ಲಾಕ್‌ಡೌನ್‌ನಿಂದ ಉದ್ಯೋಗ ನಷ್ಟ : ಕಿಡ್ನಿ ಮಾರಾಟ ಮಾಡುತ್ತಿರುವ ಗ್ರಾಮಸ್ಥರು !

Update: 2021-07-15 03:47 GMT
ಫೈಲ್ ಫೋಟೊ

ಗುವಾಹತಿ : ಅಸ್ಸಾಂನಲ್ಲಿ ಲಾಕ್‌ಡೌನ್ ಕಾರಣದಿಂದ ಉದ್ಯೋಗ ನಷ್ಟವಾಗಿ ಸಾಲದ ಸುಳಿಯಲ್ಲಿ ಸಿಲುಕಿರುವ ಗ್ರಾಮಸ್ಥರನ್ನು ಓಲೈಸಿ ’ಅಂಗಾಂಗ ದಾನ’ ಪಡೆದು ಕಾಳಸಂತೆಯಲ್ಲಿ ಮಾರಾಟ ದಂಧೆಯನ್ನು ಪೊಲೀಸರು ಬೇಧಿಸಿದ್ದಾರೆ.

ಈ ಸಂಬಂಧ ಬಂಧಿತರಾಗಿರುವ ಮೂವರು ಅಸ್ಸಾಂನ ಧರಾಂತುಲ್ ಗ್ರಾಮದ ಜತೆ ಸಂಪರ್ಕ ಹೊಂದಿದ್ದು, ಈ ಗ್ರಾಮದಲ್ಲಿ ಕನಿಷ್ಠ 12ಕ್ಕೂ ಹೆಚ್ಚು ಮಂದಿ ಇಂಥ ಅಂಗಾಂಗ ಕಳ್ಳ ಸಾಗಾಣಿಕೆದಾರರಿಗೆ ತಮ್ಮ ಕಿಡ್ನಿ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ವಿವರಿಸಿದ್ದಾರೆ.

ಬಡತನ, ಮೈಕ್ರೊಫೈನಾನ್ಸ್ ಸಾಲದ ಹೊರೆ ಹಾಗೂ ಸುಲಭವಾಗಿ ಹಣ ಗಳಿಸಬಹುದು ಎಂಬ ಆಮಿಷಗಳಿಂದಾಗಿ ಗ್ರಾಮಸ್ಥರು ಕಿಡ್ನಿಗಳನ್ನು ಮಾರಾಟ ಮಾಡಿದ್ದಾರೆ. ಕೋವಿಡ್-19 ಕಾರಣದಿಂದ ಕಳೆದ ಒಂದು ವರ್ಷದಿಂದ ಗ್ರಾಮಸ್ಥರ ಆದಾಯಕ್ಕೆ ಪೆಟ್ಟು ಬಿದ್ದಿದ್ದು, ಈ ಅವಧಿಯಲ್ಲಿ ಕಿಡ್ನಿ ಮಾರಾಟ ಹೆಚ್ಚಿದೆ ಎಂದು ಹೇಳಲಾಗಿದೆ.

ಮೇಸ್ತ್ರಿಯಾಗಿ ಕೆಲಸ ಮಾಡುತ್ತಿದ್ದ ಸುಮಂತಾ ದಾಸ್ (37)ಗೆ ಲಾಕ್‌ಡೌನ್ ಕಾರಣದಿಂದ ಒಂದು ವರ್ಷದಿಂದ ಕೆಲಸವಿಲ್ಲ. ಈತನ ಮಗನಿಗೆ ಹೃದಯ ಶಸ್ತ್ರಚಿಕಿತ್ಸೆ ಅಗತ್ಯವಿತ್ತು. ಕಟ್ಟಡ ನಿರ್ಮಾಣ ಚಟುವಟಿಕೆಗಳಿಲ್ಲದೇ ಆತನ ಕೈಯಲ್ಲಿ ಹಣ ಇರಲಿಲ್ಲ. ಅನಿವಾರ್ಯವಾಗಿ ಸುಮಂತಾ ದಾಸ್ ತನ್ನ ಕಿಡ್ನಿ ಮಾರಾಟ ಮಾಡಬೇಕಾಯಿತು. 5 ಲಕ್ಷ ರೂಪಾಯಿ ನೀಡುವ ಭರವಸೆ ನೀಡಿದ್ದರು. ಆದರೆ ಈಗ ಬಂದಿರುವುದು 1.5 ಲಕ್ಷ ರೂಪಾಯಿ ಮಾತ್ರ ಎಂದು ಅವರು ಹೇಳುತ್ತಾರೆ. ಒಂದು ಕಿಡ್ನಿ ಇಲ್ಲದ ಕಾರಣದಿಂದ ಜೀವನಾಧಾರಕ್ಕಾಗಿ ಮುಂದೆಂದೂ ಆತ ಶ್ರಮದ ಕೆಲಸ ಮಾಡುವಂತಿಲ್ಲ.

"ನನ್ನ ಮಗನಿಗೆ ಒಳ್ಳೆಯ ಚಿಕಿತ್ಸೆಯನ್ನೂ ಕೊಡಿಸಲಾಗಲಿಲ್ಲ. ಆತನ ಹೃದಯದಲ್ಲಿ ರಂಧ್ರವಿದೆ. ನಮಗೆ ಸಿಕ್ಕಿರುವುದು ಕೇವಲ 1.5 ಲಕ್ಷ. ಇದೀಗ ನನಗೆ ಆರೋಗ್ಯ ಸಮಸ್ಯೆ ಇದೆ. ಭಾರ ಎತ್ತಲು ಸಾಧ್ಯವಾಗುತ್ತಿಲ್ಲ. ಆಯಾಸವಾಗುತ್ತಿದೆ" ಎಂದು ಸುಮಂತಾ ದಾಸ್ ಹೇಳಿದರು.

ಇವರ ಪತ್ನಿ ಸಾಬಿತ್ರಿ ತಮ್ಮ ಮೈಕ್ರೊಫೈನಾನ್ಸ್ ಸಾಲದ ಪುಸ್ತಕ ತೋರಿಸುತ್ತಾರೆ. "ನಮಗೆ ಮೂವರು ಮಕ್ಕಳು. ಮೈಕ್ರೊಫೈನಾನ್ಸ್ ಸಾಲ ಇದ್ದು, ಪ್ರತಿದಿನ ಫೈನಾನ್ಸ್‌ನವರು ಮನೆಗೆ ಬಂದು ಹಣ ಕೇಳುತ್ತಾರೆ. ಆದ್ದರಿಂದ ಸಾಲದ ಮೊತ್ತ ನೀಡಲು ಮತ್ತು ಮಗುವಿಗೆ ಚಿಕಿತ್ಸೆ ಕೊಡಿಸಲು ಈ ದಾರಿ ಕಂಡುಕೊಂಡೆವು" ಎಂದು ಹೇಳುತ್ತಾರೆ.

ಮೊರಿಗಾಂವ್ ಜಿಲ್ಲೆಯ ಈ ಗ್ರಾಮದ ದಂಧೆಯ ಕೇಂದ್ರವಾಗಿ ಮಾರ್ಪಟ್ಟಿದೆ. ಸ್ಥಳೀಯ ವಿಲೇಜ್ ಡಿಫೆನ್ಸ್ ಪಾರ್ಟಿ ಕಾರ್ಯಕರ್ತರು, ಗ್ರಾಮದ ಒಬ್ಬಾಕೆ ಮಹಿಳೆ ಮತ್ತು ಆಕೆಯ ಮಗ ಕಿಡ್ನಿ ದಾನದ ಪತ್ರಕ್ಕೆ ಸಹಿ ಮಾಡುವ ವೇಳೆ ರೆಡ್‌ಹ್ಯಾಂಡ್ ಆಗಿ ಈ ದಂಧೆಕೋರರನ್ನು ಹಿಡಿದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News