ಉಪಸ್ಪೀಕರ್ ಕಾರಿನ ಮೇಲೆ ದಾಳಿಗೈದ ಆರೋಪದ ಮೇಲೆ 100 ರೈತರ ವಿರುದ್ಧ ದೇಶದ್ರೋಹ ಪ್ರಕರಣ

Update: 2021-07-15 10:57 GMT
Photo: NDTV

ಚಂಡೀಗಢ: ಹರ್ಯಾಣದ ಆಡಳಿತ ಬಿಜೆಪಿ-ಜೆಜೆಪಿ ಮೈತ್ರಿ ಸರಕಾರದ ವಿರುದ್ಧ ಹಾಗೂ ವಿವಾದಾತ್ಮಕ ಕೃಷಿ ಕಾಯಿದೆಗಳ ವಿರುದ್ಧ ನಡೆದ ಪ್ರತಿಭಟನೆ ವೇಳೆ ಉಪ ಸ್ಪೀಕರ್ ರಣಬೀರ್ ಗಂಗ್ವಾ ಅವರ ಅಧಿಕೃತ ವಾಹನದ ಮೇಲೆ ದಾಳಿಗೈದು ಹಾನಿಗೈದ ಆರೋಪದ ಮೇಲೆ ಪೊಲೀಸರು 100 ರೈತರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿದ್ದಾರೆ. ಘಟನೆ ಹರ್ಯಾಣದ ಸಿರ್ಸಾ ಜಿಲ್ಲೆಯಲ್ಲಿ ಜುಲೈ 11ರಂದು ನಡೆದಿತ್ತು.

ದೇಶದ್ರೋಹದ ಪ್ರಕರಣದ ಜತೆಗೆ ರೈತರ ವಿರುದ್ಧದ ಎಫ್‍ಐಆರ್ ನಲ್ಲಿ 'ಕೊಲೆಯತ್ನ' ಆರೋಪವನ್ನೂ ಉಲ್ಲೇಖಿಸಲಾಗಿದೆ. ಎಫ್‍ಐಆರ್ ನಲ್ಲಿ  ಉಲ್ಲೇಖಗೊಂಡಿರುವ ರೈತರ ಹೆಸರುಗಳ ಪೈಕಿ ರೈತ ನಾಯಕರಾದ ಹರ್‍ಚರಣ್ ಸಿಂಗ್ ಹಾಗೂ ಪ್ರಹ್ಲಾದ್ ಸಿಂಗ್ ಅವರ ಹೆಸರುಗಳೂ ಇವೆ.

ರೈತರ ವಿರುದ್ಧದ ಆರೋಪ ನಿರಾಧಾರ, ಅವರು ಹರ್ಯಾಣಾದ ಉಪಸ್ಪೀಕರ್ ಅವರ ವಿರುದ್ಧ ಸಿರ್ಸಾದಲ್ಲಿ ಪ್ರತಿಭಟಿಸಿದ್ದಾರೆಂಬ ಕಾರಣಕ್ಕೆ ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಲಾಗಿದೆ ಎಂದು ಸಂಯುಕ್ತ್ ಕಿಸಾನ್ ಮೋರ್ಚಾ ಕಿಡಿಕಾರಿದೆ.

ಕಳೆದ ಹಲವಾರು ದಿನಗಳಿಂದ ರೈತರು ಹರ್ಯಾಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದು  ತಮ್ಮ ಬೇಡಿಕೆ ಈಡೇರುವವರಗೆ ಆಡಳಿತ ಪಕ್ಷಗಳ ನಾಯಕರನ್ನು ಸಾರ್ವಜನಿಕ ಸಭೆಗಳಲ್ಲಿ ಮಾತನಾಡಲು ಅನುಮತಿಸುವುದಿಲ್ಲ ಎಂದು ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News