ಸಿನೆಮಾ ಛಾಯಾಗ್ರಹಣ: ತಿದ್ದುಪಡಿ ಕರಡು ಮಸೂದೆ ಹಿಂಪಡೆಯಲು ಸ್ಟಾಲಿನ್ ಆಗ್ರಹ

Update: 2021-07-06 16:06 GMT

ಚೆನ್ನೈ, ಜು. 6: ತಮಿಳು ಚಿತ್ರೋದ್ಯಮ ಆತಂಕ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಪ್ರಸ್ತಾವಿತ ಸಿನೆಮಾ ಛಾಯಾಗ್ರಹಣ (ತಿದ್ದುಪಡಿ) ಮಸೂದೆಯನ್ನು ಹಿಂಪಡೆಯುವಂತೆ ಆಗ್ರಹಿಸಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮಂಗಳವಾರ ಕೇಂದ್ರ ಕಾನೂನು ಹಾಗೂ ನ್ಯಾಯ, ಸಂವಹನ, ಇಲೆಕ್ಟ್ರಾನಿಕ್ಸ್, ಮಾಹಿತಿ ಸಚಿವ ರವಿಶಂಕರ್ ಪ್ರಸಾದ್ ಅವರಿಗೆ ಪತ್ರ ಬರೆದಿದ್ದಾರೆ. 

ತನ್ನ ಪತ್ರದಲ್ಲಿ ಸ್ಟಾಲಿನ್, ‘‘ಈ ಕರಡು ಮಸೂದೆ ಚಿತ್ರೋದ್ಯಮದಲ್ಲಿ ಇರುವವರಲ್ಲಿ ಮಾತ್ರವಲ್ಲದೆ, ಅಭಿವ್ಯಕ್ತಿ ಸ್ವಾತಂತ್ರ ಬಯಸುವ ಸಮಾಜದ ಎಲ್ಲರಲ್ಲೂ ಆತಂಕ ಮೂಡಿಸಿದೆ’’ ಎಂದಿದ್ದಾರೆ. ಮಸೂದೆಯಿಂದಾಗುವ ನಿರೀಕ್ಷಿತ ಪರಿಣಾಮದ ಬಗ್ಗೆ ಗಮನ ಸೆಳೆದ ಅವರು, ಪ್ರಜಾಪ್ರಭುತ್ವ ಸೃಜನಶೀಲ ಚಿಂತನೆ ಹಾಗೂ ಕಲಾತ್ಮಕ ಸ್ವಾತಂತ್ರಕ್ಕೆ ಸಾಕಷ್ಟು ಅವಕಾಶ ನೀಡಬೇಕು. ಆದರೆ, ಪ್ರಸ್ತಾವಿತ ಸಿನೆಮಾ ಛಾಯಾಗ್ರಹಣ ತಿದ್ದುಪಡಿ ಮಸೂದೆ ಎರಡು ದಶಕಗಳ ಹಿಂದೆ ಸುಪ್ರೀಂ ಕೋರ್ಟ್ನಿಂದ ರದ್ದುಗೊಳಿಸಿದ ಕೇಂದ್ರ ಸರಕಾರದ ಅಧಿಕಾರವನ್ನು ಮರು ಸ್ಥಾಪಿಸುವಂತೆ ಕೋರುತ್ತದೆ ಎಂದಿದ್ದಾರೆ. 

ಸಿನೆಮಾ ಛಾಯಾಗ್ರಹಣ ಕಾಯ್ದೆಯ ಕಲಂ 5 (ಎ)ರಲ್ಲಿ ಉಲ್ಲೇಖಿಸಲಾದ ಎಲ್ಲ ಮಾನದಂಡಗಳನ್ನೂ ಪೂರೈಸಿದರೆ ಚಲನಚಿತ್ರಕ್ಕೆ ಕೇಂದ್ರ ಸೆನ್ಸಾರ್ ಮಂಡಳಿ (ಸಿಬಿಎಫ್ಸಿ) ಪ್ರಮಾಣ ಪತ್ರ ನೀಡುತ್ತದೆ. ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ ಪ್ರಮಾಣ ಪತ್ರ ನೀಡಲು ನಿರಾಕರಿಸುವ ಅವಕಾಶ ಕೂಡ ಈ ಕಾಯ್ದೆಯಲ್ಲಿ ಇದೆ. ಇದಲ್ಲದೆ, ಚಿತ್ರ ನಿರ್ಮಾಣದ ಮೇಲೆ ನಿಯಂತ್ರಣ ಸಾಧಿಸಲು ಈ ಕಾಯ್ದೆಯ ಕಲಂ 5 (ಬಿ) ಅಡಿಯ ಮಾರ್ಗಸೂಚಿ ಅಡಿಯಲ್ಲಿ ಸಾಕಷ್ಟು ಅವಕಾಶ ಇವೆ ಎಂದು ಅವರು ತಿಳಿಸಿದ್ದಾರೆ. ಪ್ರಸ್ತಾವಿತ ಮಸೂದೆ ಕೇಂದ್ರ ಸರಕಾರಕ್ಕೆ ನೂತನ ಅಧಿಕಾರ ನೀಡಲಿದೆ ಎಂದು ವಿವರಿಸಿದ ಅವರು, ಸಾರ್ವಜನಿಕ ವೀಕ್ಷಣೆಗಾಗಿ ಚಲನಚಿತ್ರಕ್ಕೆ ಸಿಬಿಎಫ್ಸಿ ಪ್ರಮಾಣ ಪತ್ರ ನೀಡುತ್ತದೆ. ಸಿಬಿಎಫ್ಸಿ ರಾಜ್ಯ ಸರಕಾರದ ಅಧಿಕಾರದ ವ್ಯಾಪ್ತಿಯಲ್ಲಿ ಬರುತ್ತದೆ. ಕಾನೂನು ಹಾಗೂ ಸುವ್ಯವಸ್ಥೆ ರಾಜ್ಯದ ವಿಷಯವಾದುದರಿಂದ ಅದನ್ನು ರಾಜ್ಯಕ್ಕೆ ವಹಿಸಬೇಕು ಎಂದು ಅವರು ಹೇಳಿದ್ದಾರೆ. 

ಆದರೆ, ಈಗ ಕೇಂದ್ರ ಸರಕಾರದ ಪ್ರಸ್ತಾವಿತ ಮಸೂದೆ ಸಹಕಾರಿ ಒಕ್ಕೂಟ ವ್ಯವಸ್ಥೆಯನ್ನು ಉಲ್ಲಂಘಿಸುತ್ತದೆ. ರಾಜ್ಯ ಸರಕಾರ ಹಾಗೂ ಅದರ ಸಿಬಿಎಫ್ಸಿಗೆ ವಿರುದ್ಧವಾಗಿದೆ ಎಂದು ಸ್ಟಾಲಿನ್ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News