ಭಾರತದಲ್ಲಿ ಡಿಟಿಪಿ ಪ್ರಥಮ ಡೋಸ್ ಲಸಿಕೆ ವಂಚಿತ ಮಕ್ಕಳ ಸಂಖ್ಯೆ 3 ಮಿಲಿಯನ್ ಗೂ ಅಧಿಕ: ವಿಶ್ವ ಆರೋಗ್ಯ ಸಂಸ್ಥೆ

Update: 2021-07-16 17:49 GMT

ವಿಶ್ವಸಂಸ್ಥೆ, ಜು.16: ಭಾರತದಲ್ಲಿ 2020ರಲ್ಲಿ 3 ಮಿಲಿಯನ್ಗೂ ಅಧಿಕ ಮಕ್ಕಳು ಡಿಟಿಪಿ ಮೊದಲ ಡೋಸ್ ಲಸಿಕೆ ಪಡೆಯುವುದರಿಂದ ವಂಚಿತರಾಗಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಮಾರಕ ಸೋಂಕು ರೋಗಗಳಾದ ಡಿಫ್ತೀರಿಯಾ- ಟಿಟನಸ್-ಪೆರ್ಟುಸಿಸ್(ಗಂಟಲು ಮಾರಿ-ಧನುರ್ವಾತ-ನಾಯಿಕೆಮ್ಮು ರೋಗ)ದ ವಿರುದ್ಧ ವಿಶ್ವದಾದ್ಯಂತ ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದೆ. ‌

2019ರಲ್ಲಿ ಜಾಗತಿಕವಾಗಿ ಲಸಿಕೆಯ ಪ್ರಥಮ ಡೋಸ್ ಪಡೆಯುವುದರಿಂದ ವಂಚಿತರಾದ ಮಕ್ಕಳ ಸಂಖ್ಯೆ 3.5 ಮಿಲಿಯ ಹೆಚ್ಚಿದ್ದರೆ ದಡಾರ ರೋಗದ ವಿರುದ್ಧದ ಪ್ರಥಮ ಡೋಸ್ ಲಸಿಕೆ ವಂಚಿತ ಮಕ್ಕಳ ಸಂಖ್ಯೆ 3 ಮಿಲಿಯ ಹೆಚ್ಚಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. 2019ರಲ್ಲಿ ಭಾರತದ 1,403,000 ಮಕ್ಕಳು ಡಿಟಿಪಿ ಪ್ರಥಮ ಡೋಸ್ ಲಸಿಕೆ ಪಡೆದಿಲ್ಲ, ಆದರೆ ಈ ಸಂಖ್ಯೆ 2020ರಲ್ಲಿ 3,038,000ಗೆ ಏರಿಕೆಯಾಗಿದೆ. ಮಧ್ಯಮ ಆದಾಯದ ದೇಶಗಳಲ್ಲಿ ಅಸುರಕ್ಷಿತ ಮಕ್ಕಳ ಪ್ರಮಾಣ ಹೆಚ್ಚುತ್ತಿರುವುದು ಈ ಅಂಕಿಅಂಶದಲ್ಲಿ ವ್ಯಕ್ತವಾಗುತ್ತದೆ. 

ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಈ ಪ್ರಮಾಣ ಹೆಚ್ಚುತ್ತಿದ್ದು ಡಿಟಿಪಿ 3 ಡೋಸ್ ಪಡೆದ ಮಕ್ಕಳ ಪ್ರಮಾಣ 91%ದಿಂದ 85%ಕ್ಕೆ ಇಳಿದಿದೆ. ವಿಶ್ವದಾದ್ಯಂತ ಕೊರೋನ ಸೋಂಕಿನ ಸಮಸ್ಯೆ ಮಕ್ಕಳಿಗೆ ಪ್ರತಿರೋಧಕ ಶಕ್ತಿ ನೀಡುವ ಲಸಿಕೀಕರಣ ಪ್ರಕ್ರಿಯೆಗೆ ತೀವ್ರ ತೊಡಕಾಗಿದ್ದು 2020ರಲ್ಲಿ ವಿಶ್ವದಾದ್ಯಂತ ಸುಮಾರು 23 ಮಿಲಿಯನ್ ಮಕ್ಕಳು ಪ್ರಾಥಮಿಕ ಲಸಿಕೀಕರಣದಿಂದ ವಂಚಿತರಾಗಿದ್ದಾರೆ. ಇದರಲ್ಲಿ ಸುಮಾರು 17 ಮಿಲಿಯ ಮಕ್ಕಳು ಒಂದೂ ಡೋಸ್ ಲಸಿಕೆ ಪಡೆದಿಲ್ಲ. 

ಹಲವು ದೇಶಗಳು ಲಭ್ಯ ಸಂಪನ್ಮೂಲವನ್ನು ಕೊರೋನ ಸೋಂಕಿಗೆ ಸಂಬಂಧಿಸಿದ ಚಿಕಿತ್ಸೆಗೆ ಬಳಸಿರುವುದರಿಂದ ಮಕ್ಕಳ ಲಸಿಕೀಕರಣ ಪ್ರಕ್ರಿಯೆಗೆ ಗಮನಾರ್ಹ ತಡೆಯಾಗಿದೆ. ಇನ್ನು ಕೆಲ ದೇಶಗಳಲ್ಲಿ ವೈದ್ಯಕೀಯ ಕೇಂದ್ರಗಳನ್ನು ಮುಚ್ಚಲಾಗಿದೆ ಅಥವಾ ಕಾರ್ಯಾವಧಿ ಕಡಿಮೆಗೊಳಿಸಿರುವುದು ಸಮಸ್ಯೆಯಾಗಿದೆ. ಲಾಕ್ಡೌನ್ ನಿರ್ಬಂಧದಿಂದ ಜನತೆ ಆರೋಗ್ಯ ಕೇಂದ್ರ ತಲುಪಲು ಅಡ್ಡಿಯಾಗಿರುವುದು ಅಥವಾ ಸೋಂಕು ಹರಡುವ ಭೀತಿಯಿಂದ ಆರೋಗ್ಯ ಕೇಂದ್ರದತ್ತ ಹೋಗಲೂ ಹಿಂಜರಿಯುವುದು ಸಮಸ್ಯೆಯ ಇನ್ನೊಂದು ಮುಖವಾಗಿದೆ. 

ಸಂಘರ್ಷದಿಂದ ಪರಿಣಾಮಕ್ಕೆ ಒಳಗಾಗಿರುವ ಸಮುದಾಯದವರ ಮಕ್ಕಳು ಅಥವಾ ಕುಗ್ರಾಮಗಳಲ್ಲಿ ನೆಲೆಸಿರುವ ಮಕ್ಕಳು, ಕೊಳೆಗೇರಿ ನಿವಾಸಿಗಳ ಮಕ್ಕಳಿಗೆ ಆರೋಗ್ಯ ಮತ್ತು ಸಾಮಾಜಿಕ ಸೌಲಭ್ಯಗಳ ಪ್ರಯೋಜನ ಕನಿಷ್ಟ ಮಟ್ಟದಲ್ಲಿ ದೊರಕುತ್ತದೆ. ಕೋವಿಡ್-19 ಲಸಿಕೀಕರಣದಲ್ಲಿ ಉತ್ತಮ ಸಾಧನೆ ತೋರಿರುವ ದೇಶಗಳಲ್ಲೂ, ಮಕ್ಕಳ ಲಸಿಕೀಕರಣ ಪ್ರಕ್ರಿಯೆ ಮಂದಗತಿಯಲ್ಲಿ ಸಾಗಿರುವುದರಿಂದ ಮಕ್ಕಳು ದಡಾರ, ಪೋಲಿಯೊ, ಮಿದುಳಿನ ರೋಗ ಮುಂತಾದ ಮಾರಕ, ಆದರೆ ತಡೆಯಬಹುದಾದ ರೋಗಗಳಿಗೆ ಬಲಿಯಾಗುವ ಅಪಾಯ ಹೆಚ್ಚಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ನಿರ್ದೇಶಕ ಡಾ. ಟೆಡ್ರೋಸ್ ಅಧ್ನಾಮ್ ಘೆಬ್ರೆಯೆಸುಸ್ ಹೇಳಿದ್ದಾರೆ. 

ಹಲವು ರೋಗಗಳು ಉಲ್ಬಣಗೊಳ್ಳುವುದು, ಕೊರೋನ ಸೋಂಕಿನ ವಿರುದ್ಧದ ಹೋರಾಟದಲ್ಲಿ ಇನ್ನೂ ನಿರತರಾಗಿರುವ ಸಮುದಾಯ ಮತ್ತು ಆರೋಗ್ಯವ್ಯವಸ್ಥೆಗೆ ಮಾರಕವಾಗಬಲ್ಲದು. ಆದ್ದರಿಂದ ಮಕ್ಕಳ ಲಸಿಕೀಕರಣ ವ್ಯವಸ್ಥೆಗೆ ಹೆಚ್ಚುವರಿ ಅನುದಾನ ವಿನಿಯೋಗಿಸಿ ಮಕ್ಕಳನ್ನು ರಕ್ಷಿಸಬೇಕಾಗಿದೆ ಎಂದವರು ಸಲಹೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News