ಲಾಕ್‌ಡೌನ್‌ನಿಂದಾಗಿ ಬಡವರ ಮಕ್ಕಳ ಬದುಕು ಅತಂತ್ರ

Update: 2021-07-13 04:29 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಕೊರೋನ ಒಂದನೇ ಮತ್ತು ಎರಡನೇ ಅಲೆಯ ಪರಿಣಾಮವಾಗಿ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಸಾವಿರಾರು ಸಣ್ಣಪುಟ್ಟ ಉದ್ಯಮಗಳು ಮತ್ತು ದೊಡ್ಡ ಉದ್ಯಮಗಳು ಮುಚ್ಚಿ ಲಕ್ಷಾಂತರ ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ. ಒಂದೆಡೆ ಕೋವಿಡ್ ಭಯ, ಇನ್ನೊಂದೆಡೆ ವಿಪರೀತ ಬೆಲೆ ಏರಿಕೆ. ಇದರಿಂದಾಗಿ ಜೀವನ ನಿರ್ವಹಣೆಯೇ ಕಷ್ಟಕರವಾಗಿದೆ. ಇದಕ್ಕಿಂತ ಕಳವಳ ಪಡಬೇಕಾದ ಸಂಗತಿ ಅಂದರೆ ಶಾಲೆ, ಕಾಲೇಜು ಗಳು ಮುಚ್ಚಿದ ಪರಿಣಾಮವಾಗಿ ಅಕ್ಷರ ಕಲಿಯಬೇಕಾದ ಮಕ್ಕಳು ಅದರಲ್ಲೂ ಬಡವರ ಮಕ್ಕಳು ದಾರಿ ಕಾಣದೆ ಹೊಲ, ಗದ್ದೆಗಳಿಗೆ ದುಡಿಯಲು ಹೊರಟಿದ್ದಾರೆ. ಆತಂಕ ಪಡಬೇಕಾದ ಇನ್ನೊಂದು ಸಂಗತಿ ಅಂದರೆ ಬಾಲಕರು ಶಾಲೆ ಬಿಟ್ಟು ದುಡಿಮೆಗೆ ಹೊರಟರೆ, ಬಾಲಕಿಯರು ಒತ್ತಾಯದ ಬಾಲ್ಯ ವಿವಾಹದ ಸುಳಿಗೆ ಸಿಲುಕಿದ್ದಾರೆ. ಇವರ ಪಾಲಕರು ಹೆಣ್ಣು ಮಕ್ಕಳನ್ನು ಶಾಲೆ ಬಿಡಿಸಿ ಬಾಲ್ಯ ವಿವಾಹ ಮಾಡಿ ಹೊಣೆ ಜಾರಿಸಿಕೊಳ್ಳುವ ಅಸಹಾಯಕತೆಗೆ ನೂಕಲ್ಪಟ್ಟಿದ್ದಾರೆ.

ಕರ್ನಾಟಕದಲ್ಲಿ ಕೋವಿಡ್ ನಂತರ ಬಾಲ್ಯ ವಿವಾಹ ಹಾಗೂ ಬಾಲ ಕಾರ್ಮಿಕರ ಸಂಖ್ಯೆಯಲ್ಲಿ ತೀವ್ರ ಹೆಚ್ಚಳವಾಗಿರುವುದು ಆತಂಕದ ಸಂಗತಿಯಾಗಿದೆ. ಈ ಬಗ್ಗೆ ಸರಕಾರದ ಬಳಿ ನಿಖರವಾದ ಅಂಕಿ-ಅಂಶಗಳು ಲಭ್ಯವಿಲ್ಲ. ಇದರ ಬಗ್ಗೆ ಮಾಹಿತಿ ಸಂಗ್ರಹಿಸಿ ಪರಿಹಾರವನ್ನು ಕಲ್ಪಿಸಬೇಕಾದ ಕಾರ್ಮಿಕ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳು ಹೊಣೆಗಾರಿಕೆಯಿಂದ ಕಾರ್ಯನಿರ್ವಹಿಸುತ್ತಿವೆಯೇ ಎಂಬ ಸಂದೇಹ ಸಹಜವಾಗಿ ಮೂಡುತ್ತದೆ. ಆದರೆ ಪೌರಾಡಳಿತ ನಿರ್ದೇಶನಾಲಯ ಮಾತ್ರ ಸಮೀಕ್ಷೆ ನಡೆಸಿದೆ. ಆ ಸಮೀಕ್ಷೆಯ ಪ್ರಕಾರ ರಾಜ್ಯದಲ್ಲಿ 6 ರಿಂದ 14 ವಯಸ್ಸಿನ ಸಹಸ್ರಾರು ಮಕ್ಕಳು ಶಾಲೆಯಿಂದ ಹೊರಗೆ ಉಳಿದಿದ್ದಾರೆ. ಇದರಲ್ಲಿ ಗ್ರಾಮೀಣ ಪ್ರದೇಶದ 33,329 ಹಾಗೂ ನಗರ ಪ್ರದೇಶಗಳ 8,715 ಮಕ್ಕಳು ಸೇರಿದ್ದಾರೆ. ಇದರಲ್ಲಿ ರಾಜಧಾನಿ ಬೆಂಗಳೂರಿನ ಅಂಕಿ ಅಂಶಗಳು ಸೇರಿಲ್ಲ.

ಕೋವಿಡ್ ಸಾಂಕ್ರಾಮಿಕದ ಪರಿಣಾಮವಾಗಿ ಶಾಲೆಗಳು ಮುಚ್ಚಿ ಬಾಲ ಕಾರ್ಮಿಕ ಪದ್ಧತಿ ಪ್ರಮಾಣ ಹೆಚ್ಚಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಮಕ್ಕಳು ಬೇಸಾಯದ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಕಾಫಿ ತೋಟಗಳಲ್ಲಿ, ಕರಾವಳಿ ಭಾಗದ ಮೀನುಗಾರಿಕೆಯಲ್ಲಿ, ಉತ್ತರ ಕರ್ನಾಟಕದ ಹತ್ತಿ ಬಿಡಿಸುವ ಕೆಲಸದಲ್ಲಿ ಮತ್ತು ಎಲ್ಲ ಕಡೆಯ ಕಲ್ಲು ಕ್ವಾರಿಗಳಲ್ಲಿ ಮಕ್ಕಳು ಕೆಲಸ ಮಾಡುತ್ತಿರುವ ಸಂಗತಿ ಎಲ್ಲರಿಗೂ ಗೊತ್ತಿದೆ. ಆದರೆ ಅದು ಬೆಳಕಿಗೆ ಬರುತ್ತಿಲ್ಲ. ಕಾರ್ಮಿಕ ಇಲಾಖೆ ಕ್ರಿಯಾಶೀಲವಾದರೆ ಖಚಿತ ಅಂಕಿ ಅಂಶಗಳು ಲಭ್ಯ ವಾಗಬಹುದು.

ಬಾಲ ಕಾರ್ಮಿಕರ ಸ್ಪಷ್ಟ ಚಿತ್ರಣ ಲಭ್ಯವಾಗಬೇಕಾದರೆ ಶಾಲೆಗಳು ಪುನರಾರಂಭವಾಗಬೇಕು. ಹಿಂದೆ ಬರುತ್ತಿದ್ದ ಎಷ್ಟು ಮಂದಿ ವಿದ್ಯಾರ್ಥಿಗಳು ಮತ್ತೆ ಶಾಲೆಗೆ ಬರುತ್ತಾರೆ ಎಂಬ ಮಾಹಿತಿ ಆಗ ಲಭಿಸುತ್ತದೆ.

ಕೋವಿಡ್ ಮತ್ತು ಲಾಕ್‌ಡೌನ್‌ನಿಂದ ಉದ್ದಿಮೆಗಳು ಮುಚ್ಚಿ ಕೆಲಸ ಕಳೆದು ಕೊಂಡ ಪೋಷಕರು ಕೈಯಲ್ಲಿ ಮನೆ ಖರ್ಚಿಗೆ ಹಣವಿಲ್ಲದೆ ಬಂದಷ್ಟು ಬರಲಿ ಎಂದು ತಮ್ಮ ಮಕ್ಕಳನ್ನು ದುಡಿಮೆಗೆ ಹಚ್ಚಿದ್ದಾರೆ. ಮಕ್ಕಳ ದುಡಿಮೆಯ ಹಣದಿಂದ ಮನೆ ಬಾಡಿಗೆ ಕಟ್ಟಬಹುದು, ಮನೆಗೆ ದಿನಸಿ ಸಾಮಗ್ರಿಗಳನ್ನು ತರಬಹುದು ಎಂದು ಕೆಲಸಕ್ಕೆ ಕಳಿಸುತ್ತಿದ್ದಾರೆ.

 ಶಾಲೆ ಬಿಟ್ಟು ದುಡಿಮೆಗೆ ಹೋದ ಮಕ್ಕಳ ದಾರುಣ ಕತೆ ಒಂದೆಡೆಯಿದ್ದರೆ, ಬಾಲಕಿಯರು ಬಾಲ್ಯ ವಿವಾಹದ ಸಂಕಟದ ಸುಳಿಗೆ ಸಿಲುಕಿದ್ದಾರೆ. ದೇಶದಲ್ಲಿ 2020 ಮಾರ್ಚ್‌ನಿಂದ ಜೂನ್ ತಿಂಗಳ ಕಾಲಾವಧಿಯಲ್ಲಿ 5,584 ಬಾಲ್ಯ ವಿವಾಹ ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೂಲಗಳು ತಿಳಿಸಿವೆ. ಈ ವರ್ಷವೂ ಈ ಸಂಖ್ಯೆ ಹೆಚ್ಚುವ ಸಂಭವವಿದೆ.

ನಮ್ಮ ದೇಶದಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆಯನ್ನು 1929ರಲ್ಲಿ ರೂಪಿಸಲಾಯಿತು. ಇದು ಜಾರಿಗೆ ಬಂದದ್ದು 1930ರ ಜುಲೈನಲ್ಲಿ. ಈ ಕಾಯ್ದೆ ಜಾರಿಗೆ ಬಂದು ತೊಂಭತ್ತು ವರ್ಷಗಳಾದರೂ ಬಾಲ್ಯ ವಿವಾಹವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯವಾಗದಿರುವುದು ವಿಷಾದದ ಮಾತ್ರವಲ್ಲ ನಾಚಿಕೆ ಪಡಬೇಕಾದ ಸಂಗತಿಯಾಗಿದೆ. ಧಾರ್ಮಿಕ ಕ್ಷೇತ್ರಗಳಲ್ಲಿ ನಡೆಯುವ ಮತ್ತು ಮಂತ್ರಿ, ಶಾಸಕರು ಹಾಗೂ ರಾಜಕಾರಣಿಗಳು ನಡೆಸುವ ಸಾಮೂಹಿಕ ಮದುವೆಗಳಲ್ಲಿ ಬಾಲ್ಯ ವಿವಾಹಗಳು ನಡೆಯುತ್ತಿರುವುದು ಗುಟ್ಟಿನ ಸಂಗತಿಯಲ್ಲ. ಇದನ್ನು ತಡೆಯಲು ಕಾನೂನನ್ನು ಇನ್ನಷ್ಟು ಬಿಗಿಗೊಳಿಸಬೇಕಾಗಿದೆ.

ನಮ್ಮ ದೇಶದಲ್ಲಿ ಬಾಲ್ಯ ವಿವಾಹಕ್ಕೆ ಬಡತನವೊಂದೇ ಕಾರಣವಲ್ಲ. ಇದಕ್ಕೂ ಮಿಗಿಲಾಗಿ ಸಾಮಾಜಿಕ ಜೀವನದಲ್ಲಿ ಇನ್ನೂ ಗಟ್ಟಿಯಾಗಿ ಬೇರು ಬಿಟ್ಟಿರುವ ಮೂಢ ನಂಬಿಕೆ, ಕಂದಾಚಾರಗಳು ಪುರುಷಾಧಿಪತ್ಯದ ಪ್ರತಿಗಾಮಿ ಮೌಲ್ಯಗಳು ಇದಕ್ಕೆ ಕಾರಣ. ಹೆಣ್ಣು ಭ್ರೂಣ ಹತ್ಯೆ ನಡೆಯುತ್ತಿರುವುದು ಇಂತಹದೇ ಕಾರಣಗಳಿಂದ. ಹೆಣ್ಣನ್ನು ಶಾಲೆಗೆ ಕಳಿಸಬೇಕಾಗಿಲ್ಲ, ಮದುವೆ ಮಾಡಿಕೊಟ್ಟು ಬೇರೆ ಮನೆಗೆ ಸಾಗಿಸಿ ಹೊಣೆ ಜಾರಿಸಿಕೊಂಡರಾಯಿತು ಎಂಬ ಮನೋಭಾವ ಕೂಡ ಬಾಲ್ಯ ವಿವಾಹಗಳ ಹೆಚ್ಚಳಕ್ಕೆ ಕಾರಣ.

ಕೊರೋನ ಬರುವುದಕ್ಕಿಂತ ಮುಂಚೆಯೇ ಶೇಕಡಾ 40ರಷ್ಟು ಹೆಣ್ಣು ಮಕ್ಕಳು ಹದಿನೈದರಿಂದ ಹದಿನೆಂಟು ವಯಸ್ಸಿನೊಳಗಡೆ ಶಾಲೆಯನ್ನು ಬಿಡುತ್ತಿದ್ದಾರೆಂದು ಕಡ್ಡಾಯ ಶಿಕ್ಷಣ ಹಕ್ಕು ವೇದಿಕೆಯ ವರದಿ ಹೇಳಿತ್ತು. ಕೊರೋನಾನಂತರ ಪರಿಸ್ಥಿತಿ ಇನ್ನೂ ಬಿಗಡಾಯಿಸಿದೆ. ಇದಕ್ಕೆ ಶಾಲೆ ಮುಚ್ಚಿರುವುದು ಕೂಡ ಮುಖ್ಯ ಕಾರಣವಾಗಿದೆ.

ಬಾಲ್ಯ ವಿವಾಹಕ್ಕೆ ಬಲಿಯಾಗುವ ಬಾಲಕಿಯರು ಸಾಮಾನ್ಯವಾಗಿ ಬಡ ಕುಟುಂಬಗಳಿಂದ ಬಂದಿರುತ್ತಾರೆ. ವಾಹನ ಚಾಲಕರು, ದಿನಗೂಲಿಗಳು, ಸೆಕ್ಯುರಿಟಿ ಗಾರ್ಡ್‌ಗಳು ಮತ್ತು ಅಸಂಘಟಿತ ವಲಯದ ಕಾರ್ಮಿಕರ ಮಕ್ಕಳು ಅನಿವಾರ್ಯತೆ ಮತ್ತು ಅಸಹಾಯಕತೆಯಿಂದ ಬಲಿಪಶುಗಳಾಗುತ್ತಾರೆ. ಇದನ್ನು ತಡೆಯಲು ಸರಕಾರ ಮಾತ್ರವಲ್ಲ ಸಾಮಾಜಿಕ ಮತ್ತು ಧಾರ್ಮಿಕ ಸಂಘಟನೆಗಳು ಸ್ವಯಂ ಸೇವಾ ಸಂಸ್ಥೆಗಳು ಸಂಕಲ್ಪಮಾಡಿ ಕಾರ್ಯೋನ್ಮುಖವಾಗಬೇಕು.

ಇನ್ನು ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಯಾಗಬೇಕೆಂದರೆ ಕಾನೂನನ್ನು ಇನ್ನಷ್ಟು ಬಿಗಿಗೊಳಿಸಬೇಕು. ಮಕ್ಕಳ ಹಕ್ಕುಗಳ ರಕ್ಷಣೆಯ ವಿಷಯದಲ್ಲಿ ಕಾರ್ಮಿಕ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳು ಪರಸ್ಪರ ಹೊಂದಾಣಿಕೆಯಿಂದ ಕೆಲಸ ಮಾಡಬೇಕು. ಮಕ್ಕಳನ್ನು ನಾಳಿನ ನಾಗರಿಕರೆಂದು ಒಣ ಮಾತನ್ನು ಆಡಿದರೆ ಸಾಲದು. ಮಕ್ಕಳ ಬಾಲ್ಯ ಒತ್ತಡ ರಹಿತವಾಗಿರುವಂತೆ ಕ್ರಮ ಕೈಗೊಳ್ಳಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News