಾ 

ಜೊಹಾನ್ಸ್ಬರ್ಗ್, ಜೂ.29: ಭ್ರಷ್ಟಾಚಾರ ಆರೋಪದ ಪ್ರಕರಣಗಳ ಕುರಿತ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗಲು ನಿರಾಕರಿಸಿರುವ ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ಜಾಕೊಬ್ ಝುಮಾ ಅವರಿಗೆ ನ್ಯಾಯಾಂಗ ನಿಂದನೆಗಾಗಿ 15 ತಿಂಗಳ ಜೈಲುಶಿಕ್ಷೆ ವಿಧಿಸಿ ಅಲ್ಲಿನ ಸರ್ವೋಚ್ಛ ನ್ಯಾಯಾಲಯ ತೀರ್ಪು ನೀಡಿದೆ.

ಸುಮಾರು 9 ವರ್ಷದ ಅವಧಿಗೆ ಅಧ್ಯಕ್ಷರಾಗಿದ್ದಾಗ ಸರಕಾರದ ಬೊಕ್ಕಸದಿಂದ ಹಣ ಲಪಟಾಯಿಸಿದ ಆರೋಪವನ್ನು 79 ವರ್ಷದ ಝುಮಾ ಎದುರಿಸುತ್ತಿದ್ದಾರೆ. ಆರೋಪದ ಬಗ್ಗೆ ತನಿಖೆಗೆ ಒತ್ತಡ ಹೆಚ್ಚಿದಾಗ ಝುಮಾ ಅವರೇ 2018ರಲ್ಲಿ ಪ್ರಕರಣದ ವಿಚಾರಣೆಗೆ, ಉಪ ಪ್ರಧಾನ ನ್ಯಾಯಾಧೀಶೆ ರೇಮಂಡ್ ರೆಂಡೊ ನೇತೃತ್ವದ ಸಮಿತಿಯೊಂದನ್ನು ನೇಮಿಸಿದ್ದರು. ಬಳಿಕ ಕೆಲ ಸಮಯದಲ್ಲೇ ಅವರನ್ನು ಅಧ್ಯಕ್ಷ ಹುದ್ದೆಯಿಂದ ಪದಚ್ಯುತಗೊಳಿಸಲಾಗಿತ್ತು. ಬಳಿಕ ನಡೆದ ವಿಚಾರಣೆಯಲ್ಲಿ ಝುಮಾ ಒಂದು ಬಾರಿ(2019ರ ಜುಲೈ) ಮಾತ್ರ ಹಾಜರಾಗಿದ್ದರು. ರೊಂಡೊ ಪಕ್ಷಪಾತ ತೋರುತ್ತಿದ್ದಾರೆ ಎಂದು ಆರೋಪಿಸಿ ಆ ಬಳಿಕದ ವಿಚಾರಣೆಗೆ ನಿರಂತರ ಗೈರುಹಾಜರಾಗುತ್ತಿದ್ದರು.

ಝುಮಾ ನ್ಯಾಯಾಂಗ ನಿಂದನೆ ಅಪರಾಧ ಎಸಗಿದ್ದಾರೆ ಎಂದು ಘೋಷಿಸದೆ ವಿಧಿಯಿಲ್ಲ ಎಂದು ತೀರ್ಪು ಘೋಷಿಸಿದ ನ್ಯಾಯಾಧೀಶೆ ಸಿಸಿ ಖಂಪೆಪೆ ಹೇಳಿದ್ದಾರೆ. ಈ ರೀತಿಯ ಉದ್ಧಟತ ಮತ್ತು ನ್ಯಾಯಾಂಗವನ್ನು ಧಿಕ್ಕರಿಸುವ ವರ್ತನೆ ಕಾನೂನುಬಾಹಿರವಾಗಿದ್ದು ಅವರಿಗೆ ಜೈಲುಶಿಕ್ಷೆ ವಿಧಿಸದೆ ಅನ್ಯಮಾರ್ಗವಿಲ್ಲ. ಈ ಮೂಲಕ ಕಾನೂನು ಮತ್ತು ನ್ಯಾಯದ ದೃಷ್ಟಿಯಲ್ಲಿ ಎಲ್ಲರೂ ಸಮಾನರು ಎಂಬ ಸಂದೇಶ ಸಾರಿದಂತಾಗುತ್ತದೆ . ಝುಮಾ 5 ದಿನದೊಳಗೆ ನ್ಯಾಯಾಲಯಕ್ಕೆ ಶರಣಾಗಬೇಕು ಎಂದು ಆದೇಶಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News