ತಮಿಳುನಾಡಿಗೆ ಕಡಿಮೆ ಲಸಿಕೆ ಸಿಕ್ಕಿದೆ, ಕನಿಷ್ಠ ಒಂದು ಲಕ್ಷ ಡೋಸ್ ನೀಡಿ: ಪ್ರಧಾನಿಗೆ ಸ್ಟಾಲಿನ್ ಆಗ್ರಹ

Update: 2021-07-16 15:43 GMT

ಚೆನ್ನೈ,ಜು.16: ತಮಿಳುನಾಡಿಗೆ ಕೋವಿಡ್-19 ಲಸಿಕೆಯ ಹಂಚಿಕೆಯು ತುಲನಾತ್ಮಕವಾಗಿ ಕಡಿಮೆಯಾಗಿದೆ ಮತ್ತು ವಿಶೇಷ ಪ್ರಕರಣವೆಂದು ಪರಿಗಣಿಸಿ ಕೇಂದ್ರವು ಒಂದು ಲಕ್ಷ ಡೋಸ್ಗಳನ್ನು ಒದಗಿಸಬೇಕು ಎಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಆಗ್ರಹಿಸಿದರು.


ಕೊರೋನ ವೈರಸ್ ಸಾಂಕ್ರಾಮಿಕದ ನಿಯಂತ್ರಣಕ್ಕೆ ಸಂಬಂಧಿಸಿದ ಎಲ್ಲ ಸರಕುಗಳಿಗೆ ಜಿಎಸ್ಟಿಯಿಂದ ವಿನಾಯಿತಿಯನ್ನು ನೀಡಬೇಕು ಮತ್ತು ವೈರಸ್ ಹರಡುವಿಕೆಗೆ ಕಾರಣವಾಗಬಹುದಾದ ನೀಟ್ನಂತಹ ರಾಷ್ಟ್ರೀಯ ಮಟ್ಟದ ಪರೀಕ್ಷೆಗಳನ್ನು ನಡೆಸುವ ತನ್ನ ನಿರ್ಧಾರವನ್ನು ಕೇಂದ್ರವು ಮರುವಿಮರ್ಶಿಸಬೇಕು ಎಂದು ಸ್ಟಾಲಿನ್ ಮೋದಿಯವರನ್ನು ಕೋರಿಕೊಂಡರು.
 
ಮೋದಿಯವರು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ನಡೆಸಿದ ವರ್ಚುವಲ್ ಸಂವಾದದಲ್ಲಿ ಪಾಲ್ಗೊಂಡಿದ್ದ ಅವರು, ತನ್ನ ಸರಕಾರವು ಲಸಿಕೆ ವ್ಯರ್ಥವಾಗುವ ಪ್ರಮಾಣವನ್ನು ಶೇ.6ರಿಂದ ಶೂನ್ಯಕ್ಕಿಳಿಸಿದೆ ಮತ್ತು ಲಸಿಕೆ ಪಡೆಯುವುದರ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ. ಇಂತಹ ಅರಿವಿನ ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲಿ ಲಸಿಕೆಗೆ ಬೇಡಿಕೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. ಈ ಮಹತ್ವದ ವಿಷಯದಲ್ಲಿ ನಿಮ್ಮ ಬೆಂಬಲವನ್ನು ರಾಜ್ಯವು ನಿರೀಕ್ಷಿಸುತ್ತಿದೆ ಎಂದು ಹೇಳಿದರು.

ಕೊರೋನವೈರಸ್ ನ ಮೂರನೇ ಅಲೆಯು ಬರಲಿದೆ ಎಂದು ಹೇಳಲಾಗಿದೆ ಮತ್ತು ಅದನ್ನು ಎದುರಿಸಲು ನಾವು ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಇಂತಹ ಸಂಭಾವ್ಯತೆಯನ್ನು ನಿಭಾಯಿಸಲು ಕೇಂದ್ರವು ರಾಜ್ಯಗಳಿಗೆ ಹೆಚ್ಚಿನ ನೆರವು ನೀಡಬೇಕು ಎಂದೂ ಸ್ಟಾಲಿನ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News