ಸದನದಲ್ಲಿ ಚರ್ಚಿಸದೆ ನೂತನ ಶಿಕ್ಷಣ ನೀತಿ ಜಾರಿ ಬೇಡ: ಮುಹಮ್ಮದ್ ಅಸ್ಲಮ್

Update: 2021-07-15 13:15 GMT

ಬೆಂಗಳೂರು, ಜು.15: ನೂತನ ಶಿಕ್ಷಣ ನೀತಿ ಕುರಿತು ಸದನದಲ್ಲಿ ಚರ್ಚಿಸದೆ ಏಕಪಕ್ಷೀಯವಾಗಿ ಜಾರಿ ಮಾಡಲು ಹೊರಟಿರುವ ರಾಜ್ಯ ಸರಕಾರ ನಿಲುವು ಸರಿಯಲ್ಲವೆಂದು ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಅಸ್ಲಮ್ ತಿಳಿಸಿದ್ದಾರೆ. 

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ನೂತನ ಶಿಕ್ಷಣ ನೀತಿಯಲ್ಲಿ ಸಾಕಷ್ಟು ಗೊಂದಲಗಳಿವೆ ಎಂದು ಹಲವು ಮಂದಿ ಶಿಕ್ಷಣ ತಜ್ಞರು ಅಭಿಪ್ರಾಯಿಸಿದ್ದಾರೆ. ಈ ಬಗ್ಗೆ ಮುಂದಿನ ಸದನದಲ್ಲಿ ಚರ್ಚಿಸಿ, ಗೊಂದಲ ನಿವಾರಿಸಿ ಶಾಸಕಾಂಗದಿಂದ ಅನುಮೋದನೆ ಪಡೆದ ಬಳಕವಷ್ಟೆ ಜಾರಿಗೊಳಿಸಬೇಕೆಂದು ಒತ್ತಾಯಿಸಿದ್ದಾರೆ. 

ಸಂವಿಧಾನದ ಆಶಯದಂತೆ ಸಾಮಾಜಿಕ ನ್ಯಾಯ, ಸಮಾನತೆ, ಪ್ರಜಾಸತ್ತಾತ್ಮಕ ಜಾತ್ಯತೀತ, ಸಮಾಜವಾದಿ ಗಣತಂತ್ರದ ಮೌಲ್ಯಗಳನ್ನು ಎತ್ತಿ ಹಿಡಿಯುವಂತಹ ಶಿಕ್ಷಣ ನಮಗೆ ಬೇಕಿದೆ. ಇಂತಹ ಜನಪರ ಅಂಶಗಳು ನೂತನ ಶಿಕ್ಷಣ ನೀತಿಯಲ್ಲಿ ಅಡಕವಾಗಿದೆಯೇ ಎಂಬುದರ ಬಗ್ಗೆ ಸರಕಾರ ಸ್ಪಷ್ಟವಾಗಿ ತಿಳಿಸುತ್ತಿಲ್ಲ. ಹಾಗೂ ನೂತನ ಶಿಕ್ಷಣ ನೀತಿಯನ್ನು ಜಾರಿಗೊಳಿಸಲಿಕ್ಕೆ ಬೇಕಾಗುವ ಹಣಕ್ಕೂ, ರಾಜ್ಯ ಸರಕಾರ ಶಿಕ್ಷಣ ಇಲಾಖೆಗೆ ಮೀಸಲಿಟ್ಟ ಹಣದ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಹೀಗಾಗಿ ಶಿಕ್ಷಣ ನೀತಿಯನ್ನು ತರಾತುರಿಯಲ್ಲಿ ಅನುಷ್ಠಾನಗೊಳಿಸಬಾರದೆಂದು ಅವರು ಹೇಳಿದ್ದಾರೆ.

ಶಿಕ್ಷಣ ಕ್ಷೇತ್ರಕ್ಕೆ ಸರಿಯಾದ ಬಜೆಟ್ ಬಿಡುಗಡೆ ಮಾಡದೆ ಹೊಸ ಶಿಕ್ಷಣ ನೀತಿಯ ಅನುಷ್ಠಾನಕ್ಕೆ ಮುಂದಾಗಿರುವ ಸರಕಾರದ ನಡೆ ಅವೈಜ್ಞಾನಿಕವಾಗಿದೆ. ಅದುದರಿಂದ ಸರಕಾರದ ಈ ಆತುರಾತುರ ನಿರ್ಧಾರದಿಂದಾಗಿ ಈಗಾಗಲೇ ಹದಗಟ್ಟಿರುವ ನಮ್ಮ ಶಿಕ್ಷಣ ವ್ಯವಸ್ಥೆಯ ಮೇಲೆ ಸಾಕಷ್ಟು ನಕಾರಾತ್ಮಕ ಪರಿಣಾಮಗಳು ಬೀರಬಹುದು. ಹೀಗಾಗಿ ರಾಜ್ಯ ಸರಕಾರ ಹೊಸ ಶಿಕ್ಷಣ ನೀತಿಯನ್ನು ಜಾರಿಗೊಳಿಸುವುದನ್ನು ಮುಂದೂಡಬೇಕೆಂದು ಅವರು ಮನವಿ ಮಾಡಿದ್ದಾರೆ. 

ನೂತನ ಶಿಕ್ಷಣ ನೀತಿಯನ್ನು ಕಾರ್ಯರೂಪಕ್ಕೆ ತರಬೇಕಾದರೆ ಅದಕ್ಕೆ ಸರಿಯಾದ ಪ್ರಾಯೋಗಿಕವಾಗಿ ವಾಸ್ತವಕ್ಕೆ ಪೂರಕವಾದ ಯೋಜನೆ ಸರಕಾರದ ಬಳಿ ಇರಬೇಕು. ಹಾಗೂ ನೀತಿಯ ಬಗ್ಗೆ ಶಿಕ್ಷಣ ತಜ್ಞರು, ವಿದ್ಯಾರ್ಥಿ ಸಂಘಟನೆಗಳು, ಪೋಷಕರು, ಪ್ರತಿಪಕ್ಷಗಳ ಮುಖಂಡರು ಹಾಗೂ ಸಾರ್ವಜನಿಕರ ಅಭಿಪ್ರಾಯ ಪಡೆದು ವಿದ್ಯಾರ್ಥಿ ಸ್ನೇಹಿ ಶಿಕ್ಷಣ ನೀತಿಯನ್ನು ಜಾರಿಗೊಳಿಸಬೇಕೆಂದು ಅವರು ಒತ್ತಾಯಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News