ಕ್ಯಾಲಿಫೋರ್ನಿಯಾ ಗಡಿಯಲ್ಲಿ ಭಾರಿ ಭೂಕಂಪ

Update: 2021-07-09 03:36 GMT

ಸ್ಯಾನ್‌ಫ್ರಾನ್ಸಿಸ್ಕೊ : ಕ್ಯಾಲಿಫೋರ್ನಿಯಾ- ನೆವಾಡ ಗಡಿಯಲ್ಲಿ 5.9 ತೀವ್ರತೆಯ ಭೂಕಂಪ ಸಂಭವಿಸಿದೆ. ನೂರಾರು ಮೈಲು ದೂರದ ವರೆಗೂ ಜನರಿಗೆ ಕಂಪನದ ಅನುಭವವಾಗಿದೆ ಎಂದು ಅಮೆರಿಕದ ಜಿಯಾಲಾಜಿಕಲ್ ಸರ್ವೆ ಪ್ರಕಟಿಸಿದೆ.

ಯಾವುದೇ ಹಾನಿ ಅಥವಾ ಸಾವು ನೋವು ಸಂಭವಿಸಿದ ಬಗ್ಗೆ ತಕ್ಷಣಕ್ಕೆ ವರದಿಯಾಗಿಲ್ಲ. ಸಂಜೆಯ ಸುಮಾರಿಗೆ ಸ್ಯಾನ್‌ಫ್ರಾನ್ಸಿಸ್ಕೊದ ಪೂರ್ವಕ್ಕೆ 250 ಮೈಲು ದೂರದಲ್ಲಿ ಲೇಕ್ ಥಾಹೊಯ್ ದಕ್ಷಿಣದಲ್ಲಿ ಭೂಕಂಪ ಸಂಭವಿಸಿದೆ. ಇದರ ಕೇಂದರ್ ಬಿಂದು ನೆವಾಡದ ಸ್ಮಿತ್ ಕಣಿವೆಯ ನೈರುತ್ಯಕ್ಕೆ 20 ಮೈಲು ದೂರದಲ್ಲಿತ್ತು. ಈ ಭೂಕಂಪದ ಬಳಿಕ ಹಲವು ಲಘುಕಂಪನಗಳು ಸಂಭವಿಸಿದ್ದು, ಒಂದು ಭೂಕಂಪ 4.6ರಷ್ಟು ತೀವ್ರತೆ ಹೊಂದಿತ್ತು ಎಂದು ಸಂಸ್ಥೆ ವಿವರಿಸಿದೆ.

"ನಮಗೆ ಕಟ್ಟಡ ಅಲುಗಾಡಿದ ಅನುಭವವಾಯಿತು. ಮೊದಲು ಇದು ಏನು ಎನ್ನುವುದು ತಿಳಿಯಲಿಲ್ಲ" ಎಂದು ಭೂಕಂಪದ ಕೇಂದ್ರಬಿಂದುವಿನ ಸಮೀಪದ ವಾಕೆರ್‌ನಲ್ಲಿ ಬರ್ಗರ್ ರೆಸ್ಟೋರೆಂಟ್ ನಡೆಸುತ್ತಿರುವ ಸಲ್ಲಿ ರೋಸನ್ ವಿವರಿಸಿದರು.

"ಕಂಪನ ಸಂಭವಿಸುತ್ತಲೇ ಇತ್ತು ಹಾಗೂ ಇದು ಸಾಕಷ್ಟು ತೀವ್ರವಾಗಿದ್ದು ಭಯಾನಕವಾಗಿತ್ತು. ಆದ್ದರಿಂದ ನಾವು ಮನೆಯಿಂದ ಹೊರಗೆ ರೆಸ್ಟೋರೆಂಟ್‌ಗೆ ಓಡಿದೆವು. ಏಕೆಂದರೆ ಅಡುಗೆ ಅನಿಲವನ್ನು ಮೊದಲು ನಾವು ಆಫ್ ಮಾಡಬೇಕಿತ್ತು" ಎಂದು ಅನುಭವ ಹಂಚಿಕೊಂಡರು.

ಶೆಲ್ಫ್‌ಗಳಿಂದ ಕಪ್ ಹಾಗೂ ಇತರ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಹಾರಾಡಿದ್ದು, ಫ್ರೈಯರ್‌ಗಳಿಂದ ಎಣ್ಣೆ ಹೊರಕ್ಕೆ ಚಿಮ್ಮಿದೆ ಎಂದು ಹೇಳಿದರು.
ಲೇಕ್ ತಹೋಯ್ ಸುತ್ತಮುತ್ತಲ ಜನತೆಗೆ ಮಾತ್ರವಲ್ಲದೇ ದೂರದ ಫ್ರೆನ್ಸೊ, ಕ್ಯಾಲಿಫೋರ್ನಿಯಾದಲ್ಲೂ ಭೂಕಂಪದ ಅನುಭವವಾಗಿದೆ. 6 ಮೈಲು ಆಳದಲ್ಲಿ ಈ ಕಂಪನ ಸಂಭವಿಸಿದೆ. ಉತ್ತರ ಸೆರ್ರಾ ನವಾಡದ ಮುಖ್ಯ ರಸ್ತೆ (ಯುಎಸ್ 395)ಯಲ್ಲಿ ಬಂಡೆಕಲ್ಲುಗಳು ಉರುಳಿರುವುದರಿಂದ ರಸ್ತೆ ಮುಚ್ಚಲಾಗಿದೆ ಎಂದು ಸಾರಿಗೆ ಇಲಾಖೆ ಹೇಳಿದೆ. ನವಾಡ ಗಡಿಯಿಂದ ವಿಲ್ಲೊ ಸ್ಪ್ರಿಂಗ್ಸ್ ಪಟ್ಟಣದವರೆಗೆ ಸುಮಾರು 40 ಕಿಲೋಮೀಟರ್ ರಸ್ತೆ ಮುಚ್ಚಲಾಗಿದೆ ಎಂದು ವಿವರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News