ಲಸಿಕೆ ಅಭಿಯಾನದಲ್ಲಿ ವೈಫಲ್ಯ: ಯಾರು ಹೊಣೆ?

Update: 2021-07-17 19:19 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

‘ಲಸಿಕೆ ಅಭಿಯಾನದ ವೈಫಲ್ಯಕ್ಕೆ ರಾಜ್ಯಗಳೇ ಹೊಣೆ’ ಎಂದು ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವಿ ಆರೋಪಿಸಿದ್ದಾರೆ. ಇಂತಹದೊಂದು ಆರೋಪವನ್ನು ಹೊರಿಸುವ ಮೂಲಕ ಕೇಂದ್ರ ಸರಕಾರ ಮೊದಲ ಬಾರಿಗೆ ‘ಲಸಿಕೆ ಅಭಿಯಾನ ವಿಫಲವಾಗಿರುವುದನ್ನು’ ಬಹಿರಂಗವಾಗಿ ಒಪ್ಪಿಕೊಂಡಿದೆ. ವಿಫಲವಾಗಿದೆ ಎನ್ನುವುದನ್ನೇ ಒಪ್ಪಿಕೊಳ್ಳದೆ, ಆ ವೈಫಲ್ಯಕ್ಕೆ ಯಾರು ಕಾರಣ ಎನ್ನುವುದನ್ನು ಚರ್ಚಿಸುವುದು ಅಸಾಧ್ಯ. ಆದುದರಿಂದ, ಲಸಿಕೆ ವೈಫಲ್ಯಕ್ಕೆ ರಾಜ್ಯ ಸರಕಾರಗಳು ಕಾರಣವೇ ಅಥವಾ ಕೇಂದ್ರ ಸರಕಾರ ಕಾರಣವೇ ಎನ್ನುವುದನ್ನು ಇನ್ನು ನಾವು ಮುಕ್ತವಾಗಿ ಚರ್ಚಿಸಬಹುದಾಗಿದೆ. ಸಾಧಾರಣವಾಗಿ ದೇಶದಲ್ಲಿ ಸಂಭವಿಸುವ ಸಾಧನೆಗಳಿಗಷ್ಟೇ ಪ್ರಧಾನಿ ಮೋದಿಯವರು ಹೊಣೆಗಾರರು ಆಗಿರುವುದರಿಂದ, ನಷ್ಟಗಳನ್ನು ಸಹಜವಾಗಿಯೇ ಇನ್ನಾರಾದರೂ ಹೊರಲೇಬೇಕಾಗುತ್ತದೆ.

ಹೊಸದಾಗಿ ಖಾತೆಯನ್ನು ವಹಿಸಿರುವ ಆರೋಗ್ಯ ಸಚಿವರು, ಪ್ರಧಾನಿ ಮೋದಿಯವರ ವರ್ಚಸ್ಸಿನ ಆರೋಗ್ಯದ ಕುರಿತಂತೆ ಕಾಳಜಿ ವಹಿಸಿ, ಲಸಿಕೆ ಅಭಿಯಾನದ ಹಿನ್ನಡೆಯನ್ನು ರಾಜ್ಯದ ಹೆಗಲಿಗೆ ಹಾಕಿದ್ದಾರೆ. ಈ ಮೂಲಕ, ಕೊರೋನ ಹೋರಾಟಕ್ಕೆ ಸಂಬಂಧಿಸಿ ಮೋದಿಯವರ ಪ್ರತಿಷ್ಠೆಗೆ ಧಕ್ಕೆಯಾಗದಂತೆ ನೋಡಿಕೊಳ್ಳುತ್ತಿದ್ದಾರೆ. ರಾಜ್ಯಗಳಲ್ಲಿ ಕಾಡುತ್ತಿರುವ ಲಸಿಕೆಗಳ ಕೊರತೆಯ ಕುರಿತಂತೆ ಯಾವುದೇ ಪ್ರತಿಕ್ರಿಯೆಯನ್ನು ನೀಡದ ಸಚಿವರು, ಲಸಿಕೆ ಅಭಿಯಾನವನ್ನು ರಾಜ್ಯಗಳು ಸರಿಯಾಗಿ ಆರಂಭಿಸಿಲ್ಲ ಎಂದಷ್ಟೇ ದೂರಿದ್ದಾರೆ. ಅಂದರೆ ಈ ಮೂಲಕ ಅವರು, ಔಷಧಿಯೇ ಇಲ್ಲದ ಖಾಲಿ ಸಿರಿಂಜ್‌ಗಳನ್ನು ಚುಚ್ಚಿ, ಅಭಿಯಾನವನ್ನು ಯಶಸ್ವಿಗೊಳಿಸಲು ಸಾಧ್ಯವಿರಲಿಲ್ಲವೇ? ಎಂದು ರಾಜ್ಯವನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡಂತಾಗಿದೆ. ಲಸಿಕೆಯನ್ನು ರಾಜಕೀಯಗೊಳಿಸಲು ಕೇಂದ್ರ ಸರಕಾರ ನಡೆಸಿದ ಪ್ರಯತ್ನವೂ ಈ ಅಭಿಯಾನಕ್ಕೆ ಸಾಕಷ್ಟು ಹಾನಿಯನ್ನು ಎಸಗಿದೆ. ಕೋವಾಕ್ಸಿನ್ ಲಸಿಕೆಯ ಸಹಜ ಹೆರಿಗೆಗೆ ಅವಕಾಶ ನೀಡದೆ, ಅವಧಿಗೆ ಮುನ್ನವೇ ಸಿಸೇರಿಯನ್ ಮೂಲಕ ಗರ್ಭದಿಂದ ಹೊರತೆಗೆಯಲು ಸರಕಾರ ಮುಂದಾಯಿತು.

ಸರಕಾರದ ಈ ಯತ್ನ ಸಾಕಷ್ಟು ಟೀಕೆಗಳಿಗೆ ಗುರಿಯಾಗಿತ್ತು. ಲಸಿಕೆ ಪೂರ್ಣ ಪ್ರಯೋಗಕ್ಕೆ ಒಳಪಟ್ಟಿಲ್ಲ ಎನ್ನುವ ವರದಿಗಳು ಜನರನ್ನು ಸಹಜವಾಗಿಯೇ ಆತಂಕಕ್ಕೆ ತಳ್ಳಿದ್ದವು. ‘ಸ್ವದೇಶಿ ಲಸಿಕೆ’ಯ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಳ್ಳುವ ಆತುರದಲ್ಲಿ ಪ್ರಧಾನಿ ಮೋದಿಯವರು ಲಸಿಕೆಯ ಪಾರದರ್ಶಕತೆಗೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾದುದು, ಲಸಿಕೆ ಅಭಿಯಾನಕ್ಕೆ ಬಹುದೊಡ್ಡ ತೊಡಕಾಯಿತು. ಲಸಿಕೆಯನ್ನು ಆರಂಭದಲ್ಲೇ ಪಡೆಯಲು ವೈದ್ಯರು, ರಾಜಕಾರಣಿಗಳು ಹಿಂಜರಿದದ್ದು ಇನ್ನೊಂದು ಹೊಡೆತ. ಬರೇ ಪೌರಕಾರ್ಮಿಕರು ಮತ್ತು ತಳಸ್ತರದ ಆರೋಗ್ಯ ಸಿಬ್ಬಂದಿಯ ಮೇಲೆ ಮಾತ್ರ ಲಸಿಕೆಯನ್ನು ಪ್ರಯೋಗಿಸಲು ಸರಕಾರ ಮುಂದಾಯಿತು. ತೀರಾ ತಡವಾಗಿ ರಾಜಕಾರಣಿಗಳು ಲಸಿಕೆಗಳನ್ನು ತೆಗೆದುಕೊಳ್ಳಲು ಮುಂದಾದರು. ಇದೇ ಸಂದರ್ಭದಲ್ಲಿ ಪತಂಜಲಿ ರಾಮ್‌ದೇವ್ ಲಸಿಕೆಯ ಕುರಿತಂತೆ ಮಾಡಿದ ಅಪಪ್ರಚಾರ ಇಡೀ ಆಂದೋಲನವನ್ನು ದಾರಿತಪ್ಪಿಸಿತು. ಲಸಿಕೆಯನ್ನು ಪಡೆದ ನೂರಾರು ವೈದ್ಯರು ಮೃತಪಟ್ಟಿದ್ದಾರೆ ಎಂಬ ಹೇಳಿಕೆ ಅಮಾಯಕ ಜನರಲ್ಲಿ ಗಾಬರಿಯನ್ನು ಸೃಷ್ಟಿಸಿತು.

ಜೊತೆಗೆ ಅಲೋಪತಿ ವೈದ್ಯಕೀಯದ ಬಗ್ಗೆ ಜನರಲ್ಲಿ ಭಯ, ಭೀತಿಯನ್ನು ಬಿತ್ತಿ ಜನರು ಲಸಿಕೆಯಿಂದ ದೂರ ಉಳಿಯುವಂತೆ ಮಾಡಿದರು. ರಾಮ್‌ದೇವ್ ಹೇಳಿಕೆಗೆ ಬಿಜೆಪಿಯ ನಾಯಕರೂ ತಲೆದೂಗಿದರು. ರಾಮ್‌ದೇವ್ ಹೇಳಿಕೆಯನ್ನು ಪ್ರತಿಭಟಿಸಿದ ವೈದ್ಯರು, ಅವರ ಮೇಲೆ ದೇಶದ್ರೋಹ ಕಾಯ್ದೆಯನ್ನು ದಾಖಲಿಸಲು ಒತ್ತಾಯಿಸಿದ್ದರು. ಆದರೂ ಈವರೆಗೆ ಕೇಂದ್ರ ಸರಕಾರ ರಾಮ್‌ದೇವ್ ವಿರುದ್ಧ ಯಾವುದೇ ಕಠಿಣ ಕ್ರಮವನ್ನು ತೆಗೆದುಕೊಂಡಿಲ್ಲ. ಬದಲಿಗೆ ಪತಂಜಲಿ ರಿಸರ್ಚ್ ಟ್ರಸ್ಟ್‌ನ್ನು ಒಂದು ಸಂಶೋಧನಾ ಸಂಸ್ಥೆ ಎಂದು ಪರಿಗಣಿಸಿ, ಅದಕ್ಕೆ ಐದು ವರ್ಷಗಳ ತೆರಿಗೆ ವಿನಾಯಿತಿಯನ್ನು ಮಂಜೂರುಗೊಳಿಸಿತು. ಆರಂಭದಲ್ಲಿ ಲಸಿಕೆಗೆ ರಾಜ್ಯಗಳು ಪ್ರತ್ಯೇಕ ಹಣ ಪಾವತಿ ಮಾಡಬೇಕು ಎಂಬ ನಿಯಮವನ್ನು ವಿಧಿಸಿ, ರಾಜ್ಯ ಸರಕಾರಗಳನ್ನು ಇಕ್ಕಟ್ಟಿಗೆ ಸಿಲುಕಿಸಿತು. ಅಷ್ಟು ದೊಡ್ಡ ಮೊತ್ತವನ್ನು ಪಾವತಿಸುವಲ್ಲಿ ರಾಜ್ಯ ಸರಕಾರಗಳು ಅಸಹಾಯಕವಾಗಿದ್ದವು.

ಅಷ್ಟೇ ಅಲ್ಲ, ಹಾಗೆ ಪಾವತಿಸಿ ಪಡೆದ ಲಸಿಕೆಯನ್ನು ಜನರಿಗೆ ಉಚಿತವಾಗಿ ಹಂಚುವ ಶಕ್ತಿ ರಾಜ್ಯಗಳಿಗಿರಲಿಲ್ಲ. ತಳಸ್ತರದ ಜನಸಾಮಾನ್ಯರಿಗೂ ಲಸಿಕೆ ತಲುಪದೆ ಕೊರೋನವನ್ನು ಪೂರ್ಣ ಪ್ರಮಾಣದಲ್ಲಿ ಎದುರಿಸಲು ಸಾಧ್ಯವೂ ಇರಲಿಲ್ಲ. ಪ್ರಧಾನಿಯ ಕೊರೋನ ಪರಿಹಾರ ನಿಧಿಯನ್ನು ಬಳಸಿಕೊಂಡು ತಕ್ಷಣ ದೇಶಾದ್ಯಂತ ಉಚಿತವಾಗಿ ಲಸಿಕೆ ಹಂಚಬೇಕಾಗಿದ್ದುದು ಪ್ರಧಾನಿಯ ಕರ್ತವ್ಯವಾಗಿತ್ತು. ಎಲ್ಲ ರಾಜ್ಯಗಳು ‘ಉಚಿತ ಲಸಿಕೆ ಒದಗಿಸಿ’ ಎಂದು ಒಕ್ಕೊರಲಲ್ಲಿ ಒತ್ತಾಯ ಮಾಡಿದವು. ಯಾವಾಗ ನ್ಯಾಯಾಲಯ ಸರಕಾರವನ್ನು ತರಾಟೆಗೆ ತೆಗೆದುಕೊಂಡಿತೋ, ಆ ಬಳಿಕವಷ್ಟೇ ಎಲ್ಲರಿಗೂ ಉಚಿತ ಲಸಿಕೆ ಎಂದು ಘೋಷಿಸಿತು. ಇದೇ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಮಾರಾಟ ಮಾಡುವುದಕ್ಕೂ ಸರಕಾರದಿಂದ ಅನುಮತಿ ದೊರಕಿತು. ಕಾಳದಂಧೆಯಲ್ಲಿ ಲಸಿಕೆಗಳು ವಿತರಣೆಯಾಗತೊಡಗಿದವು. ಖಾಸಗಿ ಆಸ್ಪತ್ರೆಗಳು ಲಸಿಕೆಗಳನ್ನು ದಾಸ್ತಾನು ಮಾಡಿಟ್ಟಿರುವುದು ಬೆಳಕಿಗೆ ಬಂದವು. ಇದೇ ಸಂದರ್ಭದಲ್ಲಿ ನಕಲಿ ಲಸಿಕೆ ಮಾಫಿಯಾ ಜಾಲಗಳು ಹುಟ್ಟಿಕೊಂಡವು. ಪರಿಣಾಮವಾಗಿ ಜನರು ಲಸಿಕೆ ತೆಗೆದುಕೊಳ್ಳುವುದರ ಬಗ್ಗೆ ಭೀತಿ ಪಡತೊಡಗಿದರು. ಇಂದಿಗೂ ಆ ಭೀತಿಯನ್ನು ನಿವಾರಿಸುವುದಕ್ಕೆ ಸರಕಾರಕ್ಕೆ ಸಾಧ್ಯವಾಗಿಲ್ಲ.

   ಮಧ್ಯಪ್ರದೇಶದಲ್ಲಿ ಒಂದೇ ದಿನ ದಾಖಲೆಯ ಅಭಿಯಾನ ನಡೆಸಿದ ಕೇಂದ್ರ ಸರಕಾರ ಆ ಮೂಲಕವೇ ನಗೆಪಾಟಲಿಗೀಡಾಯಿತು. ಅಂಕಿಅಂಶಗಳಲ್ಲಿ ನಡೆದ ಭಾರೀ ಪ್ರಮಾಣದ ವಂಚನೆಗಳು ಮಾಧ್ಯಮಗಳಲ್ಲಿ ಬಹಿರಂಗವಾದವು. ಇದೇ ಸಂದರ್ಭದಲ್ಲಿ, ಹಲವೆಡೆ ಜೀವಂತವೇ ಇಲ್ಲದ ವ್ಯಕ್ತಿಗಳೂ ಲಸಿಕೆ ಪಡೆದ ಬಗ್ಗೆ ದಾಖಲೆಗಳು ಸಿಕ್ಕಿದವು. ಒಟ್ಟಿನಲ್ಲಿ, ಲಸಿಕೆ ಕೊರತೆಗಳನ್ನು ಮುಚ್ಚಿ ಹಾಕಿ, ದೇಶಾದ್ಯಂತ ಯಶಸ್ವಿ ಲಸಿಕೆ ಅಭಿಯಾನ ನಡೆಯುತ್ತಿದೆ ಎಂದು ಬಿಂಬಿಸುವುದಕ್ಕೆ ಸರಕಾರ ಸಾಕಷ್ಟ್ಟು ಪ್ರಯತ್ನವನ್ನು ಮಾಡಿತು. ಎಲ್ಲವೂ ವಿಫಲವಾದಾಗ, ರಾಜ್ಯಗಳನ್ನು ಹೊಣೆ ಮಾಡಲು ಮುಂದಾಗಿದೆ. ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳು ಲಸಿಕೆಗಳಿಗಾಗಿ ಈಗಾಗಲೇ ದೊಡ್ಡ ಪ್ರಮಾಣದಲ್ಲಿ ಬೇಡಿಕೆಯಿಟ್ಟಿದೆಯಾದರೂ ಅವುಗಳನ್ನು ಪೂರೈಸುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ. 11 ಲಕ್ಷ ಮಂದಿಗೆ ಲಸಿಕೆ ನೀಡುವ ಸಾಧ್ಯತೆಗಳಿದ್ದರೂ, ಕೇಂದ್ರದಿಂದ ಲಸಿಕೆಗಳು ಸಿಗುತ್ತಿರುವುದು ಕೇವಲ 2 ಲಕ್ಷದಷ್ಟು ಜನರಿಗೆ ಮಾತ್ರ. ದಕ್ಷಿಣ ದಿಲ್ಲಿಯಲ್ಲಿನ 21 ಲಸಿಕೆ ಕೇಂದ್ರಗಳು ಲಸಿಕೆಯ ಕೊರತೆಯಿಂದಾಗಿ ಬಾಗಿಲೆಳೆದುಕೊಂಡಿವೆ. ಒಂದೆಡೆ ಲಸಿಕೆಯ ಕುರಿತಂತೆ ಜನರ ಅನುಮಾನಗಳು ನೀಗಿಲ್ಲ. ಇನ್ನೊಂದೆಡೆ ಲಸಿಕೆಯ ಬಗ್ಗೆ ಆಸಕ್ತರಾಗಿರುವ ಜನರಿಗೂ ಸರಿಯಾದ ಸಮಯಕ್ಕೆ ಲಸಿಕೆಗಳು ಸಿಗುತ್ತಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಲಸಿಕೆಗಾಗಿ ಆಸ್ಪತ್ರೆಯ ಬಾಗಿಲು ಕಾದು ಸುಸ್ತಾದ ಜನರು, ಲಸಿಕೆಯ ಆಸೆಯನ್ನೇ ಬಿಟ್ಟು, ತಮ್ಮ ತಮ್ಮ ಕೂಲಿ ಕೆಲಸಗಳಿಗೆ ಮರಳಿದ್ದಾರೆ. ಇವೆಲ್ಲವೂ, ಕೇಂದ್ರದ ವೈಫಲ್ಯವನ್ನು ಎತ್ತಿ ಹಿಡಿಯುತ್ತದೆ. ತನ್ನ ವೈಫಲ್ಯಗಳನ್ನು ಮುಚ್ಚಿ, ರಾಜ್ಯಗಳನ್ನು ಕಟಕಟೆಯಲ್ಲಿ ನಿಲ್ಲಿಸುತ್ತಿರುವ ಕೇಂದ್ರ ಸರಕಾರದ ವರ್ತನೆಯ ವಿರುದ್ಧ ಸಂಸದರೆಲ್ಲರೂ ಪಕ್ಷ ಭೇದ ಮರೆತು ಒಂದಾಗಬೇಕಾಗಿದೆ. ಇಲ್ಲವಾದರೆ, ಮತ್ತೊಮ್ಮೆ ಲಾಕ್‌ಡೌನ್ ಘೋಷಿಸಿ, ಅದಕ್ಕೆ ರಾಜ್ಯ ಸರಕಾರಗಳನ್ನು ಹೊಣೆ ಮಾಡುವ ಸಾಧ್ಯತೆಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News