ಉತ್ತರ ಪ್ರದೇಶ ಚುನಾವಣೆ: ಮೈತ್ರಿಗೆ ಕಾಂಗ್ರೆಸ್ ಮುಕ್ತ ಮನಸ್ಸು ಹೊಂದಿದೆ; ಪ್ರಿಯಾಂಕಾ ಗಾಂಧಿ

Update: 2021-07-18 16:35 GMT

ಲಖ್ನೋ,ಜು.18: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗಳಿಗೆ ಮುನ್ನ ಇತರ ರಾಜಕೀಯ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ತನ್ನ ಪಕ್ಷವು ಮುಕ್ತ ಮನಸ್ಸು ಹೊಂದಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ರವಿವಾರ ಇಲ್ಲಿ ಹೇಳಿದರು.

ಮೈತ್ರಿಯ ವಿಷಯದಲ್ಲಿ ನಾವು ವಿಮುಖರಾಗಿಲ್ಲವಾದರೂ ಈಗಲೇ ಏನನ್ನಾದರೂ ಹೇಳುವುದು ಅವಸರವಾಗುತ್ತದೆ ಎಂದ ಅವರು,ಸಂಭಾವ್ಯ ಮೈತ್ರಿಯ ಕುರಿತು ಸುದ್ದಿಗಾರರ ನಿರ್ದಿಷ್ಟ ಪ್ರಶ್ನೆಗೆ ಪಕ್ಷವು ತನ್ನನ್ನು ದುರ್ಬಲಗೊಳಿಸುವ ಯಾವುದೇ ನಿರ್ಧಾರವನ್ನು ಕೈಗೊಳ್ಳುವುದಿಲ್ಲ ಎಂದು ಉತ್ತರಿಸಿದರು.

ರಾಜ್ಯದಲ್ಲಿ ಬಿಜೆಪಿಯನ್ನು ಸೋಲಿಸುವುದು ಕಾಂಗ್ರೆಸ್ನ ಗುರಿಯಾಗಿದೆ ಮತ್ತು ಅದಕ್ಕಾಗಿ ಏನನ್ನೂ ಮಾಡಲು ಸಿದ್ಧವಿದೆ ಎಂದ ಅವರು,ಸಂದರ್ಭಗಳಿಗೆ ಅನುಗುಣವಾಗಿ ಕಾಂಗ್ರೆಸ್ ತನ್ನ ಕಾರ್ಯತಂತ್ರವನ್ನು ಅಂತಿಮಗೊಳಿಸಲಿದೆ ಎಂದು ತಿಳಿಸಿದರು.

ತನ್ನನ್ನು ರಾಜಕೀಯ ಪ್ರವಾಸಿ ಎಂದು ಕರೆದಿದ್ದಕ್ಕಾಗಿ ಬಿಜೆಪಿಗೆ ಪ್ರಿಯಾಂಕಾ ಈ ಸಂದರ್ಭ ತಿರುಗೇಟು ನೀಡಿದರು.

ರಾಜಕೀಯ ಪ್ರವಾಸಿಗಳು ರಾಜಕೀಯವನ್ನು ಪ್ರವಾಸೋದ್ಯಮದಂತೆ ಕಾಣುತ್ತಾರೆ. ಅವರು ಬಿಜೆಪಿಯಂತೆ ಸೇವೆ ಸಲ್ಲಿಸಲು ಅಧಿಕಾರಕ್ಕೆ ಬರುವುದಿಲ್ಲ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಯಾರನ್ನೂ ಹೆಸರಿಸದೆ ಶುಕ್ರವಾರ ಕುಟುಕಿದ್ದರು. ಅದೇ ದಿನ ಪ್ರಿಯಾಂಕಾ ತನ್ನ ಮೂರು ದಿನಗಳ ಚುನಾವಣಾ ಸಿದ್ಧತೆ ಭೇಟಿಗಾಗಿ ಲಕ್ನೋ ತಲುಪಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಪ್ರಿಯಾಂಕಾ, "ನಾನು ಉ.ಪ್ರದೇಶಕ್ಕೆ ನಿಯಮಿತವಾಗಿ ಭೇಟಿ ನೀಡುತ್ತಿದ್ದೇನೆ. ಇದು ನಾನು ಮತ್ತು ನನ್ನ ಸೋದರ ರಾಹುಲ್ ಗಾಂಧಿ ಗಂಭೀರವಾಗಿ ಪರಿಗಣಿಸಬೇಕಾದ ರಾಜಕಾರಣಿಗಳಲ್ಲ ಎಂದು ಬಿಂಬಿಸಲು ಬಿಜೆಪಿಯ ಅಪಪ್ರಚಾರವಾಗಿದೆ. ನಾವು ಇದಕ್ಕೆಲ್ಲ ಬಗ್ಗುವುದಿಲ್ಲ" ಎಂದು ಹೇಳಿದರು. ಕಾಂಗ್ರೆಸ್,ವಿಶೇಷವಾಗಿ ಕಳೆದ 18 ತಿಂಗಳುಗಳಲ್ಲಿ ಜನಜೀವನದ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡುವ ಪ್ರತಿಯೊಂದೂ ವಿಷಯವನ್ನೆತ್ತಿದೆ ಎಂದರು.

ಕಾಂಗ್ರೆಸ್ ಕಳೆದ 32 ವರ್ಷಗಳಿಂದ ರಾಜ್ಯದಲ್ಲಿ ಅಧಿಕಾರ ವಂಚಿತವಾಗಿದೆ ಎನ್ನುವುದನ್ನು ಒಪ್ಪಿಕೊಂಡ ಅವರು,ಪಕ್ಷ ಸಂಘಟನೆಗಾಗಿ ಕಾಂಗ್ರೆಸ್ ಶ್ರಮಿಸುತ್ತಿದೆ. ಗ್ರಾಮ ಪಂಚಾಯತ್ ಮಟ್ಟದವರೆಗೂ ಕಾರ್ಯಕರ್ತರನ್ನು ಹೊಂದಲು ನಮಗೆ ಸಾಧ್ಯವಾಗಿದೆ ಮತ್ತು ಪಕ್ಷವು ತನ್ನ ಸಂಪೂರ್ಣ ಬಲದೊಂದಿಗೆ ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News