ಸಿರಿಯ: 4ನೇ ಅವಧಿಗೆ ಅಧ್ಯಕ್ಷರಾಗಿ ಬಷರ್ ಅಸಾದ್ ಪ್ರಮಾಣ ವಚನ

Update: 2021-07-17 16:30 GMT

ಡಮಾಸ್ಕಸ್, ಜು.18: ಯುದ್ಧದಿಂದ ಜರ್ಝರಿತವಾಗಿರುವ ಸಿರಿಯಾದ ಅಧ್ಯಕ್ಷರಾಗಿ ಬಷರ್ ಅಸಾದ್ 4ನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ ಎಂದು ವರದಿಯಾಗಿದೆ. ‌

ಸಿರಿಯದಲ್ಲಿ ಅಧ್ಯಕ್ಷರ ಕಾರ್ಯಾವಧಿ 7 ವರ್ಷದ್ದಾಗಿದೆ. ಶನಿವಾರ ಅಧ್ಯಕ್ಷರ ಭವನದಲ್ಲಿ ನಡೆದ ಪ್ರಮಾಣವಚನ ಸಮಾರಂಭದಲ್ಲಿ ಧಾರ್ಮಿಕ ಮುಖಂಡರು, ಸಂಸತ್ತಿನ ಸದಸ್ಯರು, ರಾಜಕೀಯ ಮುಖಂಡರು ಹಾಗೂ ಸೇನಾಧಿಕಾರಿಗಳು ಉಪಸ್ಥಿತರಿದ್ದರು. ತನ್ನ ತಂದೆ ಹಫೀಝ್ ನಿಧನದ ನಂತರ, 2000ದಿಂದ ಸಿರಿಯಾದ ಅಧ್ಯಕ್ಷರಾಗಿರುವ ಅಸಾದ್ ಮೇ ತಿಂಗಳಲ್ಲಿ ನಡೆದ ಚುನಾವಣೆಯಲ್ಲಿ 95.1% ಮತ ಪಡೆದು ಮರು ಆಯ್ಕೆಗೊಂಡಿದ್ದರು. ಆದರೆ ಈ ಚುನಾವಣೆ ಅಕ್ರಮ ಮತ್ತು ಕಾನೂನು ಬಾಹಿರ ಎಂದು ಪಾಶ್ಚಿಮಾತ್ಯ ದೇಶಗಳು ಹಾಗೂ ಸಿರಿಯಾದ ವಿಪಕ್ಷಗಳು ಹೇಳಿವೆ. 

ಒಟ್ಟು ಚಲಾವಣೆಯಾದ ಮತಗಳ ಪ್ರಮಾಣ 78.6% ಮಾತ್ರವಾಗಿದೆ ಮತ್ತು ಸ್ವತಂತ್ರ ವೀಕ್ಷಕರು ಚುನಾವಣೆಯ ಮೇಲುಸ್ತುವಾರಿ ವಹಿಸಿಲ್ಲ ಎಂದು ಅಮೆರಿಕ ಹಾಗೂ ಯುರೋಪ್ ದೇಶಗಳು ಆಕ್ಷೇಪಿಸಿವೆ. ಸಿರಿಯಾ ವಿರುದ್ಧ ಪಾಶ್ಚಿಮಾತ್ಯ ದೇಶಗಳು ನಿರ್ಬಂಧ ವಿಧಿಸಿದ್ದರೂ ಇರಾನ್ ಹಾಗೂ ರಶ್ಯಾ ಅಸಾದ್ ಬೆಂಬಲಕ್ಕೆ ನಿಂತಿವೆ. ಸಿರಿಯಾ ಬಿಕ್ಕಟ್ಟನ್ನು ಪರಿಹರಿಸಲು ವಿಶ್ವಸಂಸ್ಥೆ ನಡೆಸಿದ ಪ್ರಯತ್ನ ಇದುವರೆಗೆ ಫಲಿಸಿಲ್ಲ. 

10 ವರ್ಷದಿಂದ ನಡೆಯುತ್ತಿರುವ ಯುದ್ಧದಿಂದ ಸಿರಿಯಾದ ಆರ್ಥಿಕತೆ ತೀವ್ರ ಕುಸಿದಿದ್ದು, ಅಲ್ಲಿನ 80%ಕ್ಕೂ ಅಧಿಕ ಜನತೆ ಬಡತನ ರೇಖೆಗಿಂತ ಕೆಳಗಿನವರು ಎಂದು ವಿಶ್ವಸಂಸ್ಥೆ ಅಂದಾಜಿಸಿದೆ. ದೇಶದ ಒಂದು ಭಾಗ ಸರಕಾರದ ನಿಯಂತ್ರಣದಲ್ಲಿಲ್ಲ. ವಿದೇಶದ ಸೇನೆ ಹಾಗೂ ಬಂಡುಗೋರರ ನಡುವೆ ದೇಶದ ವಿವಿಧೆಡೆ ಸಂಘರ್ಷ ಮುಂದುವರಿದಿದೆ. ಯುದ್ಧ ಆರಂಭವಾಗುವುದಕ್ಕೂ ಮುಂಚೆ ಇದ್ದ ದೇಶದ ಜನಸಂಖ್ಯೆಯ ಸುಮಾರು ಅರ್ಧಾಂಶದಷ್ಟು ಜನ ನಿರಾಶ್ರಿತರಾಗಿದ್ದಾರೆ ಅಥವಾ ನೆರೆಯ ದೇಶಗಳಿಗೆ ಪಲಾಯನ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News