ಮಾಜಿ ಸಿಜೆಐ ರಂಜನ್‌ ಗೊಗೊಯಿ ವಿರುದ್ಧ ಲೈಂಗಿಕ ಕಿರುಕುಳ ಆರೋಪಿಸಿದ್ದ ಮಹಿಳೆ ಕುಟುಂಬಸ್ಥರ ಫೋನ್‌ ನಲ್ಲೂ 'ಪೆಗಾಸಸ್‌'

Update: 2021-07-20 05:49 GMT

ಹೊಸದಿಲ್ಲಿ: ಸುಪ್ರೀಂ ಕೋರ್ಟಿನ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದ ಸುಪ್ರೀಂ ಕೋರ್ಟಿನ ಮಹಿಳಾ ಸಿಬ್ಬಂದಿಗೆ ಸೇರಿದ್ದ ಮೂರು ದೂರವಾಣಿ ಸಂಖ್ಯೆಗಳು ಕೂಡ ಪೆಗಾಸಸ್ ಸ್ಪೈವೇರ್ ಬಳಸಿ ಅಪರಿಚಿತ ಭಾರತೀಯ ಏಜನ್ಸಿಯೊಂದು ಬೇಹುಗಾರಿಕೆ ನಡೆಸಲು ಆಯ್ಕೆ ಮಾಡಲು  ಗುರುತಿಸಿದ್ದ ಸಂಖ್ಯೆಗಳಲ್ಲಿ ಸೇರಿದ್ದವು ಎಂದು Thewire.in ವರದಿ ಮಾಡಿದೆ.

ಆಗ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ಗೊಗೊಯಿ ಅವರ ಪ್ರಯತ್ನಗಳಿಗೆ ಆಕೆ `ವಿರೋಧಿಸಿದ' ವಾರಗಳ ನಂತರ ಡಿಸೆಂಬರ್ 2018ರಲ್ಲಿ ಆಕೆಯನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು.

ಮಹಿಳಾ ಸಿಬ್ಬಂದಿಯ ಪತಿ, ಆಕೆಯ ಇಬ್ಬರು ಸೋದರರ ಮೊಬೈಲ್ ಸಂಖ್ಯೆಗಳೂ ಸೇರಿದಂತೆ ಆಕೆಗೆ ಸಂಬಂಧಿಸಿದ ಎಂಟು ದೂರವಾಣಿ ಸಂಖ್ಯೆಗಳನ್ನೂ ಬೇಹುಗಾರಿಕೆ ನಡೆಸಲು ಆಕೆ ಸಿಜೆಐ ವಿರುದ್ಧ ಆರೋಪಗಳನ್ನು ಹೊರಿಸಿದ ವಾರದಲ್ಲಿಯೇ ಗುರುತಿಸಲಾಗಿತ್ತು ಎಂದು ತಿಳಿದು ಬಂದಿದೆ.

ಮಹಿಳಾ ಸಿಬ್ಬಂದಿಗೆ ಸೇರಿದ ಮೂರು ಸಂಖ್ಯೆಗಳ ಪೈಕಿ ಎರಡನ್ನು ಆಕೆ ದೂರು ನೀಡಿದ ಕೆಲವೇ ದಿನಗಳಲ್ಲಿ ಆರಿಸಲಾಗಿದ್ದರೆ ಮೂರನೇ ಸಂಖ್ಯೆಯನ್ನು ವಿಚಕ್ಷಣೆಗೆ ಒಂದು ವಾರದ ನಂತರ ಸೇರಿಸಲಾಗಿತ್ತು ಎಂದು ತಿಳಿದು ಬಂದಿದೆ.

ಆಕೆ ಹಾಗೂ ಆಕೆಯ ಕುಟುಂಬಕ್ಕೆ ಸೇರಿದ 11 ಸಂಖ್ಯೆಗಳ ಮೇಲೆ ಹಲವಾರು ತಿಂಗಳುಗಳ ಕಾಲ ನಿಗಾ ಇರಿಸಲಾಗಿತ್ತೆಂದು ತಿಳಿದು ಬಂದಿದೆಯಾದರೂ ಅವರ ಫೋನ್‍ಗಳು ಪೆಗಾಸಸ್ ಸ್ಪೈವೇರ್‍ನಿಂದ ಬಾಧಿತವಾಗಿವೆಯೇ ಎಂದು ಈ ಹಂತದಲ್ಲಿ ದೃಢಪಡಿಸಲು ಸಾಧ್ಯವಿಲ್ಲ ಎಂದು ದಿ ವೈರ್ ವರದಿ ಹೇಳಿದೆ. ಮಹಿಳೆ ಯಾ ಆಕೆಯ ಕುಟುಂಬ ಸದಸ್ಯರು ಈ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News