ಬಡತನದ ಭಾರಕ್ಕೆ ತತ್ತರಿಸಿದ ಭಾರತ

Update: 2021-07-14 06:39 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ದೇಶದಲ್ಲಿ ಕೊರೋನ ಉಲ್ಬಣಿಸಲು, ಇತ್ತೀಚಿನ ದಿನಗಳಲ್ಲಿ ಬಡತನ ಹೆಚ್ಚಲು ದೇಶದ ಜನಸಂಖ್ಯೆಯೇ ಕಾರಣ ಎಂದು ಸಾಬೀತು ಮಾಡಲು ಸರಕಾರ ತಿಣುಕುತ್ತಿದೆ. ನೋಟು ನಿಷೇಧದ ದಿನಗಳಿಂದ ಈ ದೇಶದಲ್ಲಿ ಬಡತನ, ಅಪೌಷ್ಟಿಕತೆ ಹೆಚ್ಚುತ್ತಿವೆೆ. ಸರಕಾರದ ಪ್ರಕಾರ, ಕಳೆದ ಏಳು ವರ್ಷಗಳಲ್ಲಿ ಜನರು ಏಕಾಏಕಿ ಅಧಿಕ ಮಕ್ಕಳನ್ನು ಹೆರುತ್ತಿದ್ದಾರೆ. ಆದುದರಿಂದಲೇ ಸಮಸ್ಯೆಗಳು ಸೃಷ್ಟಿಯಾಗುತ್ತಿವೆ. ಉತ್ತರ ಪ್ರದೇಶ ಸರಕಾರವೂ ಸೇರಿದಂತೆ ಬಿಜೆಪಿ ನೇತೃತ್ವದ ಹಲವು ಸರಕಾರಗಳು ಜನಸಂಖ್ಯೆ ನಿಯಂತ್ರಣ ಕಾನೂನು ಜಾರಿ ಮಾಡುವ ಮಾತನ್ನಾಡುತ್ತಿವೆೆ. ನೋಟು ನಿಷೇಧವಾದ ದಿನಗಳಿಂದ ಉದ್ಯೋಗಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಲಕ್ಷಾಂತರ ಜನರು ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ. ಏರುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಹೊಸ ಉದ್ಯೋಗಗಳನ್ನು ಸೃಷ್ಟಿಸುವುದು ಪಕ್ಕಕ್ಕಿರಲಿ, ಇರುವ ಉದ್ಯೋಗಗಳನ್ನು ಜನರಿಂದ ಕಿತ್ತುಕೊಂಡರೆ?. ಇದೀಗ ಲಾಕ್‌ಡೌನ್‌ನಿಂದಾಗಿ ಬಹುತೇಕ ಉದ್ಯಮಗಳು ಬಾಗಿಲು ಹಾಕಿ ಕುಳಿತುಕೊಂಡಿವೆ. ಈ ನಿರುದ್ಯೋಗ ಬಡತನವನ್ನು ತನ್ನಷ್ಟಕ್ಕೇ ಹೆಚ್ಚಿಸುತ್ತದೆ. ಹೀಗಿರುವಾಗ, ಜನಸಂಖ್ಯೆಯ ವಿರುದ್ಧ ಕಾನೂನು ಬಂದಾಕ್ಷಣ ಸಮಸ್ಯೆ ಪರಿಹಾರವಾಗುವುದು ಹೇಗೆ?

ಭಾರತದಲ್ಲಿ ಕೊರೋನ ಸೋಂಕಿನಿಂದ 3.98 ಲಕ್ಷ ಜನತೆ ಸಾವನ್ನಪ್ಪಿರುವುದಾಗಿ ಸರಕಾರದ ಅಂಕಿಅಂಶ ಹೇಳುತ್ತದೆ(ಅನಧಿಕೃತ ಅಂಕಿ-ಅಂಶದ ಪ್ರಕಾರ ಸಾವಿನ ಸಂಖ್ಯೆ ಇದಕ್ಕಿಂತ ಹಲವು ಪಟ್ಟು ಹೆಚ್ಚಿದೆ). ಭಾರತದ ಜಿಡಿಪಿ ಕಳೆದ ವರ್ಷ 7.3ಶೇ.ದಷ್ಟು ಸಂಕುಚಿತಗೊಂಡಿದ್ದು ಸ್ವಾತಂತ್ರ ದೊರೆತ ಬಳಿಕದ ಅತ್ಯಧಿಕ ಕುಸಿತ ಇದಾಗಿದೆ. 2020ರ ಫೆಬ್ರವರಿಯಿಂದ 2021ರ ಫೆಬ್ರವರಿ ಅವಧಿಯಲ್ಲಿ ಒಟ್ಟು 7 ಮಿಲಿಯ ಉದ್ಯೋಗ ನಷ್ಟವಾಗಿರುವುದಾಗಿ ಸಿಎಂಐಇ ವರದಿ ಉಲ್ಲೇಖಿಸಿದೆ. ಕಳೆದ ಆರ್ಥಿಕ ವರ್ಷದಲ್ಲಿ ಕುಟುಂಬದ ಆದಾಯದಲ್ಲಿ 12ಶೇ. ಇಳಿಕೆಯಾಗಿದೆ. ಇದು ಸರಾಸರಿ ನಷ್ಟ ಎಂಬುದನ್ನು ಇಲ್ಲಿ ಗಮನಿಸಬೇಕಾಗಿದೆ. ಬಡ ಮತ್ತು ಮಧ್ಯಮ ವರ್ಗದವರಿಗೆ ಆಗಿರುವ ನಷ್ಟ ಇನ್ನಷ್ಟು ಅಧಿಕವಾಗಿರಲೇಬೇಕು. 2021ರ ವರ್ಷದಲ್ಲಿ ಕೊರೋನ ಸೋಂಕಿನ 2ನೇ ಅಲೆಯ ಆಕ್ರಮಣ ಮತ್ತು ಅದರ ನಂತರದ ಸಂಕಟಗಳು ಭಾರತದ ಆರ್ಥಿಕತೆಯ ಮೇಲೆ ಮತ್ತಷ್ಟು ಅನಿಶ್ಚಿತತೆ ಮೂಡಲು ಕಾರಣವಾಯಿತು.

ಈ ಬಾರಿ ದೇಶವ್ಯಾಪಿ ಲಾಕ್‌ಡೌನ್ ಜಾರಿಯಾಗದಿದ್ದರೂ, ಕಳೆದ ಬಾರಿಗಿಂತಲೂ ಈ ಬಾರಿಯ ಜನಸಾಮಾನ್ಯರ ಸಮಸ್ಯೆ ಗಂಭೀರವಾಗಿತ್ತು. ಈ ಬಾರಿ ಗ್ರಾಮೀಣ ಮತ್ತು ನಗರ ಪ್ರದೇಶಗಳೆರಡೂ ತೀವ್ರ ನಾಶ, ನಷ್ಟಕ್ಕೆ ಒಳಗಾದವು. 2021ರ ಎಪ್ರಿಲ್-ಮೇ ಅವಧಿಯಲ್ಲಿ ರಾಜ್ಯಗಳಲ್ಲಿ ಜಾರಿಯಾದ ಲಾಕ್‌ಡೌನ್‌ನಿಂದ 58ಶೇ. ಉದ್ಯಮಗಳು ತೀವ್ರರೂಪದ ಮತ್ತು 38ಶೇ. ಉದ್ಯಮಗಳು ಮಧ್ಯಮರೂಪದ ಪರಿಣಾಮಕ್ಕೆ ಒಳಗಾಗಿವೆ ಎಂದು ಫಿಕಿ(ಫೆಡರೇಷನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್)ಯ ವರದಿ ಹೇಳಿದೆ. ಈ ಬಾರಿ ಸರಕು ಮತ್ತು ಸೇವೆಗಳಿಗೆ ಬೇಡಿಕೆ ಕುಸಿತ ಕೇವಲ ನಗರಪ್ರದೇಶಕ್ಕೆ ಮಾತ್ರ ಸೀಮಿತವಾಗಿರಲಿಲ್ಲ, ಗ್ರಾಮೀಣ ಪ್ರದೇಶಗಳಲ್ಲೂ ಇತ್ತು. ಗ್ರಾಮೀಣ ಮಾರುಕಟ್ಟೆಯಲ್ಲಿ ಮಾರಾಟ ತೀವ್ರ ಕುಸಿದಿತ್ತು ಎಂದು 71ಶೇ.ದಷ್ಟು ಉದ್ಯಮಗಳು ವರದಿ ಮಾಡಿವೆ. 2021ರ ಎಪ್ರಿಲ್-ಮೇ ಅವಧಿಯಲ್ಲಿ 22.3 ಮಿಲಿಯನ್ ಉದ್ಯೋಗ ನಷ್ಟವಾಗಿದ್ದು ಇದರಲ್ಲಿ ಹೆಚ್ಚಿನ ಸಮಸ್ಯೆಗೆ ಸಿಲುಕಿದವರು ದಿನಗೂಲಿ ಕಾರ್ಮಿಕರು ಎಂದು ಸಿಎಂಐಇ ಗ್ರಾಹಕರ ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ. ಕೊರೋನದ 2ನೇ ಅಲೆಯಿಂದ ಆಗಿರುವ ಪರಿಣಾಮವನ್ನು ಗಮನಿಸಿ, ಹಲವು ಬಹುರಾಷ್ಟ್ರೀಯ ಮತ್ತು ಅಂತರ್‌ರಾಷ್ಟ್ರೀಯ ಏಜೆನ್ಸಿಗಳು 2021-22ರ ಸಾಲಿನಲ್ಲಿ ಭಾರತದ ಪ್ರಗತಿಯ ಮುನ್ಸೂಚನೆಯನ್ನು ಪರಿಷ್ಕರಿಸಿವೆೆ.

ಈ ಹಿಂದೆ, ಭಾರತದ 2021-22ರ ಸಾಲಿನ ಆರ್ಥಿಕ ಪ್ರಗತಿ ದರ(ಜಿಡಿಪಿ) 10ಶೇ. ಆಗಿರಬಹುದು ಎಂದಿದ್ದ ವಿಶ್ವಬ್ಯಾಂಕ್, ಇದನ್ನು 8.3ಶೇ.ಕ್ಕೆ ಪರಿಷ್ಕರಿಸಿದೆ. ದೇಶದ ಜಿಡಿಪಿ ದರ 10.5ಶೇ. ಇರಬಹುದು ಎಂದಿದ್ದ ರಿಸರ್ವ್ ಬ್ಯಾಂಕ್ ಇದನ್ನು 9.3ಶೇ.ಕ್ಕೆ ಪರಿಷ್ಕರಿಸಿದೆ. ಆರ್ಥಿಕತೆಯ ಮಂದಗತಿ, ಅನೌಪಚಾರಿಕ ವಲಯದ ಉದ್ಯೋಗದಲ್ಲಿ ಹೆಚ್ಚಳ, ಆರೋಗ್ಯಕ್ಷೇತ್ರದ ವೆಚ್ಚದ ಹೆಚ್ಚಳದಿಂದಾಗಿ ಆದಾಯದಲ್ಲಿ 5ರಿಂದ 10ಶೇ.ದಷ್ಟು ಕಡಿತವನ್ನು ನಿರೀಕ್ಷಿಸಬಹುದು. ಆದಾಯದಲ್ಲಿ 5ರಿಂದ 10ಶೇ. ಇಳಿಕೆ ಎಂದರೆ, ಬಡಜನರ ಮೇಲೆ ಕೊರೋನದ ಪರಿಣಾಮ ಬೃಹತ್ ಮಟ್ಟದ್ದಾಗಿದೆ. ಕೊರೋನ ಸಮಸ್ಯೆಯ ಪರಿಣಾಮದಿಂದ ಬಡತನ ಹೆಚ್ಚಿರುವುದನ್ನು ಅಂದಾಜು ಮಾಡಲು ರಂಗರಾಜನ್ ಸಮಿತಿಯ ವರದಿಯನ್ನು ಬಳಸಲಾಗಿದ್ದು, ಇದರ ಪ್ರಕಾರ ಈ ವರ್ಷ ಹೆಚ್ಚುವರಿಯಾಗಿ 150ರಿಂದ 199 ಮಿಲಿಯನ್ ಜನತೆ ಬಡತನದ ದವಡೆಗೆ ತಳ್ಳಲ್ಪಟ್ಟಿದ್ದಾರೆ. ಇದರರ್ಥ, ಬಡತನ ಪ್ರಮಾಣದಲ್ಲಿ ಒಟ್ಟು 15ರಿಂದ 20ಶೇ.ದಷ್ಟು ಏರಿಕೆಯಾಗಿದ್ದು ದೇಶದ ಸುಮಾರು ಅರ್ಧಾಂಶದಷ್ಟು ಜನತೆ ಈಗ ಬಡವರಾಗಿದ್ದಾರೆ. ಬಡತನದ ಹೆಚ್ಚಳದ ಪ್ರಮಾಣ ನಗರಪ್ರದೇಶಕ್ಕೆ ಹೋಲಿಸಿದರೆ, ಗ್ರಾಮೀಣ ಮಟ್ಟದಲ್ಲಿ ಹೆಚ್ಚಿದೆ.

ಕೊರೋನ ಸೋಂಕಿಗೂ ಮೊದಲಿನ ಅವಧಿಯಲ್ಲಿ, ಗ್ರಾಮೀಣ ಜನಸಂಖ್ಯೆಯ ಸುಮಾರು 35ಶೇ.(265 ಮಿಲಿಯನ್ ಜನತೆ) ಬಡವರಾಗಿದ್ದರು. ಈ ಸಂಖ್ಯೆ ಈಗ ಸುಮಾರು 381-418 ಮಿಲಿಯನ್‌ಗೆ ಏರಿದೆ, ಅಂದರೆ 2021-22ರಲ್ಲಿ ಈ ಪ್ರಮಾಣ 50.9ಶೇ.ದಿಂದ 55.87ಶೇ.ಕ್ಕೆ ಹೆಚ್ಚಿದೆ. ಇದೇ ಅವಧಿಯಲ್ಲಿ ನಗರ ಪ್ರದೇಶದ ಜನಸಂಖ್ಯೆಯ 36ರಿಂದ 46 ಮಿಲಿಯನ್ ಹೆಚ್ಚುವರಿ ಜನ ಬಡತನದ ಪರಿಧಿಗೆ ಬರಲಿದ್ದಾರೆ. ಇತರರಿಗೆ ಹೋಲಿಸಿದರೆ, ದುರ್ಬಲ ವರ್ಗದವರು ಬಡತನದ ವ್ಯಾಪ್ತಿಗೆ ಹೆಚ್ಚಿನ ಪ್ರಮಾಣದಲ್ಲಿ ಸೇರುತ್ತಾರೆ. ಉದಾಹರಣೆಗೆ, ಅಖಿಲ ಭಾರತ ಮಟ್ಟದಲ್ಲಿ ಎಸ್‌ಸಿ/ಎಸ್‌ಟಿ ವರ್ಗದ 13-20ಶೇ.ದಷ್ಟು ಮಂದಿ ಹೆಚ್ಚುವರಿಯಾಗಿ ಬಡತನದ ಪರಿಧಿಗೆ ಬರಲಿದ್ದರೆ, ಮೇಲ್ವರ್ಗದ ಜನಸಂಖ್ಯೆಯ 12-16ಶೇ. ಜನತೆ ಈ ವ್ಯಾಪ್ತಿಗೆ ಸೇರುತ್ತಾರೆ. ಇದರಿಂದ ಕೊರೋನ ಸೋಂಕಿನಿಂದ ಉಂಟಾಗಿರುವ ಬಡತನವು ಎಸ್‌ಸಿ/ಎಸ್‌ಟಿ ವರ್ಗ ಮತ್ತು ಎಸ್‌ಟಿ/ಎಸ್‌ಸಿಯೇತರ ವರ್ಗದವರ ನಡುವಿನ ಅಸಮಾನತೆಯನ್ನು ಮತ್ತಷ್ಟು ವಿಸ್ತರಿಸಿದೆ.

ಪ್ರಮುಖ ಉದ್ಯೋಗಗಳನ್ನು ಗಮನಿಸಿದರೆ, ಗ್ರಾಮೀಣ ವಲಯದಲ್ಲಿ ಸ್ವಉದ್ಯೋಗಿ ಕೃಷಿಕರು, ಕೃಷಿಯೇತರ ಮತ್ತು ಕೂಲಿ ಕಾರ್ಮಿಕರು ಅತ್ಯಧಿಕ ನಷ್ಟಕ್ಕೆ ಒಳಗಾಗಿದ್ದಾರೆ. ಬಡವರ ಸಂಖ್ಯೆ ಹೆಚ್ಚಿದಂತೆಯೇ, ಜನರ ಕೊಳ್ಳುವ ಶಕ್ತಿ ಇಳಿಕೆಯಾಗಿ ಜಿಡಿಪಿ ಮತ್ತಷ್ಟು ಕುಸಿಯುತ್ತದೆ. ಈ ನಿಟ್ಟಿನಲ್ಲಿ ಬಡವರು ಮತ್ತು ದುರ್ಬಲ ವರ್ಗದವರನ್ನು ಗುರುತಿಸುವ ಕಾರ್ಯ ಅತ್ಯಗತ್ಯವಾಗಿದ್ದು, ರಾಷ್ಟ್ರೀಯ ಆಹಾರ ಸುರಕ್ಷತಾ ಯೋಜನೆ, ನೇರ ನಗದು ವರ್ಗಾವಣೆ ಹಾಗೂ ಇತರ ಸಾಮಾಜಿಕ ಭದ್ರತಾ ಯೋಜನೆಗಳು ಜನರನ್ನು ಮತ್ತಷ್ಟು ದಟ್ಟದಾರಿದ್ರದ ಕೂಪಕ್ಕೆ ಬೀಳದಂತೆ ರಕ್ಷಿಸಬಹುದು. ಎಂನರೇಗಾ ಹಾಗೂ ಇತರ ಉದ್ಯೋಗ ಸೃಷ್ಟಿಸುವ ಯೋಜನೆಗಳ ಮೂಲಕ ಆರ್ಥಿಕ ನೆರವು ಮತ್ತು ಮಧ್ಯಂತರ ಅನೌಪಚಾರಿಕ ಉದ್ಯೋಗಾವಕಾಶ ಸೃಷ್ಟಿಸಿ, ಕೊರೋನವು ಜಸಾಮಾನ್ಯರ ಬದುಕಿನ ಮೇಲೆ ಉಂಟುಮಾಡಿದ ಪ್ರತಿಕೂಲ ಪರಿಣಾಮವನ್ನು ನಿಯಂತ್ರಿಸಬಹುದಾಗಿದೆ. ಈ ಬಗ್ಗೆ ಗಮನ ನೀಡುವ ಬದಲು, ಜನಸಂಖ್ಯಾ ನೀತಿಯ ಹೆಸರಿನಲ್ಲಿ ಗರ್ಭಪಾತದಂತಹ ಅನಿಷ್ಟಗಳಿಗೆ ಪ್ರೋತ್ಸಾಹ ನೀಡುವುದರಿಂದ ಯಾವ ಪ್ರಯೋಜನವೂ ಆಗದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News