ಅಧಿಕ ಭದ್ರತೆ ಪಡೆಯಲು ಉಗ್ರ ದಾಳಿಯ ನಾಟಕ: ಇಬ್ಬರು ಬಿಜೆಪಿ ಕಾರ್ಯಕರ್ತರ ಬಂಧನ

Update: 2021-07-20 03:44 GMT

ಶ್ರೀನಗರ, ಜು.20: ತಮ್ಮ ಮೇಲೆ ಉಗ್ರರ ದಾಳಿ ನಡೆದಿದೆ ಎಂದು ಬಿಂಬಿಸಿ ಅಧಿಕ ಭದ್ರತೆ ಪಡೆಯುವ ಹಾಗೂ ಈ ಮೂಲಕ ಪಕ್ಷದ ಹಿರಿಯ ಮುಖಂಡರ ಗಮನ ಸೆಳೆಯುವ ತಂತ್ರಕ್ಕೆ ಮೊರೆ ಹೋದ ಆರೋಪದಲ್ಲಿ ಇಬ್ಬರು ಬಿಜೆಪಿ ಕಾರ್ಯಕರ್ತರು ಹಾಗೂ ಅವರ ಭದ್ರತೆಗೆ ಇದ್ದ ಇಬ್ಬರು ಪೊಲೀಸರನ್ನು ಬಂಧಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಈ ನಕಲಿ ಉಗ್ರದಾಳಿಯ ಘಟನೆ ನಡೆದಿತ್ತು. ಇಶ್ಫಾಕ್ ಅಹ್ಮದ್ ಹಾಗೂ ಬಶಾರತ್ ಅಹ್ಮದ್ ಮತ್ತು ಅವರ ಇಬ್ಬರು ವೈಯಕ್ತಿಯ ಭದ್ರತಾ ಅಧಿಕಾರಿಗಳನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಏಳು ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಆಗಂತುಕ ಬಂದೂಕುಧಾರಿಗಳು ತಮ್ಮ ಮೇಲೆ ಗುಂಡು ಹಾರಿಸಿದ್ದು, ಘಟನೆಯಲ್ಲಿ ಇಶ್ಫಾಕ್ ಅಹ್ಮದ್ ಕೈಗೆ ಗಾಯವಾಗಿತ್ತು ಎಂದು ಶುಕ್ರವಾರ ಹೇಳಿಕೊಂಡಿದ್ದರು. ಆರಂಭಿಕ ತನಿಖೆ ನಡೆಸಿದ ಬಳಿಕ ಪೊಲೀಸರು, ಅಂಗರಕ್ಷಕರಿಂದ ಆಕಸ್ಮಿಕವಾಗಿ ಹಾರಿದ ಗುಂಡಿನಿಂದ ಬಿಜೆಪಿ ಕಾರ್ಯಕರ್ತನ ಕೈಗೆ ಸಣ್ಣ ಪುಟ್ಟಗಾಯಗಳಾಗಿವೆ ಎಂದು ಹೇಳಿಕೆ ನೀಡಿದ್ದರು.

"ವೈಯಕ್ತಿಕ ಭದ್ರತಾ ಅಧಿಕಾರಿಯ ಬಂದೂಕಿನಿಂದ ಆಕಸ್ಮಿಕವಾಗಿ ಕಾರಿನಲ್ಲಿ ಸಿಡಿದ ಗುಂಡಿನಿಂದಾಗಿ ಬಿಜೆಪಿ ಕಾರ್ಯಕರ್ತ ಇಶ್ಫಾಕ್ ಗಾಯಗೊಂಡಿದ್ದಾರೆ. ಮತ್ತೊಬ್ಬ ಪಿಎಸ್‌ಓ ಭಯದಿಂದ ಗುಂಡು ಹಾರಿಸಿದ್ದಾನೆ. ಇಶ್ಫಾಕ್ ಕೈಗೆ ಆಗ ಸಣ್ಣಪುಟ್ಟ ಗಾಯಗಳಾಗಿವೆ. ಇದು ಉಗ್ರರ ದಾಳಿ ಎಂಬ ವದಂತಿಯನ್ನು ಜನ ಹರಡಬಾರದು" ಎಂದು ಕುಪ್ವಾರ ಪೊಲೀಸರು ಟ್ವೀಟ್ ಮಾಡಿದ್ದರು.

ಆದರೆ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿದಾಗ ಇದು, ಯೋಜಿತ ನಾಟಕ ಎನ್ನುವುದು ದೃಢಪಟ್ಟಿದೆ. ಇಶ್ಫಾಕ್ ಅಹ್ಮದ್ ಬಿಜೆಪಿಯ ಜಿಲ್ಲಾ ಮುಖ್ಯಸ್ಥ ಮುಹಮ್ಮದ್ ಶಫಿ ಮೀರ್ ಅವರ ಪುತ್ರ. ಘಟನೆ ಹಿನ್ನೆಲೆಯಲ್ಲಿ ಮೀರ್ ಹಾಗೂ ಅವರ ಮಗ ಬಶಾರತ್ ಅಹ್ಮದ್ ಅವರನ್ನು ಅಮಾನತು ಮಾಡಿದೆ.

ಕಳೆದ ಮೇ ತಿಂಗಳಲ್ಲಿ ಬಿಜೆಪಿಯ ಇಬ್ಬರು ಪಂಚಾಯತ್ ಸದಸ್ಯರನ್ನು ಹಣ ವಸೂಲಿ ದಂಧೆಯಲ್ಲಿ ಬಂಧಿಸಲಾಗಿತ್ತು. ಉಗ್ರರ ಹೆಸರಿನಲ್ಲಿ ಇವರು ವ್ಯಾಪಾರಿಗಳು ಮತ್ತು ಸೇಬು ಡೀಲರ್‌ಗಳಿಂದ ಹಣ ವಸೂಲಿ ಮಾಡುತ್ತಿದ್ದರು ಎಂದು ಆಪಾದಿಸಲಾಗಿತ್ತು. ಕಳೆದ ವರ್ಷ ಬಿಜೆಪಿ ಮುಖಂಡ ತಾರಿಕ್ ಅಹ್ಮದ್ ಮೀರ್ ಎಂಬಾತನನ್ನು ಉಗ್ರರ ಜತೆ ಸಂಪರ್ಕ ಹೊಂದಿದ್ದ ಆರೋಪದಲ್ಲಿ ಬಂಧಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News