ಕೇರಳ: ಹೆಚ್ಚುತ್ತಿರುವ ಕೋವಿಡ್ ಪ್ರಕರಣ; ಆತಂಕ ಹುಟ್ಟಿಸಿದ ಝೀಕಾ ವೈರಸ್

Update: 2021-07-11 19:30 GMT

ತಿರುವನಂತಪುರ, ಜು. 10: ಕೇರಳದಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಇದರೊಂದಿಗೆ ಝೀಕಾ ವೈರಸ್ ಹಾವಳಿ ಹೆಚ್ಚುತ್ತಿದೆ. ಇವುಗಳ ವಿರುದ್ಧ ರಾಜ್ಯ ಸರಕಾರ ಹೋರಾಟ ನಡೆಸುತ್ತಿದೆ.‌

ಕಳೆದ ವರ್ಷ ಕೋವಿಡ್ ಅನ್ನು ನಿಯಂತ್ರಿಸಿರುವುದಕ್ಕೆ ಕೇರಳ ವ್ಯಾಪಕ ಪ್ರಶಂಸೆಗೆ ಒಳಗಾಗಿತ್ತು ಹಾಗೂ ಪ್ರಶಸ್ತಿಯನ್ನು ಕೂಡ ಪಡೆದುಕೊಂಡಿತ್ತು. ಆದರೆ, ಈಗ ರಾಜ್ಯದಲ್ಲಿ ಪ್ರತಿ ದಿನ 12 ಸಾವಿರದಿಂದ 15 ಸಾವಿರ ಪ್ರಕರಣಗಳು ದಾಖಲಾಗುತ್ತಿವೆ.

ರಾಜ್ಯದಲ್ಲಿ ಕಳೆದ ಶನಿವಾರ ಕೊರೋನ ಸೋಂಕಿನ 14,087 ಹೊಸ ಪ್ರಕರಣಗಳು ದಾಖಲಾಗಿದ್ದವು. ಅಲ್ಲದೆ 109 ಮಂದಿ ಸಾವನ್ನಪ್ಪಿದ್ದರು. ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 30,39,029ಕ್ಕೆ ಏರಿಕೆಯಾಗಿತ್ತು ಹಾಗೂ ಸಾವಿನ ಸಂಖ್ಯೆ 14,380ಕ್ಕೆ ಏರಿಕೆಯಾಗಿತ್ತು. ಸಕ್ರಿಯ ಪ್ರಕರಣಗಳ ಸಂಖ್ಯೆ 1,13,115ಕ್ಕೆ ತಲುಪಿತ್ತು.

ನಿರ್ದಿಷ್ಟ ಅನ್ಲಾಕ್ ಕ್ರಮಗಳಿಂದ ಕೋವಿಡ್ ಸೋಂಕಿನ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಅದು ಕೆಳಗೆ ಇಳಿಯುವ ನಿರೀಕ್ಷೆ ಇದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಇತ್ತೀಚೆಗೆ ಹೇಳಿಕೆ ನೀಡಿದ್ದರು.

ಕೇರಳದಲ್ಲಿ ಈ ವರ್ಷ ಜೂನ್ 1ರಂದು 19,760 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದವು. ಒಂದು ವಾರಗಳ ಬಳಿಕ ಜೂನ್ 7ರಂದು 9,313 ಹೊಸ ಪ್ರಕರಣಗಳು ದಾಖಲಾಗಿ ಸ್ಪಲ್ಪ ಮಟ್ಟಿಗೆ ಇಳಿಕೆಯಾಗಿತ್ತು. ಆದರೆ, ಎರಡು ದಿನಗಳ ಬಳಿಕ ಪ್ರಕರಣಗಳ ಸಂಖ್ಯೆ ಮತ್ತೆ 16,204ಕ್ಕೆ ಏರಿಕೆಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News