ಕಷ್ಟಗಳಿಲ್ಲದಿದ್ದರೆ ಸುಖವನ್ನು ಅನುಭವಿಸಲಾಗುವುದಿಲ್ಲ: ಇಂಧನ ಬೆಲೆಏರಿಕೆ ಕುರಿತು ಮ.ಪ್ರ. ಸಚಿವರ ಹೇಳಿಕೆ

Update: 2021-07-11 14:04 GMT
Photo: twitter.com/opsakhlecha

ಭೋಪಾಲ, ಜು.11: ದಿನೇ ದಿನೇ ಗಗನಕ್ಕೇರುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಿಂದ ಜನಸಾಮಾನ್ಯರು ಕಂಗಾಲಾಗಿದ್ದರೆ ಆಡಳಿತ ಪಕ್ಷದ ಜನಪ್ರತಿನಿಧಿಗಳು ಇದಕ್ಕೂ ತಮಗೂ ಯಾವುದೇ ಸಂಬಂಧ ಇಲ್ಲಾ ಎಂಬಂತಿದ್ದಾರೆ. ಮಧ್ಯ ಪ್ರದೇಶದ ಬಿಜೆಪಿ ಸರಕಾರದ ಸಚಿವ ಓಂ ಪ್ರಕಾಶ ಸಕ್ಲೇಚಾ ಇದಕ್ಕೆ ತಾಜಾ ನಿದರ್ಶನವಾಗಿದ್ದಾರೆ. 

‘ಕಷ್ಟಗಳು ಇರದಿದ್ದರೆ ನೀವು ಸುಖವನ್ನು ಅನುಭವಿಸಲು ಸಾಧ್ಯವಾಗುವುದಿಲ್ಲ’ ಎನ್ನುವ ಮೂಲಕ ಸಚಿವರು ಇಂಧನ ಬೆಲೆಏರಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ರವಿವಾರ ಇಲ್ಲಿ, ದೇಶದಲ್ಲಿ ಇಂಧನ ಬೆಲೆಗಳು ಗಗನಚುಂಬಿಯಾಗುತ್ತಿರುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಸಕ್ಲೇಚಾ,ಕಷ್ಟಗಳು ನೀವು ಸುಖದ ದಿನಗಳಲ್ಲಿ ಸಂತಸವನ್ನು ಅನುಭವಿಸುವಂತೆ ಮಾಡುತ್ತವೆ. ಕಷ್ಟಗಳೇ ಇಲ್ಲದಿದ್ದರೆ ನಿಮಗೆ ಖುಷಿಯನ್ನು ಸಂಭ್ರಮಿಸಲು ಸಾಧ್ಯವಾಗುವುದಿಲ್ಲ ಎಂದು ಉತ್ತರಿಸಿದರು.

ಇಂಧನ ಬೆಲೆಗಳಲ್ಲಿ ತೀವ್ರ ಏರಿಕೆಯನ್ನು ನಿಯಂತ್ರಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವೈಫಲ್ಯವನ್ನು ಸುದ್ದಿಗಾರರು ಬೆಟ್ಟು ಮಾಡಿದಾಗ, ಮಾಧ್ಯಮಗಳು ವದಂತಿಗಳನ್ನು ಹರಡುತ್ತಿವೆ ಎಂದು ಸಚಿವರು ದೂರಿದರು.

ಬಿಜೆಪಿಯನ್ನು ಕಾಂಗ್ರೆಸ್ ಜೊತೆ ಹೋಲಿಸಿದ ಅವರು, ಪೋಲಿಯೊ ವಿರುದ್ಧ ಲಸಿಕೆಯನ್ನು ತರಲು ಕಾಂಗ್ರೆಸ್ 40 ವರ್ಷಗಳನ್ನು ತೆಗೆದುಕೊಂಡಿತ್ತು, ಆದರೆ ಪ್ರಧಾನಿಯವರು ಒಂದೇ ವರ್ಷದೊಳಗೆ ಮೇಡ್ ಇನ್ ಇಂಡಿಯಾ ಕೋವಿಡ್ ಲಸಿಕೆಯನ್ನು ಲಭ್ಯವಾಗಿಸಿದ್ದಾರೆ ಮತ್ತು ಲಸಿಕೆ ನೀಡಿಕೆ ಅಭಿಯಾನ ಪ್ರಗತಿಯಲ್ಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News