ಲಸಿಕೀಕರಣ: ನಮ್ಮ ಮುಂದಿರುವ ವಾಸ್ತವ

Update: 2021-07-10 04:45 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

‘ಲಸಿಕೀಕರಣದಲ್ಲಿ ನಾವು ದಾಖಲೆ ನಿರ್ಮಿಸಿದ್ದೇವೆ, ಅಮೆರಿಕವನ್ನು ಸರಿಗಟ್ಟಿದ್ದೇವೆ’ ಎಂದು ಪದೇ ಪದೇ ಘೋಷಿಸುತ್ತಾ ಕೇಂದ್ರ ಸರಕಾರದ ನಾಯಕರು ಕೊರೋನ ವೈರಸ್‌ನ್ನು ಹೆದರಿಸುತ್ತಿದ್ದಾರೆ. ಆಗಾಗ ಟಿವಿಯಲ್ಲಿ ಕಾಣಿಸಿಕೊಂಡು ಪ್ರಧಾನಿಯವರು ವಿವಿಧ ರಾಜ್ಯಗಳಿಗೆ ಹಂಚಿದ ಲಸಿಕೆಗಳ ವಿವರಗಳನ್ನೂ ಬಹಿರಂಗಪಡಿಸುತ್ತಾರೆ. ಒಂದೇ ದಿನದಲ್ಲಿ ಇಷ್ಟು ಜನರಿಗೆ ಲಸಿಕೆ ನೀಡಿ ದಾಖಲೆ ನಿರ್ಮಿಸಿದ್ದೇವೆ ಎಂದೂ ಆಗಾಗ ಮೀಸೆ ತಿರುವುದಿದೆ. ಆದರೆ ಪ್ರಧಾನಿಯವರು ಟಿವಿಯಲ್ಲಿ ಹೀಗೆಂದು ಘೋಷಿಸಿದಾಕ್ಷಣ ಕೊರೋನ ವೈರಸ್ ಓಡಿ ಹೋಗುವುದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ಅಂಶ. ಆದುದರಿಂದ ಲಸಿಕೀಕರಣಕ್ಕೆ ಸಂಬಂಧಿಸಿ ವಾಸ್ತವವೇನು ಎನ್ನುವುದನ್ನು ನಾವು ಗಣನೆಗೆ ತೆಗೆದುಕೊಳ್ಳಲೇ ಬೇಕು. ಇಲ್ಲವಾದರೆ, ಮತ್ತೆ ನಾವು ಮೂರನೇ ಅಲೆ, ನಾಲ್ಕನೇ ಅಲೆ, ಐದನೇ ಅಲೆ ಎಂದು ಪದೇ ಪದೇ ಲಾಕ್‌ಡೌನ್ ಹಲ್ಲೆಗಳಿಗೆ ಒಳಗಾಗಬೇಕಾಗುತ್ತದೆ. ಲಸಿಕೀಕರಣದ ಬಗ್ಗೆ ಸರಕಾರ ಅದೆಷ್ಟು ಕೊಚ್ಚಿಕೊಂಡಿದ್ದರೂ ಸಮಾಜದ ಮೇಲ್‌ಸ್ತರದಜನರಿಗಷ್ಟೇ ಇದು ತಲುಪುತ್ತಿದೆ. ಅದರಲ್ಲೂ ಮುಖ್ಯವಾಗಿ ‘ಡಿಜಿಟಲ್ ವರ್ಗ’ವಷ್ಟೇ ಲಸಿಕೆಗಳ ಬಗ್ಗೆ ಹೆಚ್ಚು ಆಸಕ್ತಿಯನ್ನು ಹೊಂದಿದೆ. ಉಳಿದಂತೆ ನಗರ ಪ್ರದೇಶದ ಬಡವರ್ಗ ಮತ್ತು ಗ್ರಾಮೀಣ ಪ್ರದೇಶದ ಜನರು ಲಸಿಕೆಗಳ ಕುರಿತಂತೆ ಇನ್ನೂ ಅಜ್ಞಾನಿಗಳೇ ಆಗಿದ್ದಾರೆ. ಆಸಕ್ತಿಯಿದ್ದವರೂ ಗೊಂದಲ, ಅನುಮಾನಗಳ ಕಾರಣದಿಂದ ಲಸಿಕೆಗಳಿಂದ ದೂರ ಉಳಿದಿದ್ದಾರೆ. ಉಳಿದಂತೆ ಬಡ ಕೂಲಿ ಕಾರ್ಮಿಕರು ಕೊರೋನ ಮತ್ತು ಲಸಿಕೆಯನ್ನು ಗಂಭೀರವಾಗಿ ತೆಗೆದುಕೊಂಡೇ ಇಲ್ಲ. ಅವರು ಲಾಕ್‌ಡೌನ್ ಮತ್ತು ಹಸಿವಿನ ಬಗ್ಗೆ ಮಾತ್ರ ತಲೆಕೆಡಿಸಿಕೊಳ್ಳುತ್ತಿದ್ದಾರೆ.

ಅಸಂಘಟಿತ ಕಾರ್ಮಿಕರು ಒಂದು ದಿನ ರಜ ಹಾಕಿ ಲಸಿಕೆ ಹಾಕಿಸಿಕೊಳ್ಳುವ ಪರಿಸ್ಥಿತಿ ಇಲ್ಲ. ಸುಕ್ಷಿತರೇ ಆಸ್ಪತ್ರೆಗಳಲ್ಲಿ ಎರಡೆರಡು ದಿನ ಸರದಿಯಲ್ಲಿ ನಿಂತರೂ ಲಸಿಕೆ ಸಿಗದೇ ಇರುವಾಗ, ಈ ಕಾರ್ಮಿಕರಿಗೆ ಲಸಿಕೆಗಳು ಸಿಗುವುದು ದೂರದ ಮಾತು. ಇಂಡೋ ಗ್ಲೋಬಲ್ ಸೋಶಿಯಲ್ ಸರ್ವೀಸ್ ಸೊಸೈಟಿ ಇತ್ತೀಚೆಗೆ ನಡೆಸಿದ ಸಮೀಕ್ಷಾ ಅಧ್ಯಯನವೊಂದು ಕೊಳೆಗೇರಿ ಹಾಗೂ ಬಸ್ತಿ ನಿವಾಸಿಗಳ ಪೈಕಿ ಕೇವಲ 2 ಶೇಕಡದಷ್ಟು ಮಂದಿ ಮಾತ್ರವೇ ಸಂಪೂರ್ಣವಾಗಿ ಲಸಿಕೀಕರಣಗೊಂಡಿದ್ದಾರೆ (2 ಡೋಸ್‌ಗಳೊಂದಿಗೆ) ಹಾಗೂ 16 ಶೇಕಡಕ್ಕಿಂತ ಸ್ವಲ್ಪ ಹೆಚ್ಚು ಮಂದಿ ಒಂದು ಡೋಸ್ ಮಾತ್ರ ಪಡೆದಿದ್ದಾರೆಂದು ಹೇಳಿದೆ. ಎರಡನೇ ಡೋಸ್ ಅವರಿಗೆ ದೊರಕುವುದು ಕಷ್ಟಕರವಾಗಿರುವುದರಿಂದಲೇ ಅದರಿಂದ ದೂರ ಉಳಿದಿದ್ದಾರೆ ಎನ್ನುವುದು ಇನ್ನೊಂದು ಅಂಶ. ಭೋಪಾಲ್,ಜಬಲ್‌ಪುರ, ಇಂದೋರ್, ಗುವಾಹಟಿ, ಗೋರಖ್‌ಪುರ, ನಾಗಪುರ, ರಾಂಚಿ, ಜಮ್‌ಶೆಡ್‌ಪುರ, ದುರ್ಗ, ರಾಯ್‌ಪುರ, ಪಾಟ್ನಾ, ಭುವನೇಶ್ವರ ಹಾಗೂ ದಿಲ್ಲಿ ಒಳಗೊಂಡ 13 ನಗರಗಳ ಕೊಳೆಗೇರಿ/ಬಸ್ತಿಗಳ 670 ಬಡ ನಿವಾಸಿಗಳಿಂದ ಕಲೆಹಾಕಲಾದ ಮಾಹಿತಿಗಳನ್ನು ಆಧರಿಸಿ ಈ ಸಮೀಕ್ಷಾ ವರದಿಯನ್ನು ತಯಾರಿಸಲಾಗಿದೆ. ಲಸಿಕೆಗಳ ಕುರಿತಾಗಿ ಸಮರ್ಪಕವಾದ ಮಾಹಿತಿಯ ಕೊರತೆಯಿಂದಾಗಿ ವಿಶೇಷವಾಗಿ ದೊಡ್ಡ ಸಂಖ್ಯೆಯ ಮಹಿಳೆಯರಲ್ಲಿ ಲಸಿಕೆಯ ಕುರಿತಾಗಿ ಅಪಾರವಾದ ಭೀತಿಯಿದೆ ಎಂದು ವರದಿ ಹೇಳುತ್ತದೆ.

ವಿಶೇಷವೆಂದರೆ, ಸಮೀಕ್ಷೆಯಲ್ಲಿ ಉತ್ತರಿಸಿದ ಶೇ.70 ಮಂದಿಗೆ ಮಾತ್ರ ಲಸಿಕೆಗಾಗಿ ಆನ್‌ಲೈನ್ ನೋಂದಣಿ ಅರ್ಜಿ ಮತ್ತು ವೆಬ್‌ಸೈಟ್ ಬಗ್ಗೆ ಮಾಹಿತಿಯಿದೆ. ಆದರೆ ಅವರಿಗೆ ಲಸಿಕೆಯನ್ನು ಪಡೆಯುವುದಕ್ಕಾಗಿ ಸ್ಲಾಟ್ ಕಾದಿರಿಸಲು ಸಾಧ್ಯವಾಗಿಲ್ಲ. ಲಸಿಕೆ ಪಡೆಯುವುದರಿಂದ ತಾತ್ಕಾಲಿಕವಾಗಿ ಅಸ್ವಸ್ಥಗೊಂಡು 2-3 ದಿನಗಳ ದಿನಗೂಲಿ ಕಳೆದುಹೋದೀತೆಂಬಭೀತಿಯೂ ಅವರು ಲಸಿಕೆಯನ್ನು ಹಾಕಿಸಿಕೊಳ್ಳುವುದಕ್ಕೆ ಹಿಂದೇಟು ಹಾಕುವಂತೆ ಮಾಡಿದೆ.ಸಮೀಕ್ಷೆಯಲ್ಲಿ ಭಾಗವಹಿಸಿದ ಶೇ.37 ಮಂದಿ ಲಸಿಕೆ ಪಡೆದ ಬಳಿಕ ತಾವು ಅನಾರೋಗ್ಯಕ್ಕೊಳ ಗಾಗಬಹುದೆಂಬ ಭೀತಿಯನ್ನು ಹೊಂದಿದ್ದಾರೆ. ಗರ್ಭಿಣಿಯಾಗಿರುವುದು, ರಕ್ತದ ಒತ್ತಡ, ಮಧುಮೇಹ ಮತ್ತಿತರ ಅಸ್ವಸ್ಥತೆಯನ್ನು ಹೊಂದಿರುವುದು ಇತರ ಕೆಲವು ಕಾರಣಗಳಾಗಿವೆ. ಡಿಜಿಟಲ್ ಸಾಕ್ಷರತೆಯ ಕೊರತೆ ಮತ್ತು ಲಸಿಕೆ ನೀಡುವ ಕೇಂದ್ರಗಳ ಬಗ್ಗೆ ಅರಿವಿಲ್ಲದೆ ಇರುವುದು ಲಸಿಕೀಕರಣವು ಕಡಿಮೆ ಪ್ರಮಾಣದಲ್ಲಿರುವುದಕ್ಕೆ ಇತರ ಕೆಲವು ಕಾರಣಗಳಾಗಿವೆ. ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ.97ರಷ್ಟು ಮಂದಿ ಸರಕಾರಿ ಆಸ್ಪತ್ರೆಗೆ ತೆರಳಿ ಲಸಿಕೆಯನ್ನು ಪಡೆಯಲು ಯತ್ನಿಸಿರುವುದಾಗಿ ಹೇಳಿದ್ದಾರೆ. ಖಾಸಗಿ ಆಸ್ಪತ್ರೆಗಳು ಬಡವರು ಮತ್ತು ಗ್ರಾಮೀಣ ಪ್ರದೇಶದ ಜನರನ್ನು ಲಸಿಕೆಗೆ ಸಂಬಂಧಿಸಿ ಸಂಪೂರ್ಣ ನಿರ್ಲಕ್ಷಿಸಿವೆ. ಇಂಡೋ ಗ್ಲೋಬಲ್ ಸೋಶಿಯಲ್ ಸರ್ವೀಸ್ ಸೊಸೈಟಿ ತನ್ನ ಸಮೀಕ್ಷೆಯ ಲ್ಲಿ ಜೀವನೋ ಪಾಯ ವೃತ್ತಿಗಳು ಹಾಗೂ ಪಡಿತರ ಲಭ್ಯತೆ ಕುರಿತಾಗಿ ಬಹಿರಂಗಪಡಿಸಿದ ಅಂಶಗಳು ಕಳವಳಕಾರಿಯಾಗಿವೆ.

ಸಮೀಕ್ಷೆಯಲ್ಲಿ ಪಾಲ್ಗೊಂಡವರಲ್ಲಿ ಶೇ.86ರಷ್ಟು ಮಂದಿ ಕಳೆದ 2-3 ತಿಂಗಳುಗಳಲ್ಲಿ ತಮ್ಮ ಜೀವನೋಪಾಯ ವೃತ್ತಿಗಳಿಗೆ ತೀವ್ರ ಹಿನ್ನಡೆಯಾಗಿದೆ ಎಂದಿದ್ದಾರೆ. ಶೇ.89ರಷ್ಟು ಮಂದಿ ಸರಕಾರದಿಂದ ತಮಗೆ ಯಾವುದೇ ಆರ್ಥಿಕ ಅಥವಾ ಭೌತಿಕ ನೆರವು ದೊರೆಯುತ್ತಿಲ್ಲವೆಂದು ಹೇಳಿದ್ದಾರೆ. ಸಮೀಕ್ಷೆಯಲ್ಲಿ ಭಾಗವಹಿಸಿದ ಶೇ.38ರಷ್ಟು ಮಂದಿ ಕಳೆದ ವಾರ ಅಥವಾ ತಿಂಗಳಿನಿಂದ ತಮಗೆ ಯಾವುದೇ ಪಡಿತರ ಲಭ್ಯವಾಗಿಲ್ಲವೆಂದು ಹೇಳಿದ್ದಾರೆ. ಎರಡನೇ ಅಲೆಯು ಉತ್ತುಂಗಾವಸ್ಥೆಯಲ್ಲಿದ್ದಾಗ ಹಾಗೂ ದೇಶಾದ್ಯಂತ ಬಹುತೇಕ ಕಡೆ ಲಾಕ್‌ಡೌನ್ ಹೇರಲ್ಪಟ್ಟ ಸಮಯದಲ್ಲಿ ರೇಶನ್‌ಕಾರ್ಡ್ ಹೊಂದಿದವರಲ್ಲಿ ಶೇ.45 ಮಂದಿ ಯಾವುದೇ ಪಡಿತರವನ್ನು ಪಡೆಯಲು ಅಶಕ್ತರಾಗಿದ್ದರು.

ಪಡಿತರವನ್ನು ಪಡೆದವರಲ್ಲಿ ಶೇ.10ರಷ್ಟು ಮಂದಿಗೆ ತೊಗರಿಬೇಳೆ (ದಾಲ್) ಹಾಗೂ ಖಾದ್ಯ ತೈಲ ಮಾತ್ರವಷ್ಟೇ ದೊರೆತಿದೆ. ಶೇ.1ಕ್ಕಿಂತಲೂ ಕಡಿಮೆ ಸಂಖ್ಯೆಯ ಪಡಿತರ ಕಾರ್ಡ್‌ದಾರರು ಮಾಸಿಕ/ ಸಾಪ್ತಾಹಿಕ ಪಡಿತರ ಪಡೆದಿದ್ದಾರೆ. ಶೇ. 75ರಷ್ಟು ಯಶಸ್ಸು ಸಾಧಿಸಿ ಶೇ. 25ರಷ್ಟು ಜನರನ್ನು ಮರೆತರೂ ಕೊರೋನ ವೈರಸ್ ಸೋಲಿಸುವುದಕ್ಕೆ ನಾವು ವಿಫಲರಾಗುತ್ತೇವೆ. ಕನಿಷ್ಠ ಶೇ. 90ರಷ್ಟು ಮಂದಿಗೆ ಲಸಿಕೆ ನೀಡಿದಾಗಷ್ಟೇ ಕೊರೋನ ವೈರಸ್‌ನಿಂದ ನಮ್ಮನ್ನು ರಕ್ಷಿಸಿಕೊಂಡಿದ್ದೇವೆ ಎಂದು ಹೆಮ್ಮೆ ಪಡಬಹುದು. ಇಲ್ಲಿ ನೋಡಿದರೆ ನಾವು ಅಂಕಿಅಂಶಗಳಲ್ಲಷ್ಟೇ ಲಸಿಕೀಕರಣದಲ್ಲಿ ಪ್ರಗತಿ ಸಾಧಿಸಿದ್ದೇವೆ. ಹಲವು ರಾಜ್ಯಗಳಲ್ಲಿ ಅಂಕಿಅಂಶಗಳಲ್ಲೂ ಅಕ್ರಮಗಳು ನಡೆದಿವೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಈ ಆರೋಪಗಳು ನಿಜವೇ ಆಗಿದ್ದರೆ, ಭಾರತ ತನ್ನ ಮುಖವನ್ನು ಶಾಶ್ವತವಾಗಿ ಮಾಸ್ಕ್‌ನಲ್ಲಿ ಮುಚ್ಚಿಕೊಂಡು, ಲಾಕ್‌ಡೌನ್ ಬಂಕರ್‌ಲ್ಲಿ ಬಚ್ಚಿಟ್ಟು ಹಸಿವಿನಿಂದ ಸಾಯಬೇಕಾದ ಸ್ಥಿತಿ ಒದಗಬಹುದು. ಈ ಹಿನ್ನೆಲೆಯಲ್ಲಿ, ಕೇಂದ್ರ ಸರಕಾರ ವಾಸ್ತವಕ್ಕೆ ಮುಖಾಮುಖಿಯಾಗುವ ಧೈರ್ಯವನ್ನು ಇನ್ನಾದರೂ ತೋರಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News