ಬಹುಕೋಟಿ ವಂಚನೆ ಆರೋಪ: ನಿತೇಶ್ ಎಸ್ಟೇಟ್ ಕಂಪೆನಿ ವಿರುದ್ಧ ಪ್ರಕರಣ ದಾಖಲು

Update: 2021-07-06 13:08 GMT

ಬೆಂಗಳೂರು, ಜು.6: ಬ್ಯಾಂಕಿಗೆ ಬಹುಕೋಟಿ ವಂಚನೆ ಆರೋಪ ಸಂಬಂಧ ನಿತೇಶ್ ಎಸ್ಟೇಟ್ ಕಂಪೆನಿ ವಿರುದ್ಧ ಇಲ್ಲಿನ ಕಬ್ಬನ್‍ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.

ಯೆಸ್ ಬ್ಯಾಂಕ್‍ನ ಮುಂಬೈ ಶಾಖೆ ಅಧಿಕಾರಿ ಆಶೀಶ್ ವಿನೋದ ಜೋಶಿ ಎಂಬುವವರು ನೀಡಿದ ದೂರಿನ ಮೇರೆಗೆ ನಿತೇಶ್ ಸಮೂಹ ಕಂಪೆನಿ ವಿರುದ್ಧ ಕಬ್ಬನ್‍ಪಾರ್ಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಿತೇಶ್ ಎಸ್ಟೇಟ್, ನಿತೇಶ್ ಹೌಸಿಂಗ್ ಡೆವಲಪ್‍ಮೆಂಟ್, ನಿತೇಶ್ ಅರ್ಬನ್ ಡೆವಲಪ್‍ಮೆಂಟ್ ಕಂಪೆನಿ ಹೆಸರಿನಲ್ಲಿ ಮುಂಬೈ ಹಾಗೂ ಬೆಂಗಳೂರಿನ ಕಸ್ತೂರಬಾ ರಸ್ತೆಯಲ್ಲಿರುವ ಯೆಸ್ ಬ್ಯಾಂಕ್‍ನಲ್ಲಿ ಹಣಕಾಸು ವ್ಯವಹಾರ ನಡೆಸಿತ್ತು. ಜತೆಗೆ ಕಂಪೆನಿಗಳ ಯೋಜನೆಗಳಾದ ಹೈಡ್‍ಪಾರ್ಕ್, ಕೊಲಂಬಸ್ ಸ್ಕ್ವೇರ್, ನ್ಯೂ ಥಣಿಸಂದ್ರ ಸೇರಿದಂತೆ ವಿವಿಧ ಪ್ರಾಜೆಕ್ಟ್ ಹೆಸರಿನಲ್ಲಿ ಅಭಿವೃದ್ಧಿ ನಿರ್ಮಾಣ ಮಾಡುವುದಾಗಿ ಹೇಳಿ ಬ್ಯಾಂಕ್‍ನಿಂದ ಹಂತ-ಹಂತವಾಗಿ ಸುಮಾರು 712 ಕೋಟಿ ರೂಪಾಯಿ ಪಡೆದಿದೆ ಎನ್ನುವ ಆರೋಪ ಕೇಳಿಬಂದಿದೆ.

ಹಣ ಹಿಂತಿರುಗಿಸುವುದಾಗಿ ಹೇಳಿ ಒಪ್ಪಂದದ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ಜೋಶಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News