ಹಜ್‌, ಉಮ್ರಾ ಯಾತ್ರೆಗೆಂದು ಕೂಡಿಟ್ಟ ಹಣವನ್ನು ಕೋವಿಡ್‌ ಪರಿಹಾರ ಕಾರ್ಯಗಳಿಗೆ ಬಳಸುತ್ತಿರುವ ಮಹಾರಾಷ್ಟ್ರ ಮುಸ್ಲಿಮರು

Update: 2021-07-07 17:44 GMT

ಮುಂಬೈ: 2020 ಹಾಗೂ 2021ರಲ್ಲಿ ಕೋವಿಡ್-19 ಹರಡುವುದನ್ನು ತಡೆಯಲು ಹಜ್ ಹಾಗೂ ಉಮ್ರಾ ಯಾತ್ರೆಗೆ ಹೆಚ್ಚು ಜನರು ಸೇರುವುದನ್ನು ನಿರ್ಬಂಧಿಸಿದ ಕಾರಣ ಹಾಗೂ ವಿದೇಶಿಗರಿಗೆ ಇನ್ನೂ ಹಜ್‌ ಗೆ ಅವಕಾಶ ನೀಡಿರದ ಕಾರಣ ಮಹಾರಾಷ್ಟ್ರದ ಹಲವು ಮುಸ್ಲಿಮರು ಯಾತ್ರೆಗೆ ವ್ಯಯಿಸುತ್ತಿದ್ದ ಹಣವನ್ನು ಚಾರಿಟಿಗೆ ನೀಡಿದ್ದಾರೆ ಎಂದು indiatimes.com ವರದಿ ಮಾಡಿದೆ.

ಶೇಖ್ ಅಂಜುಮ್ ಪರ್ವೇಝ್  ಹಾಗೂ ಅವರ ಪತ್ನಿ ಸಮೀನಾ ಅವರು 2008 ರಿಂದ 2020ರ ತನಕ ವಾರ್ಷಿಕ ಹಜ್ ಯಾತ್ರೆ ಅನ್ನು ಯಾವುದೇ ವಿರಾಮವಿಲ್ಲದೆ ನೆರವೇರಿಸಿದ್ದರು. ಕೋವಿಡ್-19 ಮುಂಜಾಗ್ರತಾ ಕ್ರಮವಾಗಿ 2020 ಹಾಗೂ 2021ರಲ್ಲಿ ಹಜ್ ನಲ್ಲಿ ಹೊರಗಿನವರಿಗೆ ಪಾಲ್ಗೊಳ್ಳಲು ನಿರ್ಬಂಧಿಸಿದ ಕಾರಣ ಈ ದಂಪತಿ ಹಜ್ ಯಾತ್ರೆ ಕೈಗೊಂಡಿರಲಿಲ್ಲ.  ಇದು ದೇವರ ನಿರ್ಧಾರ ಎಂದು ಭಾವಿಸಿದ ಪರ್ವೇಝ್ , ಧರ್ಮಬೇಧವಿಲ್ಲದೆ  ಸಾಂಕ್ರಾಮಿಕ ಪೀಡಿತ ಬಡವರಿಗೆ ಸಹಾಯ ಮಾಡಲು ಹಜ್  ಹಣವನ್ನು ಬಳಸಿದ್ದಾರೆ ಎಂದು ಟಿಎಎನ್ ವರದಿ ಮಾಡಿದೆ. 

"ಕೊರೋನವೈರಸ್ ನ  ಮೊದಲ ಅಲೆಯ ವೇಳೆ ನಾವು ನಮ್ಮ ಹಜ್ ನಿಧಿಯನ್ನು ಅಗತ್ಯವಿರುವವರಿಗೆ ಪಡಿತರ ಹಾಗೂ  ಆಹಾರವನ್ನು ಖರೀದಿಸಲು ಬಳಸಿಕೊಂಡಿದ್ದೇವೆ. ಎರಡನೇ ಅಲೆಯಲ್ಲಿ ನಾವು ಆಸ್ಪತ್ರೆಯ ಬಿಲ್ ಗಳನ್ನು  ಪಾವತಿಸಲು, ಔಷಧಿ ಖರೀದಿಸಲು, ಬಡವರಿಗೆ ಆಮ್ಲಜನಕ ಸಿಲಿಂಡರ್ ಗಳನ್ನು  ಖರೀದಿಸಲು ಹಣವನ್ನು ವಿನಿಯೋಗಿಸಿದ್ದೇವೆ ”ಎಂದು ಅಹಮದಾಬಾದ್  ಮೂಲದ ಉದ್ಯಮಿ ಮತ್ತು ಕಾರ್ಪೊರೇಟರ್ ಪರ್ವೇಝ್ ಹೇಳಿದ್ದಾರೆ. 

ಸೌದಿ ಅರೇಬಿಯವು ತಮ್ಮ ದೇಶದಿಂದ ಹೊರಗೆ ವಾಸಿಸುವ ಮುಸ್ಲಿಮರಿಗೆ ಹಜ್ ಹಾಗೂ ಉಮ್ರಾ ನಡೆಸುವುದಕ್ಕೆ ತಡೆಹಿಡಿದಿತ್ತು, ಅನೇಕ ಹಜ್ ಮತ್ತು ಉಮ್ರಾ ಯಾತ್ರಿಕರು  ತಾವು ಸಂಗ್ರಹಿಸಿಟ್ಟಿದ್ದ ಹಣವನ್ನು ದತ್ತಿ ಕಾರ್ಯಗಳಿಗೆ ನೀಡಿದ್ದಾರೆ. 

ಮುಂಬೈ ಮೂಲದ ಇಕ್ಬಾಲ್ ಮೆಮನ್ ಹಾಗೂ  ಅವರ ಪತ್ನಿ ರಮಝಾನ್ ನಲ್ಲಿ  ಎರಡು ದಶಕಗಳ ಕಾಲ ವಿರಾಮವಿಲ್ಲದೆ ಉಮ್ರಾ ಯಾತ್ರೆ ಮಾಡಿದ್ದಾರೆ. 2020 ರಲ್ಲಿ ಕೋವಿಡ್ -19 ಕಾರಣಕ್ಕೆ ಅವರು ಯಾತ್ರೆ ಕೈಗೊಂಡಿರಲಿಲ್ಲ.

 “ಪರಿಸ್ಥಿತಿ ಸುಧಾರಿಸಿದರೂ ಸೌದಿ ದೇಶ ವಿದೇಶಿಯರಿಗೆ ರಮಝಾನ್ ನಲ್ಲಿ ಉಮ್ರಾ ಯಾತ್ರೆ ಕೈಗೊಳ್ಳಲು ಅವಕಾಶ ನೀಡಿದ್ದರೂ, ನಾವು ಅಲ್ಲಿಗೆ ಹೋಗುತ್ತಿರಲಿಲ್ಲ. ನಾವು ಹಣವನ್ನು (ಸುಮಾರು ಐದು ಲಕ್ಷ ರೂ.) ನೆರೆ ಮನೆಯವರಿಗೆ ಖರ್ಚು ಮಾಡಲು ನಿರ್ಧರಿಸಿದ್ದೇವೆ ”ಎಂದು ಇಕ್ಬಾಲ್ ಮೆಮನ್  ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News